ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ನೂರಾರು ವರ್ಷಗಳ ಇತಿಹಾಸವಿರುವ ಕೆರೆ ಇದೀಗ ಕಲುಷಿತ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 14, 2024 | 7:26 PM

ಬೆಂಗಳೂರು ಹೊರವಲಯ ಜಿಗಣಿ ಕೆರೆಗೆ ತ್ಯಾಜ್ಯ ನೀರು ಹಾಗೂ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ನೀರು ಸೇರಿ ಕೆರೆಯು ಸಂಪೂರ್ಣ ಮಲಿನಗೊಂಡಿದೆ. ಕೆರೆಯ ತುಂಬ ನೀರಿದ್ರು ಸಹ ಯಾವುದಕ್ಕೂ ಉಪಯೋಗಕ್ಕೆ ಬಾರದೆ ಜನರ ಹಾಗೂ ಪ್ರಾಣಿ ಪಕ್ಷಿಗಳ ಜೀವಕ್ಕೆ ಕಂಟಕವಾಗಿರುವ ಈ ಕೆರೆಯ ಸ್ಥಿತಿ ನಿಜಕ್ಕೂ ಶೋಚನೀಯ. ಗ್ರಾಮದ ಅಂತರ್ಜಾಲಕ್ಕೂ ಈ ಕಲುಷಿತ ನೀರು ಸೇರಿ ಜನರು ರೋಗರುಜಿನಗಳಿಗೆ ತುತ್ತಾಗಿ ಸಮಸ್ಯೆ ಎದುರಿಸುವಂತಾಗಿದೆ.

ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ನೂರಾರು ವರ್ಷಗಳ ಇತಿಹಾಸವಿರುವ ಕೆರೆ ಇದೀಗ ಕಲುಷಿತ
ಜಿಗಣಿ ಕೆರೆ
Follow us on

ಆನೇಕಲ್, ಜನವರಿ 14: ತ್ಯಾಜ್ಯ ನೀರು ಹಾಗೂ ಕಾರ್ಖಾನೆಗಳ ರಾಸಾಯನಿಕ ಕೆಮಿಕಲ್​ನಿಂದ ನೂರಾರು ವರ್ಷಗಳ ಇತಿಹಾಸವಿರುವ ಕೆರೆ ಇದೀಗ ಕಲುಷಿತವಾಗಿದೆ. ಬೆಂಗಳೂರು ಹೊರವಲಯದಲ್ಲಿರುವ ಜಿಗಣಿ ಕೆರೆ (Jigani Lake) ಸಂಪೂರ್ಣ ಕಲುಷಿತವಾಗಿದ್ದು, ಗೊಬ್ಬುನಾರುತ್ತಿದೆ. ಎಸ್ಟಿಪಿ ಪ್ಲಾಂಟ್ ನಿರ್ಮಾಣ ಮಾಡದೆ ತ್ಯಾಜ್ಯ ನೀರನ್ನು ನೇರವಾಗಿ ಕೆರೆಗೆ ಬಿಟ್ಟು ಅವಾಂತರ ಸೃಷ್ಟಿಸಲಾಗಿದೆ. ಕಲುಷಿತ ನೀರಿನಿಂದ ನೂರಾರು ಎಕರೆ ವಿಸ್ತೀರ್ಣವಿರುವ ಜಿಗಣಿ ಕೆರೆ ಹಾಳಾಗಿದೆ. ಕೆರೆಯೂ ಸಂಪೂರ್ಣ ಕಲುಷಿತಗೊಂಡು ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಾಲಕ್ಕೆ ಕುತ್ತು ಉಂಟಾಗಿದೆ.

ರೋಗ ರುಜಿನಗಳಿಗೆ ತುತ್ತಾಗುತ್ತಿರುವ ಗ್ರಾಮಸ್ಥರು

ಕೆರೆಯ ಸುತ್ತಮುತ್ತಲಿನ ಕಡೆ ಓಡಾಡಲು ಸಾಧ್ಯವಾಗದಷ್ಟು ದುರ್ವಾಸನೆ ಬರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಕಿನ್ ಇನ್ಫೆಕ್ಷನ್, ಅಲರ್ಜಿ, ಫುಡ್ ಇನ್ಫೆಕ್ಷನ್​ ಅಂತಾ ಹಲವು ರೋಗರುಜಿನಗಳಿಗೆ ತುತ್ತಾಗಿ ಗ್ರಾಮಸ್ಥರು ಆಸ್ಪತ್ರೆ ಸೇರುತ್ತಿದ್ದಾರೆ. ಕೆರೆಯ ನೀರು ಕಲುಷಿತವಾಗುತ್ತಿದ್ದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಪುರಸಭೆ ಹಾಗೂ ಮಾಲಿನ್ಯ ಮಂಡಲಿ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ.

ಇದನ್ನೂ ಓದಿ: 9 ತಿಂಗಳಲ್ಲಿ 380 ಮಕ್ಕಳ ಸಾವು; ಆತಂಕ ಹುಟ್ಟಿಸಿದೆ ಇಂದಿರಾಗಾಂಧಿ ಆಸ್ಪತ್ರೆ ವೈದ್ಯರ ವರದಿ

ತಾಲ್ಲೂಕಿನ ದೊಡ್ಡ ಕೆರೆಗಳ ಪೈಕಿ ಜಿಗಣಿ ಕೆರೆಯು ಒಂದಾಗಿದೆ. 260 ಎಕರೆ ವಿಸ್ತಿರ್ಣದಲ್ಲಿರುವ ಈ ಕೆರೆಯು ಜಿಗಣಿ, ಕೊಪ್ಪ, ಹರಪನಹಳ್ಳಿ, ಬಂಡೆನಲ್ಲಸಂದ್ರ, ಹುಲಿಮಂಗಲ ಗ್ರಾಮಗಳಿಗೆ ಹೊಂದಿಕೊಂಡಿದೆ. ಜಿಗಣಿ ಕೆರೆಗೆ ಎರಡು ಸಾವಿರ ಎಕರೆಗೂ ಹೆಚ್ಚಿನ ಅಚ್ಚುಕಟ್ಟು ಪ್ರದೇಶವಿತ್ತು. ಭತ್ತ, ತರಕಾರಿಗಳನ್ನು ಬೆಳೆಯುವ
ಕೇಂದ್ರವಾಗಿತ್ತು. ಆದರೆ ಈಗ ಅಚ್ಚುಕಟ್ಟು ಪ್ರದೇಶದಲ್ಲಿ ಮನೆಗಳು, ಕೈಗಾರಿಕೆಗಳು, ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಇತ್ತೀಚಿನ ದಿನಗಳಲ್ಲಿ ಕೈಗಾರಿಕೀರಣ ಹಾಗೂ ನಗರೀಕರಣದ ಪ್ರಭಾವದಿಂದ ಕೆರೆಗಳು ಇದ್ದು, ಇಲ್ಲದಂತಾಗಿವೆ. ಕೆರೆ ನೀರಿನಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ಕೆರೆಗಳು ದುರ್ನಾತ ಬೀರುತ್ತಿದ್ದು, ಜನರು ಸಮಸ್ಯೆ ಎದುರಿಸುವಂತಾಗಿದೆ.

ಪರಿಸರವೂ ಹಾಳು

ಜಿಗಣಿ ಕೆರೆಗೆ ಕೈಗಾರಿಕೆಗಳ ತ್ಯಾಜ್ಯ, ಗ್ರಾನೈಟ್‌ ಸ್ಲರಿ, ವಸತಿ ಪ್ರದೇಶಗಳ ಕೊಳಚೆ ನೀರು ನೇರವಾಗಿ ಕೆರೆಗೆ ಹರಿಯುತ್ತಿದೆ. ಇದರಿಂದಾಗಿ ಜಿಗಣಿ ಕೆರೆ ನೀರು ಕಲುಷಿತಗೊಂಡು ಗಬ್ಬುನಾರುತ್ತಿದ್ದು, ಈ ಕೆರೆ ನೀರನ್ನು ಸಹ ಮುಟ್ಟಲು ಜನರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಅಂರ್ಜಲವೂ ಕಲುಷಿತವಾಗೊಂಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಕೊಳವೆ ಬಾವಿಗಳಲ್ಲಿನ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ. ಕೆರೆಯು ಮಲಿನವಾಗಿರೋದ್ರಿಂದ ಪರಿಸರವೂ ಹಾಳಾಗಿದ್ದು, ಗ್ರಾಮಸ್ಥರು ಹಲವು ರೋಗರುಜಿನಗಳಿಗೆ ತುತ್ತಾಗುವಂತೆ ಮಾಡಿದೆ.

ಇದನ್ನೂ ಓದಿ: ಪೈಪ್​ನಲ್ಲಿ ನೀರು ಬಾರದಿದ್ರೂ ಕಟ್ಟಬೇಕು ಬಿಲ್! ಕಾವೇರಿ ನೀರಿಗಾಗಿ ಜಲಮಂಡಳಿಯ ವಿರುದ್ಧ ಜನರ ಕಿಡಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಗಣಿ ಪುರಸಭೆ ಮುಖ್ಯಾಧಿಕಾರಿ ರಾಜೇಶ್, ಕೆರೆಗೆ ತ್ಯಾಜ್ಯ ನೀರು ಸೇರಿ ಕೆರೆಯ ಪರಿಸರವೂ ಹಾಳಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಎಸ್‌ಟಿಪಿ ಘಟಕ ಸ್ಥಾಪಿಸಿ ಸುತ್ತಮುತ್ತಲ ಪ್ರದೇಶದ ತ್ಯಾಜ್ಯ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗುದು ಎಂದು ಹೇಳಿದ್ದಾರೆ.

ಹಲವು ವರ್ಷಗಳ ಹಿಂದೆ ಜನರ ಜೀವನಾಧಾರೆಯಾಗಿದ್ದ ಜಿಗಣಿ ಕೆರೆಯು ಕಲುಷಿತ ನೀರಿನ ಹಣೆಪಟ್ಟಿ ಕಟ್ಟಿಕೊಂಡು ಅವಸಾನದತ್ತ ಸಾಗಿದ್ದು, ಅಲ್ಲಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೆರೆಗೆ ಸೇರುತ್ತಿರುವ ಕಲುಷಿತ ನೀರಿಗೆ ಕಡಿವಾಣ ಹಾಕುವ ಮೂಲಕ ಈ ಹಿಂದೆ ಇದ್ದ ಕೆರೆಯ ಸುಂದರ ಪರಿಸರವನ್ನ ಮರುಕಳಿಸುವಂತೆ ಜನರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.