ಬೆಂಗಳೂರಿನಲ್ಲಿ 2ನೇ ಪತ್ನಿಯೊಂದಿಗೆ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶ ಪ್ರಜೆಯ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ರಹಮಾನ್ ಶೈಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಅವರು ಭಾರತದಲ್ಲಿ ವಾಸಿಸುತ್ತಿದ್ದನು. ರಹಮಾನ್ ಶೈಕ್ ಮೇಲೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪವಿದೆ.
ಬೆಂಗಳೂರು, ಅಕ್ಟೋಬರ್ 29: ತನ್ನ ಎರಡನೇ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ (Bengaluru) ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶ (Bangladesh) ಪ್ರಜೆಯನ್ನು ಪೊಲೀಸರು (Police) ಬಂಧಿಸಿದ್ದಾರೆ. ರಹಮಾನ್ ಶೈಕ್ (38) ಬಂಧಿತ ಬಾಂಗ್ಲಾದೇಶ ಪ್ರಜೆ. ರಹಮಾನ್ ಶೈಕ್ ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಚನ್ನಸಂದ್ರದಲ್ಲಿ ನೆಲಸಿದ್ದು, ಕಸ ವಿಂಗಡಣೆ ಘಟಕದಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಆರೋಪಿ ರಹಮಾನ್ ಶೈಕ್ ತನ್ನ ಜನ್ಮ ಪ್ರಮಾಣ ಪತ್ರ ನಕಲಿ ಮಾಡಿದ್ದಾನೆ. ನಕಲಿ ಪ್ರಮಾಣ ಪತ್ರದಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ರಹಮಾನ್ ಶೈಕ್ ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿಯನ್ನು ಸಹ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿರುವ ರಹಮಾನ್ ಶೈಕ್ ಮೊದಲ ಪತ್ನಿ, ಪತಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ತನ್ನ ಪತಿ ರಹಮಾನ್ ಶೈಕ್ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ತೆರಳಿದ್ದು, ಹಿಂದಿರುಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಚಾರ ತಿಳಿದು, ಬಾಂಗ್ಲಾದೇಶ ಪೊಲೀಸರು ಭಾರತದ ಪೊಲೀಸರಿಗೆ ಮಾಹತಿ ನೀಡಿದ್ದಾರೆ.
ಬೆಂಗಳೂರು ಪೊಲೀಸರು ತನಿಖೆ ನಡೆಸಿ 2023ರಲ್ಲಿ ರಹಮಾನ್ ಶೈಕ್ನನ್ನು ಬಂಧಿಸಿದ್ದರು. ರಹಮಾನ್ ಶೈಕ್ ಬಳಿ ಮಾನ್ಯ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೆ ಇರುವುದು ಪೊಲೀಸರಿಗೆ ತಿಳಿದಿದೆ. ಈ ವಿಚಾರವನ್ನು ಪೊಲೀಸರು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ, ರಹಮಾನ್ ಶೈಕ್ ಶಸ್ತ್ರಚಿಕಿತ್ಸಾ ಕಾರಣ ನೀಡಿ ನ್ಯಾಯಾಲಯದಿಂದ ಅನುಮತಿ ಪಡೆದ ಹೊರ ಬಂದಿದ್ದಾನೆ.‘
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾಕ್ ದಂಪತಿ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣ; ಮಹತ್ವದ ಮಾಹಿತಿ ಹಂಚಿಕೊಂಡ ಎಡಿಜಿಪಿ
ಬಿಡುಗಡೆಯ ನಂತರ, ಅವರು ತಮ್ಮ ಎರಡನೇ ಹೆಂಡತಿಯೊಂದಿಗೆ ವಾಸಿಸುತ್ತಿದ್ದನು. ಇದೀಗ, ಕಾಡುಗೋಡಿ ಪೊಲೀಸರು ಮತ್ತು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಹಮಾನ್ ಶೈಕ್ನನ್ನು ಬಂಧಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರು ಪೊಲೀಸರು ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದರು. ಪಾಕಿಸ್ತಾನ ಪ್ರಜೆ ಸೇರಿಂದತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನ ಪ್ರಜೆಗಳು 2018ರಿಂದ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿತ್ತು. ಪಾಕಿಸ್ತಾನ ಪ್ರಜೆಗಳನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ