ಬೆಂಗಳೂರು: ಪರಿಷತ್ ಸಭಾನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ನಾಮನಿರ್ದೇಶನ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಹಿಂದೆಯೂ ಸಭಾನಾಯಕನಾಗಿ ನೇಮಕಗೊಂಡಿದ್ದರು. ಈ ಬಾರಿಯೂ ಸಭಾ ನಾಯಕರಾಗಿ ನಾಮನಿರ್ದೇಶನ ಮಾಡಿ ಸಭಾಪತಿಗೆ ಪತ್ರ ಬರೆಯಲಾಗಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.
ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ
ರಾಜ್ಯದಲ್ಲಿ ಜೂನ್ ವೇಳೆಗೆ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಪಕ್ಷಗಳು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿವೆ. ಈ ಸಂಬಂಧ ಭಾರತೀಯ ಜನತಾ ಪಕ್ಷ- ಬಿಜೆಪಿ (BJP) ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ್ ಶಹಾಪುರ್ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆ ಇದೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಹೆಸರು ಘೋಷಿಸುವ ನಿರೀಕ್ಷೆ ಇದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೋ.ಮಧುಸೂದನ್ ಹಾಗೂ ಕಳೆದ ಬಾರಿ ಸೋತಿದ್ದ ಮೈ.ವಿ.ರವಿಶಂಕರ ಹೆಸರುಗಳು ರೇಸ್ನಲ್ಲಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬಸವರಾಜ ಹೊರಟ್ಟಿಗೆ ಹಿನ್ನೆಡೆ?
ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಅಭ್ಯರ್ಥಿ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಬಿಜೆಪಿ ಬೆಂಬಲದೊಂದಿಗೆ ಹೊರಟ್ಟಿಯವರು ಸ್ಪರ್ಧೆಗೆ ಒಲವು ತೋರಿದ್ದರು. ಇದೀಗ ಹೊರಟ್ಟಿಗೆ ಬಿಜೆಪಿಯ ಬೆಂಬಲ ಅಥವಾ ಟಿಕೆಟ್ ಅನುಮಾನ ಎನ್ನಲಾಗಿದೆ. ಹೊರಟ್ಟಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸುವ ಅಥವಾ ಬೆಂಬಲಿಸುವ ಕುರಿತು ತೆರೆಮರೆಯ ಚಟುವಟಿಕೆಗಳು ನಡೆದಿದ್ದವು.
ಆದರೆ ಹೊರಟ್ಟಿಗೆ 75 ವರ್ಷ ತುಂಬಿದೆ. ಬಿಜೆಪಿ ಸೇರಲು ಅವರಿಗೆ ವಯಸ್ಸಿನ ಅಡ್ಡಿಯಾಗಿದೆ ಎನ್ನುವ ಮಾತು ಕೇಳಿಬಂದಿದೆ. ಈ ಕುರಿತು ಕೆಲ ಬಿಜೆಪಿಗರು ವರಿಷ್ಠರ ಗಮನಕ್ಕೆ ತಂದಿದ್ದರು ಎನ್ನಲಾಗಿದ್ದು, ಹೀಗಾಗಿ ಹೊರಟ್ಟಿ ಬಿಜೆಪಿ ಸೇರಿದರೂ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ. ಜೂನ್ ವೇಳೆಗೆ ಹೊರಟ್ಟಿ ಅವರ ಸದಸ್ಯತ್ವ ಅವಧಿ ಮುಕ್ತಾಯವಾಗಲಿದೆ.
ಕಾಂಗ್ರೆಸ್ನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ಘೋಷಣೆ: ಡಿಕೆ ಶಿವಕುಮಾರ್
ಇತ್ತ ಕಾಂಗ್ರೆಸ್ನಲ್ಲಿ ಪರಿಷತ್ನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮಧುಮಾದೇಗೌಡರು ಹಾಗೂ ಧಾರವಾಡದ ಗುರಿಕಾರ್ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ. ಇನ್ನೆರಡು ಕ್ಷೇತ್ರಗಳಿಗೆ ನಾಯಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಇಬ್ರಾಹಿಂಗೆ ಕೈತಪ್ಪಿದ ಪರಿಷತ್ ವಿಪಕ್ಷ ನಾಯಕ ಸ್ಥಾನ: ಮುಸ್ಲಿಂ ಸಮುದಾಯದ ನಾಯಕರ ಅಸಮಾಧಾನ
ಇದನ್ನೂ ಓದಿ: ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಿ.ಕೆ ಹರಿಪ್ರಸಾದ್
Published On - 4:27 pm, Fri, 11 February 22