AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Budget: ಇಂದು ಬಿಬಿಎಂಪಿ ಬಜೆಟ್, ಬ್ರ್ಯಾಂಡ್ ಬೆಂಗಳೂರಿಗೆ ಏನೆಲ್ಲಾ ನಿರೀಕ್ಷೆ? ಇಲ್ಲಿದೆ ವಿವರ

BBMP Budget expectations: ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಇಂದು ಮಂಡನೆ ಆಗುತ್ತಿದೆ. ಜನಪ್ರತಿನಿಧಿಗಳಿಲ್ಲದೆ ಮಂಡನೆ ಆಗುತ್ತಿರುವ ನಾಲ್ಕನೇ ಬಜೆಟ್ ಇದಾಗಿದೆ. ಈ ಬಜೆಟ್​ನಲ್ಲಿ ಬ್ರಾಂಡ್ ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಗಳಿವೆ. ಬಜೆಟ್ ಬಗ್ಗೆ ಇನ್ನೂ ಏನೇನು ನಿರೀಕ್ಷೆಗಳಿವೆ? ಇಲ್ಲಿದೆ ವಿವರ.

BBMP Budget: ಇಂದು ಬಿಬಿಎಂಪಿ ಬಜೆಟ್, ಬ್ರ್ಯಾಂಡ್ ಬೆಂಗಳೂರಿಗೆ ಏನೆಲ್ಲಾ ನಿರೀಕ್ಷೆ? ಇಲ್ಲಿದೆ ವಿವರ
ಬಿಬಿಎಂಪಿ
TV9 Web
| Edited By: |

Updated on: Feb 29, 2024 | 6:59 AM

Share

ಬೆಂಗಳೂರು, ಫೆಬ್ರವರಿ 29: ಕೇಂದ್ರ, ರಾಜ್ಯ ಬಜೆಟ್ ಬಳಿಕ ಇದೀಗ ಬಿಬಿಎಂಪಿ ಬಜೆಟ್​​ನತ್ತ (BBMP Budget) ಎಲ್ಲರ ಚಿತ್ತ ನೆಟ್ಟಿದೆ. ಇಂದು ಬೆಳಗ್ಗೆ 10.30 ಕ್ಕೆ ಟೌನ್ ಹಾಲ್​​ನಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬಿಬಿಎಂಪಿ ವಿಶೇಷ ಅಯುಕ್ತ ಶಿವಾನಂದ ಕಲ್ಕೆರಿ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರ ಬ್ರ್ಯಾಂಡ್ ಬೆಂಗಳೂರಿನ (Brand Bengaluru) ಜಪ ಮಾಡ್ತಿರೋ ಹೊತ್ತಲ್ಲೇ ಪಾಲಿಕೆ ಬಜೆಟ್ ಬಂದಿರೋದರಿಂದ ನಿರೀಕ್ಷೆಗಳು ಗರಿಗೆದರಿವೆ.

12 ಸಾವಿರ ಕೋಟಿ ರೂ. ಬಜೆಟ್ ನಿರೀಕ್ಷೆ

ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಿರುವ ಬಿಬಿಎಂಪಿ ಬಜೆಟ್​ಗೆ ಮುಹೂರ್ತ ನಿಗದಿಯಾಗಿದ್ದು, ಬೆಂಗಳೂರು ಮಹಾನಗರ ಉಸ್ತುವಾರಿಯಾಗಿರೋ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಜೆಟ್‍ಗೆ ಒಪ್ಪಿಗೆ ಸೂಚಿಸಿದ್ದಾರೆ. 2024-25 ನೇ ಸಾಲಿನ ಬಜೆಟ್ ಮಂಡಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಟೌನ್ ಹಾಲ್​ನಲ್ಲಿ ಬಜೆಟ್ ಮಂಡನೆಯಾಗಲಿದೆ.

ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ ಬಿಬಿಎಂಪಿಗೆ 3500 ಕೋಟಿ ಅನುದಾನ ನೀಡಿದೆ. ರಾಜ್ಯ ಸರ್ಕಾರದ 3500 ಕೋಟಿ ಅನುದಾನ, ಬಿಬಿಎಂಪಿ 6 ಸಾವಿರ ಕೋಟಿ ಅದಾಯ ಸೇರಿದಂತೆ ಹೊಸ ಜಾಹೀರಾತು ಕಾಯ್ದೆಯಿಂದ ಸುಮಾರು 2 ಸಾವಿರ ಕೋಟಿ ರೂಪಾಯಿ ವಿವಿಧ ಮೂಲಗಳಿಂದ ಕ್ರೂಢೀಕರಿಸಿ 12 ಸಾವಿರ ಕೋಟಿ ಬಜೆಟ್ ಮಂಡನೆ ಅಗುವ ಸಾಧ್ಯತೆ ಇದೆ.

ಸದ್ಯ ಡಿಸಿಎಂ ಡಿಕೆ ಶಿವಕುಮಾರ್ ಕನಸಿನ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಗೆ ಜೀವ ನೀಡುವ ಹಿನ್ನೆಲೆ ಪಾಲಿಕೆ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿ ಪಾಲಿಕೆ ಬಜೆಟ್​ ಮೇಲೆ ಏನೆಲ್ಲಾ ನಿರೀಕ್ಷೆಯಿದೆ ಅನ್ನೋದನ್ನ ನೋಡೋದಾದ್ರೆ.

‘ಬ್ರ್ಯಾಂಡ್ ಬೆಂಗಳೂರು’ ಬಜೆಟ್​ ನಿರೀಕ್ಷೆಗಳು ಏನು?

ಇಂದಿರಾ ಕ್ಯಾಂಟೀನ್‌ಗೆ 200 ಕೋಟಿ ರೂಪಾಯಿ ಅನುದಾನ. ವಸತಿ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪಾಲಿಕೆಯಿಂದ ಎರಡು ಆಂಬುಲೆನ್ಸ್ ನೀಡುವ ಸಾಧ್ಯತೆ ಇದೆ. ಇನ್ನು ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ಹಂಚಿಕೆಯ ಕ್ರಮ, ಪ್ರವಾಹ ತಡೆಗೆ ಒಳಚರಂಡಿ ಅಭಿವೃದ್ಧಿಗಾಗಿ ಅನುದಾನ, ಕೆರೆಗಳಿಗೆ ತಡೆ ಗೇಟ್, ಹೈಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ ಅನುದಾನ ನೀಡುವ ನಿರೀಕ್ಷೆ ಇದೆ. ಪ್ರಮುಖ 74 ಜಂಕ್ಷನ್ ಅಭಿವೃದ್ಧಿ, ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 5 ಕಿಮೀ ಎಲಿವೇಟೆಡ್ ರಸ್ತೆ ನಿರ್ಮಾಣ. 110 ಗ್ರಾಮಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್ ನಿರ್ಮಾಣ ಮಾಡುವ ಯೋಜನೆ ಘೋಷಿಸೋ ಸಾಧ್ಯತೆ ಇದೆ. ಪ್ರತಿ ವಾರ್ಡ್​ಗೂ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ, ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು, ಪ್ರತಿ ವಾರ್ಡ್​ನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಘೋಷಣೆ ನಿರೀಕ್ಷೆ ಇದೆ.

ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿ, ಬಿಬಿಎಂಪಿ ಆಸ್ತಿ ರಕ್ಷಣೆಗೆ ಅನುದಾನ, ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಕ್ಕೂ ಕತ್ತರಿ ಬೀಳುವ ಸಾಧ್ಯತೆ ಇದೆ. ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೆ ಕೋಟಿ ಕೋಟಿ ರೂಪಾಯಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಇನ್ನು ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ ದಿ ಸೇಫ್ ಸಿಟಿ ಪ್ರಾಜೆಕ್ಟ್ ಜಾರಿಗೆ ತರುವ ಸಾಧ್ಯತೆ ಇದೆ.

ಇದನ್ನೂ ಓದಿ: ಅನ್ಯಭಾಷಿಕರ ಅಂಗಡಿಗಳಿಗೆ ಬಿಬಿಎಂಪಿ ಫೈನಲ್‌ ವಾರ್ನಿಂಗ್!

ಜನಪ್ರತಿನಿಧಿಗಳಿಲ್ಲದೆ ನಾಲ್ಕನೇ ಬಾರಿ ಮಂಡನೆಯಾಗುತ್ತಿದೆ ಬಜೆಟ್

ಜನಪ್ರತಿನಿಧಿಗಳಿಲ್ಲದೆ ನಾಲ್ಕನೇ ಬಾರಿ ಪಾಲಿಕೆಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಇಂದು ಬಜೆಟ್ ಮಂಡನೆಯಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಪೇಪರ್ ರಹಿತ ಬಜೆಟ್ ಮಂಡನೆಯಾಗಲಿದ್ದು ವಿಶೇಷ ಆಯುಕ್ತರು ಬಜೆಟ್ ಮಂಡಿಸಲಿದ್ದಾರೆ. 12 ಸಾವಿರ ಕೋಟಿ ಆಸುಪಾಸಿನಲ್ಲಿ ವಾಸ್ತವಿಕ ಬಜೆಟ್ ಮಂಡಿಸುವ ಸಾಧ್ಯತೆ ಇದ್ದು, ಪಾಲಿಕೆ ಬಜೆಟ್​ನಲ್ಲಿ ಬೆಂಗಳೂರಿಗೆ ಏನೆಲ್ಲಾ ಸಿಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಶಾಂತಮೂರ್ತಿ ಎಂ

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ