ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಈದ್ಗಾ (Chamarajpete Idga) ಮೈದಾನದ ಸುತ್ತಲೂ ಬಿಬಿಎಂಪಿ (BBMP)395199 12 ಕಂಬಗಳನ್ನು ನೆಟ್ಟಿದ್ದು, ಸಿಸಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ಅಂತಿಮಗೊಳಿಸಿದೆ. ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದೆ. ಪೊಲೀಸ್ ಇಲಾಖೆ ಮನವಿ ಮೇರೆಗೆ ಬಿಬಿಎಂಪಿ ಈ ವ್ಯವಸ್ಥೆ ರೂಪಿಸಿದೆ. ಮೊನ್ನೆ ನೆಟ್ಟಿದ್ದ 3 ಕಂಬಗಳ ಪೈಕಿ 2 ಕಂಬಗಳನ್ನು ಪುಂಡರು ಉರುಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೊಳಗೆ ಮೈದಾನಕ್ಕೆ ಲೈಟಿಂಗ್ ವ್ಯವಸ್ಥೆ, ಇನ್ನೆರಡು ದಿನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಬಿಬಿಎಂಪಿ ಸಿದ್ಧತೆ ಮಾಡಿದೆ.
ಚಾಮರಾಜಪೇಟೆಯ ಈದ್ಗಾ ಮೈದಾನಲ್ಲಿ ಯೋಗ (International Yoga Day) ಆಚರಣೆ ಮಾಡಲು ಒಪ್ಪಿಗೆ ನೀಡುವಂತೆ ಹಿಂದುತ್ವ ಪರ ಸಂಘಟನೆಗಳು ಬಿಬಿಎಂಪಿಗೆ ಮನವಿ ಮಾಡಿವೆ. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಆಚರಣೆಗಳಿಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿವೆ. ಸದ್ಯ ಮೈದಾನ ನೀಡುವ ವಿಚಾರದಲ್ಲಿ ಬಿಬಿಎಂಪಿ ತಟಸ್ಥವಾಗಿದೆ. ನಮಗೆ ಅವಕಾಶ ಕೊಡದಿದ್ದರೆ ಯಾರಿಗೂ ಕೊಡಬೇಡಿ. ನಮಾಜ್ಗೆ ಅನುಮತಿ ಕೊಟ್ಟರೆ ನಮಗೂ ಕೊಡಿ. ಇಲ್ಲವಾದರೆ ಯಾವ ಧರ್ಮದವರಿಗೆ ಅನುಮತಿ ಕೊಡಬೇಡಿ ಎಂದು ಹಿಂದುತ್ವವಾದಿ ಸಂಘಟನೆಗಳು ಆಗ್ರಹಿಸಿವೆ.
ಈ ನಡುವೆ ಮೈದಾನದಲ್ಲಿ ನೆಟ್ಟಿದ್ದ ಮೂರು ಕಂಬಗಳು ಏಕಾಏಕಿ ನೆಲಸಮವಾಗಿದೆ. ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದ ಸ್ಥಳೀಯರೇ ಈ ಕೃತ್ಯ ಎಸಗಿದ್ದರಾ? ಅಥವಾ ಬೇರೆಯವರು ಬಂದು ಕಂಬ ಕಿತ್ತಿದ್ದಾರಾ ಎಂದು ತಿಳಿಯಲು ಪೊಲೀಸರು ಸಿಸಿ ಟಿವಿ ಫೂಟೇಜ್ ಪರಿಶೀಲನೆಗೆ ಮುಂದಾಗಿದ್ದಾರೆ. ನಿನ್ನೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೈದಾನಕ್ಕೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಮೈದಾನದ ಬಳಿ ಪ್ರತಿಭಟನೆ, ಘೋಷಣೆಗೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿಗೆ ಡೆಡ್ಲೈನ್
ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ನೀಡುವ ಬಗ್ಗೆ ನಾಳೆ (ಜೂನ್ 14) ಮಧ್ಯಾಹ್ನ 3 ಗಂಟೆಯ ಒಳಗೆ ನಿಲುವು ತಿಳಿಸಬೇಕೆಂದು ಕೋರಿ ಹಿಂದುತ್ವ ಪರ ಸಂಘಟನೆಗಳು ಬಿಬಿಎಂಪಿಗೆ ಡೆಡ್ಲೈನ್ ಕೊಟ್ಟಿವೆ. ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರ್ ಎಚ್ಚರಿಸಿದ್ದಾರೆ.
ಆಗಸ್ಟ್ 14 ಮತ್ತು 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋಡಬೇಕು ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಜೂನ್ 7ರಂದು ಮನವಿ ಸಲ್ಲಿಸಿದ್ದರೂ ಪ್ರತಿಕ್ರಿಯೆ ನೀಡಿಲ್ಲ. ಅನುಮತಿ ಕೊಡುವುದು ಅಥವಾ ಇಲ್ಲ ಎನ್ನುವ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು ಎಂದು ಅವರು ಕೋರಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Mon, 13 June 22