ಚಾಮರಾಜಪೇಟೆ ಈದ್ಗಾ ಮೈದಾನ ಯೋಗ ಆಚರಣೆಗೆ ಮನವಿ; ಮೈದಾನದಲ್ಲಿ ನಿನ್ನೆ ನೆಟ್ಟಿದ್ದ ಕಂಬ ಏಕಾಏಕಿ ನೆಲಸಮ!
ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಹಿಂದೂ ಆಚರಣೆಗಳಿಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿವೆ.
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ (Idgah Maidan) ಸಂಬಂಧಿಸಿದ ವಾದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಮೈದಾನದಲ್ಲಿ ಯೋಗ (International Yoga Day) ಆಚರಣೆ ಮಾಡಲು ಒಪ್ಪಿಗೆ ನೀಡುವಂತೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮನವಿ ಮಾಡಿವೆ. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಹಿಂದೂ ಆಚರಣೆಗಳಿಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿವೆ. ಸದ್ಯ ಮೈದಾನ ನೀಡುವ ವಿಚಾರದಲ್ಲಿ ಬಿಬಿಎಂಪಿ ತಟಸ್ಥವಾಗಿದೆ. ನಮಗೆ ಅವಕಾಶ ಕೊಡದಿದ್ದರೇ ಯಾರಿಗೂ ಕೊಡಬೇಡಿ. ನಮಾಜ್ಗೆ ಅನುಮತಿ ಕೊಟ್ಟರೆ ನಮಗೂ ಕೊಡಿ. ಇಲ್ಲವಾದರೆ ಯಾವ ಧರ್ಮದವರಿಗೆ ಅನುಮತಿ ಕೊಡಬೇಡಿ ಅಂತ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ನಿನ್ನೆ ನೆಟ್ಟಿದ್ದ ಕಂಬ ನೆಲಸಮ: ಇನ್ನು ಮೈದಾನದಲ್ಲಿ ನಿನ್ನೆ ಸಂಜೆ ನೆಟ್ಟಿದ್ದ ಕಂಬ ಏಕಾಏಕಿ ನೆಲಸಮವಾಗಿದೆ. ಮೈದಾನದಲ್ಲಿ ನಿನ್ನೆ ಸಂಜೆ ಹೊತ್ತಿಗೆ ಸಿಬ್ಬಂದಿಗಳು 3 ಕಂಬ ನೆಟ್ಟಿದ್ದರು. ಆದರೆ ದುಷ್ಕರ್ಮಿಗಳು ರಾತ್ರೋರಾತ್ರಿ ಧರೆಗೆ ಉರುಳಿಸಿದ್ದಾರೆ. ನಿನ್ನೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದ ಸ್ಥಳೀಯರೇ ಈ ಕೃತ್ಯ ಎಸಗಿದ್ದರಾ? ಅಥವಾ ಬೇರೆಯವರು ಬಂದು ಕಂಬ ಕಿತ್ತಿದ್ದಾರ ಎಂದು ತಿಳಿಯಲು ಪೊಲೀಸರು ಸಿಸಿ ಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ಬೆಳಗಾವಿಯಲ್ಲಿ ಪ್ರತಿಕೃತಿ ಗಲ್ಲಿಗೇರಿಸಿದ್ದ ಮೂವರ ಬಂಧನ
ಪೊಲೀಸರಿಂದ ಬಿಗಿ ಬಂದೋಬಸ್ತ್: ಮೈದಾನದ ಸುತ್ತ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಿನ್ನೆ ಸಿಸಿಕ್ಯಾಮರಾ ಅಳವಡಿಕೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಹೆಚ್ಚುವರಿ ಪೊಲೀಸರಿಂದ ಮೈದಾನಕ್ಕೆ ಭದ್ರತೆ ನೀಡಲಾಗಿದೆ. 2 ಕೆಎಸ್ಆರ್ಪಿ ತುಕಡಿ, 2 ಹೊಯ್ಸಳ ವಾಹನ ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮೈದಾನದ ಬಳಿ ಪ್ರತಿಭಟನೆ, ಘೋಷಣೆಗೆ ಅವಕಾಶವಿಲ್ಲ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Sun, 12 June 22