ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ಬೆಳಗಾವಿಯಲ್ಲಿ ಪ್ರತಿಕೃತಿ ಗಲ್ಲಿಗೇರಿಸಿದ್ದ ಮೂವರ ಬಂಧನ

ಪ್ರವಾದಿ ಮೊಹಮದ್ ಪೈಗಂಬರ್‌ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಎಸ್​ಡಿಪಿಐ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ಬೆಳಗಾವಿಯಲ್ಲಿ ಪ್ರತಿಕೃತಿ ಗಲ್ಲಿಗೇರಿಸಿದ್ದ ಮೂವರ ಬಂಧನ
ನೂಪುರ್ ಶರ್ಮಾ ಅಣಕು ಪ್ರತಿಕೃತಿ ನಡುರಸ್ತೆಯಲ್ಲೇ ನೇಣು ಹಾಕಿರುವುದು.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2022 | 12:55 PM

ಬೆಳಗಾವಿ: ಮುಹಮ್ಮದ್‌ ಪೈಗಂಬರ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ಆರೋಪ ಖಂಡಿಸಿ, ನೂಪುರ್ ಶರ್ಮಾ ಅಣಕು ಪ್ರತಿಕೃತಿ ನಡುರಸ್ತೆಯಲ್ಲೇ ನೇಣು ಹಾಕಿದ್ದ ಮೂವರನ್ನ ವಶಕ್ಕೆ ಪಡೆದು ನಗರದ ಮಾರ್ಕೆಟ್ ಪೊಲೀಸರಿಂದ ತೀವ್ರ ವಿಚಾರಣೆ ಮಾಡಲಾಗಿದೆ. ತಾಂತ್ರಿಕ ‌ಸಾಕ್ಷ್ಯ ಆಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ಮೊಹಮ್ಮದ್ ಶೋಯೆಬ್, ಅಮನ್ ಮೊಕಾಶಿ, ಅರ್ಬಾಜ್ ಮೊಕಾಶಿ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. IPC ಸೆಕ್ಷನ್ 1860(u/s – 153, 109), ಕರ್ನಾಟಕ ಓಪನ್ ಪ್ಲೇಸ್‌ ಡಿಸ್ಫಿಗರ್ಮೆಂಟ್ ಆಕ್ಟ್ 1951 & 1981 (U/s-3,4)ನಡಿ ಕೇಸ್ ದಾಖಲಾಗಿತ್ತು. ಎರಡು ದಿನಗಳ ಹಿಂದೆ ಬೆಳಗ್ಗೆ 7 ಗಂಟೆ ಸುಮಾರಿಗೆ ನೂಪುರ್ ಶರ್ಮಾ ಪ್ರತಿಕೃತಿ ನೇಣು ಹಾಕಿದ್ದರು. ಫೋರ್ಟ್ ರಸ್ತೆಯ ಪಿಂಪಲ್ ಕಟ್ಟಾ ಬಳಿ ನಡೆದಿದ್ದ ಘಟನೆ ನಡೆದಿತ್ತು. ನೂಪುರ್ ಶರ್ಮಾ ಭಾವಚಿತ್ರ ಇರುವ ಪ್ರತಿಕೃತಿಗೆ ಸೀರೆ ಉಡಿಸಿ ಕಿಡಿಗೇಡಿಗಳು ನೇಣು ಹಾಕಿದ್ದರು.

ಇದನ್ನೂ ಓದಿ; ಮರಾಠಿ ಭಾಷಾ ವಿವಾದಕ್ಕೆ ಕಿಡಿ ಇಟ್ಟ ಕಾರವಾರ ನಗರಸಭೆ; ಮರಾಠಿ ಭಾಷೆ ನಾಮಫಲಕ ಅಳವಡಿಕೆ

ಪ್ರವಾದಿ ಮೊಹಮದ್ ಪೈಗಂಬರ್‌ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಎಸ್​ಡಿಪಿಐ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನೂಪುರ್ ಶರ್ಮಾರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದ ಅವರು, ಶಿಸ್ತುಕ್ರಮ ಜರುಗಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಪ್ರವಾದಿ ಪೈಗಂಬರ್ ಕುರಿತು ಅವಹೇಳನದ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ಅವರನ್ನು ಬಿಜೆಪಿಯು ಪಕ್ಷದಿಂದ ಅಮಾನತು ಮಾಡಿತ್ತು. ನೂಪುರ್ ಶರ್ಮಾರ ಪ್ರತಿಕೃತಿಗೆ ನೇಣು ಹಾಕಿದಂತೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಘಟನೆ ಹಿನ್ನೆಲೆ

ಟಿವಿ ಚರ್ಚೆಯೊಂದರಲ್ಲಿ ನೂಪುರ್ ಶರ್ಮಾ, ಪ್ರವಾದಿ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮುಸ್ಲಿಂ ರಾಷ್ಟ್ರಗಳಾದ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಯಿಂದ ರಾಜತಾಂತ್ರಿಕ ಪ್ರತಿಭಟನೆಯೂ ಎದುರಾಗಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇದೆಲ್ಲ ಆದ ಬಳಿಕ ನೂಪುರ್ ಶರ್ಮಾ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ನನ್ನ ಮಾತುಗಳು ಯಾವುದೇ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ನಾನು ಆ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ. ನಾನು ಹಲವು ದಿನಗಳಿಂದ ಟಿವಿ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇನೆ. ಅಲ್ಲಿ ಪ್ರತಿದಿನ ನನ್ನ ಅಯೋಧ್ಯಾ, ಶಿವನನ್ನು ಅವಮಾನ ಮಾಡಲಾಗುತ್ತಿತ್ತು. ನನ್ನಲ್ಲಿ ಅದು ಶಿವಲಿಂಗ ಅಲ್ಲ ಕಾರಂಜಿ ಎಂದರು. ದಿಲ್ಲಿಯ ಪ್ರತೀ ಫುಟ್ಪಾತ್ ಮೇಲೆ ಹಲವಾರು ಶಿವಲಿಂಗಗಳು ಸಿಗುತ್ತವೆ, ಹೋಗಿ ಅಲ್ಲಿ ಪೂಜೆ ಮಾಡಿ ಎಂದಿದ್ದರು. ನನ್ನ ಮುಂದೆ ಪದೇ ಪದೇ ಈ ರೀತಿ ನಮ್ಮ ಮಹಾದೇವ ಶಿವನ ಅವಮಾನ ಮಾಡಲಾಗುತ್ತಿತ್ತು.ಹೀಗೆ ಹೇಳುವುದನ್ನು ಕೇಳಿ ಸಿಟ್ಟಿನಲ್ಲಿ ಕೆಲವು ಮಾತು ಅಂದುಬಿಟ್ಟೆ. ಒಂದುವೇಳೆ ನನ್ನ ಮಾತುಗಳಿಂದ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಆ ಮಾತನ್ನು ಹಿಂಪಡೆಯುತ್ತೇನೆ. ಯಾರಿಗಾದರೂ ನೋವುಂಟು ಮಾಡಬೇಕು ಎಂಬ ಉದ್ದೇಶ ನನಗಿರಲಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.