ಪೊಲೀಸ್ ಪಾಠ: ಎಸ್ಎಸ್ಎಲ್ಸಿ ಫೇಲಾದ ವಿದ್ಯಾರ್ಥಿಗಳ ಕೈ ಹಿಡಿದ ಇನ್ಸ್ಪೆಕ್ಟರ್, ಓದು ಮುಂದುವರೆಸಲು ನೆರವು
‘ಸಮರ್ಪಕ ಮಾರ್ಗದರ್ಶನ ಸಿಗದಿದ್ದರೆ ಎಸ್ಎಸ್ಎಸ್ಸಿ ಪರೀಕ್ಷೆಯಲ್ಲಿ ನಪಾಸಾದವರು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬಹುದು’ ಎಂದು ಮನಗಂಡ ಅವರು ವಿಶೇಷ ತರಗತಿಗಳನ್ನು ಆಯೋಜಿಸಿದರು.
ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶವು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುವ ಮಾತು ಬಹುಮಟ್ಟಿಗೆ ನಿಜ. ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದವರನ್ನು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ‘ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ನಪಾಸಾದ ನಂತರ ಸರಿಯಾದ ಮಾರ್ಗದರ್ಶನ ಸಿಗದೆ ಇಂಥ ಕೃತ್ಯಕ್ಕೆ ಇಳಿಯಬೇಕಾಯಿತು’ ಎಂದು ಹಲವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಗಿ ಪೊಲೀಸ್ ಅಧಿಕಾರಿಗಳು ಹೇಳುವುದು ವಾಡಿಕೆ. ಆದರೆ ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಈ ಬಾರಿ ಸಮಾಜದಲ್ಲಿ ಬದಲಾವಣೆ ತರಲೇಬೇಕೆಂದು ಪಣತೊಟ್ಟು ನಿಂತಿದ್ದಾರೆ. ಅದರ ಪರಿಣಾಮವಾಗಿ ಹತ್ತಾರು ವಿದ್ಯಾರ್ಥಿಗಳ ಭವಿಷ್ಯ ಬದಲಾಗುತ್ತಿದೆ. ಎಸ್ಎಸ್ಎಲ್ಸಿಯಲ್ಲಿ ಫೇಲಾದವರು ಇಂದು ಮತ್ತೆ ಶ್ರದ್ಧೆಯಿಂದ ಓದಲು ಆರಂಭಿಸಿದ್ದಾರೆ.
ಈ ಬದಲಾವಣೆಗೆ ಕಾರಣರಾದವರು ಬಂಡೇಪಾಳ್ಯ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್. ‘ಸಮರ್ಪಕ ಮಾರ್ಗದರ್ಶನ ಸಿಗದಿದ್ದರೆ ಎಸ್ಎಸ್ಎಸ್ಸಿ ಪರೀಕ್ಷೆಯಲ್ಲಿ ನಪಾಸಾದವರು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬಹುದು’ ಎಂದು ಮನಗಂಡ ಅವರು ಪರಿವರ್ತನೆಯ ಪ್ರಯತ್ನಕ್ಕೆ ಮುಂದಾದರು. ನಪಾಸದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಬೇಕು ಎನ್ನುವ ಕಾರಣಕ್ಕೆ ಪೊಲೀಸ್ ಕಾನ್ಸ್ಟೆಬಲ್ಗಳ ತಂಡವೊಂದನ್ನು ರಚಿಸಿ, ಇಂಥ ವಿದ್ಯಾರ್ಥಿಗಳ ಮಾಹಿತಿ ಕಲೆಹಾಕಿದರು.
ನಪಾಸದ 92 ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿದ ನಂತರ, ವಿದ್ಯಾರ್ಥಿಗಳು, ಪೋಷಕರು ಮತ್ತು ಪೊಲೀಸರ ಸಭೆ ಆಯೋಜಿಸಿದರು. ನಪಾಸದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ತೆಗೆದುಕೊಳ್ಳುವಂತೆ ಮನವೊಲಿಸಿದರು. ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಆತ್ಮವಿಶ್ವಾಸ ತುಂಬಿದರು. ಜೂನ್ 5ರಿಂದ ಆರಂಭವಾಗಿರುವ ಪೂರಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ವಿಶೇಷ ತರಗತಿಗಳನ್ನು ಆಯೋಜಿಸಿರುವುದರಿಂದ ಪರೀಕ್ಷೆ ಬರೆಯಲು ಈ ಹುಡುಗರು ಇನ್ನೊಂದು ವರ್ಷ ಕಾಯಬೇಕಿಲ್ಲ. ಪೂರಕ ಪರೀಕ್ಷೆಯಲ್ಲಿ ಪಾಸಾದ ನಂತರ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಯೋಚಿಸುತ್ತಾರೆ. ಇಲ್ಲದಿದ್ದರೆ ಕುಡಿತ, ಧುಮಪಾನ, ಸರಗಳ್ಳತನ, ಸೈಕಲ್ ಕಳ್ಳತನದಂಥ ದುಷ್ಕೃತ್ಯಗಳನ್ನು ಆರಂಭಿಸುತ್ತಿದ್ದರು ಎಂದು ರಾಜೇಶ್ ಹೇಳಿದರು.
ಈ ಮಕ್ಕಳಿಗೆ ವಿಶೇಷ ತರಗತಿ ಆಯೋಜಿಸಲು ಶಿಕ್ಷಕರನ್ನು ಹೊಂದಿರುವುದು ಸುಲಭವಾಗಿರಲಿಲ್ಲ. ಸಾಕಷ್ಟು ಹುಡುಕಾಡಿದ ನಂತರ ಆರು ಶಿಕ್ಷಕರು ಮಕ್ಕಳಿಗೆ ಪಾಠ ಹೇಳಲು ಒಪ್ಪಿಕೊಂಡರು. ಎಸ್ಎಸ್ಎಲ್ಸಿ ಪಠ್ಯಕ್ರಮದ ಎಲ್ಲ ವಿಷಯಗಳಿಗೂ ಪಾಠ ಹೇಳಿಸಲು ರಾಜೇಶ್ ಮುಂದಾದರು. ಪದವಿ ತರಗತಿಗಳಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಮುಂದೆ ಬಂದರು.
ವಿಶೇಷ ತರಗತಿಗಳು ಆರಂಭವಾದ ನಂತರ ಈವರೆಗೆ ಯಾರೊಬ್ಬರೂ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿಲ್ಲ. ವಿಶೇಷ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವ 100 ವಿದ್ಯಾರ್ಥಿಗಳ ಪೈಕಿ 40 ಮಂದಿ ಕನ್ನಡದಲ್ಲಿ ನಪಾಸಾದವರು ಎನ್ನುವುದು ಗಮನಾರ್ಹ ಸಂಗತಿ. ಮೊದಲ ದಿನದಿಂದಲೂ ವಿಶೇಷ ತರಗತಿಗಳಿಗೆ ಬರುತ್ತಿರುವ ಫಲಕ್ ಅರ್ಜುಮನ್ ಕನ್ನಡ ಮತ್ತು ಹಿಂದಿಯಲ್ಲಿ ಫೇಲಾಗಿದ್ದಾಳೆ. ಈ ವಿಶೇಷ ತರಗತಿಗಳಿಗೆ ಮೊದಲ ದಿನದಿಂದಲೂ ಹಾಜರಾಗುತ್ತಿರುವ ಫಲಕ್, ‘ನನ್ನ ಶಾಲೆಗಿಂತಲೂ ಇಲ್ಲಿ ಚೆನ್ನಾಗಿ ಪಾಠ ಮಾಡುತ್ತಾರೆ. ನಾನು ಎರಡೂ ವಿಷಯಗಳಲ್ಲಿ ಈ ಬಾರಿಯೇ ಪಾಸಾಗುತ್ತೇನೆ ಎನ್ನುವ ವಿಶ್ವಾಸವಿದೆ’ ಎಂದು ಹೇಳುತ್ತಾರೆ.
ಬಂಡೇಪಾಳ್ಯದ ಶುದ್ಧೋದಿನ ಶಾಲೆಯಲ್ಲಿ ನಡೆಯುತ್ತಿರುವ ವಿಶೇಷ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವ ಮಹಿಪಾಲ್ ಸಿಂಗ್ ನಾಲ್ಕು ವಿಷಯಗಳಲ್ಲಿ ನಪಾಸಾಗಿದ್ದಾರೆ ಅವರೂ ಸಹ ಈ ಬಾರಿ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ. ಈ ಹುಡುಗರಿಗೆ ನೆರವಾಗುತ್ತಿರುವ ಸ್ವಯಂ ಸೇವಕರು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೂ ಶ್ರಮಿಸುತ್ತಿದ್ದಾರೆ. ಅವರಿಗೆ ಅರ್ಥವಾಗದ ವಿಷಯಗಳನ್ನು ಹೇಳಿಕೊಡುವುದರ ಜೊತೆಗೆ, ಅಸೈನ್ಮೆಂಟ್ಗಳನ್ನು ಪೂರ್ಣಗೊಳಿಸಲೂ ಈ ಹುಡುಗರು ನೆರವಾಗುತ್ತಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Sun, 12 June 22