
ಬೆಂಗಳೂರು, ಜುಲೈ 30: ಲಾರಿ-ಬೈಕ್ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿಂತೆ ಬಿಬಿಎಂಪಿ ಕಸದ ಲಾರಿ (BBMP Garbage Lorry) ಚಾಲಕನನ್ನು ಹಲಸೂರು ಗೇಟ್ ಸಂಚಾರ ಪೊಲೀಸರು (Traffic Police) ಬಂಧಿಸಿದ್ದಾರೆ. ಶಿವಶಂಕರ್ (38) ಬಂಧಿತ ಲಾರಿ ಚಾಲಕ. ಅಪಘಾತದ ಬಳಿಕ ಚಾಲಕ ಶಿವಶಂಕರ್ ಪರಾರಿಯಾಗಿದ್ದನು. ಸದ್ಯ ಪೊಲೀಸರು ಚಾಲಕ ಶಿವಶಂಕರ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಚಾಲಕ ಶಿವಶಂಕರ್ ರಕ್ತ ಮಾದರಿಯನ್ನು ಸಂಗ್ರಹಿಸಿ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಯಲಿದೆ.
ರವಿವಾರ ರಾತ್ರಿ ಅಪಘಾತ ಸಂಭವಿಸಿ, ಟೆಕ್ಕಿಗಳಿಬ್ಬರು ಮೃತಪಟ್ಟಿದ್ದಾರೆ. ಇದು ದುರದೃಷ್ಟಕರ. ಮೃತರ ಕುಟುಂಬಕ್ಕೆ ಬಿಬಿಎಂಪಿ ನೆರವು ನೀಡುತ್ತೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಘಟನೆಗೆ ಯಾರು ಕಾರಣ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಬೈಕ್ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದರೆ ನಾವು ಜವಾಬ್ದಾರಾಗುತ್ತೇವೆ. ಆದರೆ ಈ ಪ್ರಕರಣದಲ್ಲಿ ಲಾರಿಗೆ ಹಿಂದಿನಿಂದ ಬೈಕ್ ಗುದ್ದಿದೆ. ಬೈಕ್ನಲ್ಲಿ ಪ್ರಯಾಣಿಸುತ್ತಿದ್ದವರು ಕಸದ ಲಾರಿ ಹಿಂಭಾಗ ಸಿಲುಕಿದ್ದರು. ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಸತ್ಯಾಂಶ ತಿಳಿಯುವವರೆಗೆ ಕಾಯೋಣ. ಕಸದ ಲಾರಿ ಚಾಲಕರಿಂದ ತಪ್ಪಾಗಿದ್ದರೆ ನಾವೇ ಜವಾಬ್ಬಾರಿ ಹೊರುತ್ತೇವೆ. ಬಿಬಿಎಂಪಿ ಕಸ ವಿಲೇವಾರಿ ಗುತ್ತಿಗೆದಾರನಿಂದಲೂ ಪರಿಹಾರ ಕೊಡಿಸ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಇದನ್ನೂ ಓದಿ: ಕುಡುಕರ ಅಡ್ಡೆಯಂತಾದ ಬಿಬಿಎಂಪಿ ಆಸ್ಪತ್ರೆ ಆವರಣ; ರಾತ್ರಿಯಾದ್ರೆ ಆಸ್ಪತ್ರೆ ಅಂಗಳವೇ ಬಾರು, ಸುತ್ತಮುತ್ತ ಕಸದ ದರ್ಬಾರು!
ರವಿವಾರ ರಾತ್ರಿ 8:45ರ ಸುಮಾರಿಗೆ ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ಕಸದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಟಿಸಿಎಸ್ ಕಂಪನಿ ಉದ್ಯೋಗಿಗಳಾದ ಪ್ರಶಾಂತ್, ಶಿಲ್ಪಾ ಮೃತಪಟ್ಟಿದ್ದಾರೆ. ಟೆಕ್ಕಿ ಪ್ರಶಾಂತ್ ಬೆಂಗಳೂರಿನ ಬಾಣಸವಾಡಿ ನಿವಾಸಿಯಾಗಿದ್ದಾನೆ.
ಟೆಕ್ಕಿ ಶಿಲ್ಪಾ ಆಂಧ್ರಪ್ರದೇಶದ ಹಿಂದೂಪುರ ನಿವಾಸಿಯಾಗಿದ್ದಳು. ಟೆಕ್ಕಿ ಶಿಲ್ಪಾ ಬೆಂಗಳೂರಿನ ನಾಗವಾರದ ಪಿಜಿಯಲ್ಲಿ ನೆಲೆಸಿದ್ದಳು. ಪ್ರಶಾಂತ್, ಶಿಲ್ಪಾ ಬೈಕ್ನಲ್ಲಿ ಊಟಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ