ಕುಡುಕರ ಅಡ್ಡೆಯಂತಾದ ಬಿಬಿಎಂಪಿ ಆಸ್ಪತ್ರೆ ಆವರಣ; ರಾತ್ರಿಯಾದ್ರೆ ಆಸ್ಪತ್ರೆ ಅಂಗಳವೇ ಬಾರು, ಸುತ್ತಮುತ್ತ ಕಸದ ದರ್ಬಾರು!
ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡೆಂಗ್ಯೂ ಕಂಟ್ರೋಲ್ ಮಾಡಿ, ಸ್ವಚ್ಪತೆ ಕಾಪಾಡಿ ಅಂತ ಬಾಯಿಬಡಿದುಕೊಳ್ಳೋ ಪಾಲಿಕೆ, ಇದೀಗ ತನ್ನದೇ ವ್ಯಾಪ್ತಿಯ ಬಿಬಿಎಂಪಿ ಆಸ್ಪತ್ರೆಗಳ ಸ್ವಚ್ಚತೆ ಮರೆದಂತಿದೆ. ವಿಜಯನಗರದ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಕುಡುಕರ ಅಡ್ಡೆಯಾಗಿದ್ದು, ಕಸದರಾಶಿ, ಮದ್ಯದ ಬಾಟಲಿಗಳಿಂದ ಗಬ್ಬುನಾರುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ಕೊಡಬೇಕಾದ ಆಸ್ಪತ್ರೆಗೆ ಚಿಕಿತ್ಸೆ ನೀಡಬೇಕಾದ ಸ್ಥಿತಿ ಎದುರಾಗಿದೆ. ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಬಯಲಾಗಿದೆ.
ಬೆಂಗಳೂರು, ಜುಲೈ.28: ವಿಜಯನಗರದ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದ (Vijayanagar Government Hospital) ಆವರಣದಲ್ಲಿ ಅವ್ಯವಸ್ಥೆಯ ಚಿತ್ರಣ ಎದ್ದು ಕಾಣುತ್ತಿದೆ. ಸುತ್ತಮುತ್ತಲ ಜನರಿಗೆ ಚಿಕಿತ್ಸೆ ನೀಡ್ತಿರೋ ಈ ಆಸ್ಪತ್ರೆಗೆ ಇದೀಗ ಚಿಕಿತ್ಸೆ ಬೇಕಾಗಿದ್ದು, ಇಡೀ ಆಸ್ಪತ್ರೆಯ ಆವರಣ ಗಬ್ಬೆದ್ದು ನಾರ್ತಿದೆ. ಎಲ್ಲೆಂದರಲ್ಲಿ ಬಿದ್ದಿರೋ ಬಿಯರ್ ಬಾಟಲ್ಗಳು, ಕಾಲಿಟ್ಟ ಕಡೆಯಲ್ಲ ಕಾಣಿಸ್ತಿರೋ ಕಸದ ರಾಶಿ, ಗೇಟ್ ಇಲ್ಲದ ಕಾಂಪೌಂಡ್, ಹೀಗೆ ಸರ್ಕಾರಿ ಆಸ್ಪತ್ರೆ ಪಾಳುಬಿದ್ದ ಕಟ್ಟಡದಂತಾಗಿದೆ.
ಈ ಆಸ್ಪತ್ರೆ ಕಟ್ಟಡಕ್ಕೆ ಗೇಟ್ ಇಲ್ಲದಿರೋದರಿಂದ ರಾತ್ರಿಯಾದ್ರೇ ಸಾಕು ಅಕ್ಕಪಕ್ಕದ ಕಾಲೋನಿ ಪುಂಡರು ಆಸ್ಪತ್ರೆಯನ್ನೇ ಅಡ್ಡೆಮಾಡಿಕೊಂಡು ಮದ್ಯಸೇವನೆ, ಅನೈತಿಕ ಚಟುವಟಿಕೆ ಮಾಡುತ್ತಿದ್ದಾರೆ. ಅತ್ತ ಆಸ್ಪತ್ರೆಯ ಆವರಣದಲ್ಲಿ ಬಿಯರ್ ಬಾಟಲ್ ಬಿಸಾಕಿದ್ರೆ, ಆಸ್ಪತ್ರೆ ಸುತ್ತಮುತ್ತ ಜನರು ಕಸ ಸುರಿಯುತ್ತಿರೋದು, ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆ ಬರೋದಕ್ಕೂ ಹಿಂದೇಟು ಹಾಕುವಂತಾಗಿದೆ.
ಇದನ್ನೂ ಓದಿ: ರವಿವಾರದ ಶಾಕ್! ಬೆಂಗಳೂರು ನಗರ, ಗ್ರಾಮಾಂತರದ ಈ ಏರಿಯಾಗಳಲ್ಲಿ ವಿದ್ಯುತ್ ಕಟ್
ಅತ್ತ ಆಸ್ಪತ್ರೆಯ ಆವರಣದಲ್ಲೇ ಮೆಡಿಕಲ್ ವೇಸ್ಟ್ ಕೂಡ ವಿಲೇವಾರಿಯಾಗದೇ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಟ್ಟಿದ್ದು, ಇದು ಕೂಡ ಅಪಾಯಕ್ಕೆ ಆಹ್ವಾನ ನೀಡ್ತಿದೆ. ಇದೆಲ್ಲದರ ಮಧ್ಯೆ ಇದೀಗ ಡೆಂಗ್ಯೂ ಅಬ್ಬರ ಕೂಡ ಜೋರಾಗಿದ್ರು, ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸದ ಪಾಲಿಕೆಗೆ ಜನರು ಹಿಡಿಶಾಪ ಹಾಕ್ತಿದ್ದಾರೆ. ಆಸ್ಪತ್ರೆ ಆವರಣವನ್ನ ಇನ್ನಾದ್ರೂ ಸ್ವಚ್ಛ ಮಾಡಿ ಅಂತಾ ಆಗ್ರಹ ಮಾಡ್ತಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಡೆಂಗ್ಯೂ ಅಬ್ಬರ ಜೋರಾಗಿದ್ರೆ, ಇತ್ತ ಊರಿಗೆಲ್ಲ ಬುದ್ಧಿ ಹೇಳುವ ಪಾಲಿಕೆಯ ಆಸ್ಪತ್ರೆಯ ಸ್ಥಿತಿಯೇ ಚಿಂತಾಜನಕವಾಗಿದೆ. ಆಸ್ಪತ್ರೆಯ ಆವರಣ ಸ್ವಚ್ಛ ಮಾಡಿ ಅಂತಾ ಪದೇ ಪದೇ ಮನವಿ ಮಾಡಿಕೊಂಡು ಸುಸ್ತಾದ ಆಸ್ಪತ್ರೆ ಸಿಬ್ಬಂದಿ ಮಾಸ್ಕ್ ಹಾಕೊಂಡೇ ಪ್ರತಿನಿತ್ಯ ಕೆಲಸ ಮಾಡ್ತಿದ್ದು, ಸದ್ಯ ಪಾಲಿಕೆ ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ