ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತೆರವಾಗಲಿದೆಯಾ ಟೋಲ್ ಬೂತ್? ಸದ್ಯದಲ್ಲೇ ಜಿಎನ್‌ಎಸ್‌ಎಸ್ ಪ್ರಾಯೋಗಿಕ ಅಳವಡಿಕೆ
ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್‌ಗಳನ್ನು ತೆಗೆದುಹಾಕಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹಲವು ಬಾರಿ ಹೇಳಿದ್ದರು. ಆದರೆ, ಅದು ಜಾರಿಗೆ ಬಂದಿರಲಿಲ್ಲ. ಈಗ ಆ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ಬಗ್ಗೆ ಹೊಸ ಅಪ್ಡೇಟ್ ನೀಡಿದೆ. ವಿವರಗಳಿಗೆ ಮುಂದೆ ಓದಿ.
ಬೆಂಗಳೂರು, ಜುಲೈ 30: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಕುರಿತು ಪ್ರಾಯೋಗಿಕ ಅಧ್ಯಯನ ಶೀಘ್ರದಲ್ಲೇ ಆರಂಭವಾಗಲಿದೆ. ದೇಶದಾದ್ಯಂತ ಟೋಲ್ ಬೂತ್‌ಗಳನ್ನು ತೆಗೆದುಹಾಕುವ ಯೋಜನೆಯ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಗೆ ವರ್ಗಾಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಅನುಷ್ಠಾದ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಪ್ರಾಯೋಗಿಕ ಅಧ್ಯಯನಕ್ಕಾಗಿ ಆಯ್ಕೆ ಮಾಡಲಾದ ಎರಡು ಹೆದ್ದಾರಿಗಳಲ್ಲಿ, ಕರ್ನಾಟಕದ ಬೆಂಗಳೂರು-ಮೈಸೂರು ಹೆದ್ದಾರಿ ಕೂಡ ಒಂದು. ಪ್ರಯೋಗಗಳಿಗೆ ಸಿದ್ಧತೆಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ಪ್ರಾಯೋಗಿಕ ಅನುಷ್ಠಾನ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಬಲಿತ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ ಜಿಎನ್‌ಎಸ್‌ಎಸ್ ಪ್ರಾಯೋಗಿಕ ಅನುಷ್ಠಾನದ ಹೊಣೆ ಹೊತ್ತುಕೊಂಡಿದೆ.
ಎಲ್ಲೆಲ್ಲ ಜಿಎನ್‌ಎಸ್‌ಎಸ್ ಪ್ರಾಯೋಗಿಕ ಅನುಷ್ಠಾನ?
ಬೆಂಗಳೂರು ಮೈಸೂರು ಹೆದ್ದಾರಿಯ ಒಂದು ನಿರ್ದಿಷ್ಟ ಭಾಗದಲ್ಲಿ ಮಾತ್ರ ಜಿಎನ್‌ಎಸ್‌ಎಸ್ ವ್ಯವಸ್ಥೆಯ ಪ್ರಾಯೋಗಿಕ ಅನುಷ್ಠಾನ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಆಧಾರಿತ ಟೋಲ್ ಸಂಗ್ರಹವು ಮುಂದುವರಿಯಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಜಿಎನ್‌ಎಸ್‌ಎಸ್ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ವರೆಗೆ ಟೋಲ್ ಬೂತ್‌ಗಳು ಇರುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ವ್ಯವಸ್ಥೆಯಡಿ ಟೋಲ್ ಸಂಗ್ರಹ ಹೇಗೆ?
ಜಿಎನ್‌ಎಸ್‌ಎಸ್ ವ್ಯವಸ್ಥೆಯಡಿಯಲ್ಲಿ ಟೋಲ್ ಕಡಿತ ಹೇಗೆ ಎಂಬುದನ್ನು ವಿವರಿಸಿದ ಅಧಿಕಾರಿ, ಹೆದ್ದಾರಿಯನ್ನು ಜಿಯೋ ಫೆನ್ಸಿಂಗ್ ಮಾಡಲಾಗುವುದು. ವಾಹನವು ಹೆದ್ದಾರಿಯನ್ನು ಪ್ರವೇಶಿಸಿದ ನಂತರ, ವಾಹನದಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಸಾಧನದ ಮೂಲಕ ಸಾಫ್ಟ್‌ವೇರ್ ಅದನ್ನು ಪತ್ತೆಮಾಡುತ್ತದೆ. ವಾಹನವು ಹೆದ್ದಾರಿಯಿಂದ ನಿರ್ಗಮಿಸಿದ ನಂತರ, ಅದು ಪ್ರವೇಶಿಸಿದ ಮತ್ತು ನಿರ್ಗಮಿಸಿದ ವ್ಯಾಪ್ತಿಯ ಪ್ರಯಾಣದ ದೂರವನ್ನು ಲೆಕ್ಕಹಾಕುತ್ತದೆ ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಅಡಿಯಲ್ಲಿ ಟೋಲ್ ಕಡಿತ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಸಿದ್ಧವಾಗಲಿವೆ 17 ಸಿಗ್ನಲ್ ಮುಕ್ತ ಕಾರಿಡಾರ್‌ಗಳು
ವಾಹನಗಳಿಗೆ ಜಿಪಿಎಸ್ ಕಡ್ಡಾಯ
ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹಣೆಯೊಂದಿಗೆ, ವಾಹನಗಳಿಗೆ ಜಿಪಿಎಸ್ ಸಾಧನ ಅಳವಡಿಸುವುದು ಕಡ್ಡಾಯವಾಗಲಿದೆ. ಹೆದ್ದಾರಿ ಪ್ರಾಧಿಕಾರವು ಸದ್ಯ ನಂಬರ್ ಪ್ಲೇಟ್‌ಗಳ ಮೂಲಕ ಟೋಲ್ ಸಂಗ್ರಹಿಸುವ ಆಯ್ಕೆಗಳನ್ನೂ ಅನ್ವೇಷಿಸುತ್ತಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ, ವಾಹನಗಳು ಜಿಪಿಎಸ್ ಸಾಧನವನ್ನು ಹೊಂದಿರಬೇಕಾಗಿಲ್ಲ. ಆಗ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಬಳಸಿಕೊಂಡು ಪ್ರವೇಶ ಮತ್ತು ನಿರ್ಗಮನವನ್ನು ಲೆಕ್ಕಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 am, Tue, 30 July 24