ಆಷಾಢದ ಗಾಳಿಗೆ ಭಯ ಹುಟ್ಟಿಸುತ್ತಿವೆ ಒಣಗಿದ ಮರಗಳು; ಬಿಬಿಎಂಪಿ ವಿರುದ್ಧ ಆಕ್ರೋಶ
ಬೆಂಗಳೂರಿನ ಹಲವು ಕಡೆ ಒಣಗಿದ ಮರಗಳು ಹೆಚ್ಚಾಗಿದ್ದು ಜೀವ ಭಯದಲ್ಲೇ ಜನರು ಓಡಾಡುವಂತಾಗಿದೆ. ಬಸ್ ನಿಲ್ದಾಣ ಸೇರಿದಂತೆ ಹೆಚ್ಚಾಗಿ ಜನ ಓಡಾಡವ ಸ್ಥಳಗಳಲ್ಲಿ ಒಣ ಮರಗಳು ಬಲಿಗಾಗಿ ಕಾಯುತ್ತಿದ್ದು ಬಿಬಿಎಂಪಿ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಒಣ ಮರಗಳನ್ನು ತೆರವುಗೊಳಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು, ಜುಲೈ.28: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮಂದಿಗೆ ಈಗ ಟೆನ್ಷನ್ ಶುರುವಾಗಿದೆ. ಯಾವಾಗ, ಎಲ್ಲಿ, ಹೇಗೆ ಮರ (Trees) ಬೀಳುತ್ತೋ ಅಂತ ತಲೆ ನೋವಾಗಿದೆ. ಆಷಾಢದ ಗಾಳಿಗೆ ಮರಗಳು ಧರೆಗುರುಳುತ್ತಿವೆ. ಒಣಗಿದ ಮರಗಳಿಂದ ಅಪಾಯವಾಗ್ತಿದ್ರೂ ಬಿಬಿಎಂಪಿ ಯಾದುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ರಾಜಧಾನಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಒಣಗಿದ ಮರಗಳು ಬಲಿಗಾಗಿ ಕಾದು ನಿಂತಿವೆ. ಮರಗಳ ರೆಂಬೆ-ಕೊಂಬೆಗಳು ಒಣಗಿ ನೇತಾಡ್ತಿದ್ರೂ ಮರಗಳನ್ನ ತೆರವು ಮಾಡದೇ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿದೆ. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಡೆಡ್ಲಿ ಮರಗಳ ಮುಖ ಬಯಲಾಗಿದೆ. ವಿಧಾನಸೌಧದ ಕೂಗಳತೆ ದೂರದಲ್ಲೇ ಮರದ ಕೊಂಬೆ ಬಲಿಗಾಗಿ ಕಾದು ನಿಂತಿವೆ. ಬಸ್ ನಿಲ್ದಾಣದ ಸಮೀಪ ಬೃಹತ್ ಕೊಂಬೆಯೊಂದು ಒಣಗಿ ನಿಂತಿದೆ. ಮರದ ಕೊಂಬೆಯಿಂದ ಒಂದೊಂದಾಗಿ ತುಂಡುಗಳು ರಸ್ತೆಗೆ ಬಿದ್ದಿದ್ದು ಜನರಿಗೆ ಕಿರಿಕಿರಿಯಾಗುತ್ತಿದೆ.
ಇದನ್ನೂ ಓದಿ: ಹುಲ್ಲು ಬೆಳೆಯಿರಿ..! ನೂರಕ್ಕೆ ನೂರು ತೆರಿಗೆ ಉಳಿಸಲು ಉಡುಪಿಯ ಈ ವ್ಯಕ್ತಿಯ ಐಡಿಯಾ
ಇಷ್ಟಾದ್ರೂ ಮರ ತೆರವು ಮಾಡದೆ ಬಿಬಿಎಂಪಿ, ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ. ಇತ್ತ ಎಂ.ಎಸ್.ಬಿಲ್ಡಿಂಗ್ ಅಂಗಳದಲ್ಲೂ ಒಣಗಿರೋ ಕೊಂಬೆಗಳಿವೆ. ನೃಪತುಂಗ ರಸ್ತೆಯಲ್ಲೂ ಬಲಿಗಾಗಿ ಕೊಂಬೆಗಳು ಕಾದು ನಿಂತಿವೆ. ಅಪಾಯಕ್ಕೆ ಆಹ್ವಾನ ನೀಡ್ತಿದ್ರೂ ಪಾಲಿಕೆ ನಿದ್ದೆಗೆ ಜಾರಿದೆ. ಮಲ್ಲೇಶ್ವರಂನ ಸಂಪಂಗಿ ರಸ್ತೆಯಲ್ಲಿ ಕೊಂಬೆ ಕಟ್ ಆಗಿ ಬಿದ್ದಿದೆ. ಯಾವ ಕ್ಷಣದಲ್ಲಾದ್ರೂ ಅಪಾಯ ತದ್ದೊಡ್ಡುವ ಸ್ಥಿತಿಯಲ್ಲಿದೆ. ನಿತ್ಯ ನೂರಾರು ಜನರು ಓಡಾಡೋ ರಸ್ತೆಗಳಲ್ಲೇ ಮರಗಳು ಒಣಗಿ ನಿಂತಿವೆ. ಸದ್ಯ ನಗರದಲ್ಲಿ ಬದಲಾದ ವಾತಾವರಣದಿಂದ ಗಾಳಿ, ಮಳೆ ಹೆಚ್ಚಾಗಿದ್ದು ಒಣಗಿದ ಮರಗಳನ್ನು ತೆರವು ಮಾಡುವಂತೆ ಪಾಲಿಕೆಗೆ ಜನರು ಒತ್ತಾಯಿಸಿದ್ದಾರೆ. ಸಾಲು ಸಾಲು ಅವಾಂತರಗಳು ಸಂಭವಿಸಿದ್ರೂ ಪಾಲಿಕೆ ಮೌನವಹಿಸಿದೆ. ಪಾಲಿಕೆ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿಬೇಕು ಎಂದು ಸಿಟಿಮಂದಿ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:56 pm, Sun, 28 July 24