ಬೆಂಗಳೂರು, ಜ.27: ಅಭಿವೃದ್ಧಿಯ ಹೆಸರಲ್ಲಿ ಕಾಂಕ್ರೀಟ್ ಕಾಡಾಗಿ ಬದಲಾಗ್ತಿರೋ ಬೆಂಗಳೂರಲ್ಲಿ (Bengaluru) ನೀರಿನ ಸದ್ಬಳಕೆ ಮಾಡಿಕೊಳ್ಳೋಕೆ ಬಿಬಿಎಂಪಿ (BBMP) ಮುಂದಾಗಿದೆ. ರಾಜ್ಯ ರಾಜಧಾನಿಯ ಪಾರ್ಕ್ ಗಳ ನಿರ್ವಹಣೆಗೆ ಮಳೆ ನೀರಿನ ಸದ್ಬಳಕೆಗೆ ಪ್ಲಾನ್ ಮಾಡಿರುವ ಬಿಬಿಎಂಪಿ, ಬೆಂಗಳೂರಿನ 115 ಪಾರ್ಕ್ ಗಳಲ್ಲಿ ಇಂಗುಗುಂಡಿ ನಿರ್ಮಿಸೋಕೆ ಸಜ್ಜಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಪಾರ್ಕ್ ಗಳಲ್ಲಿ ನಲನಲಿಸುವ ಗಿಡ-ಮರಗಳನ್ನ ಪೋಷಣೆ ಮಾಡೋಕೆ ಪಾಲಿಕೆ ಹಲವು ಕೆಲಸ ಮಾಡ್ತಿದೆ. ಸದ್ಯ ಕೆಲ ಪಾರ್ಕ್ ಗಳ ನಿರ್ವಹಣೆಯನ್ನ ಖಾಸಗಿಯವರಿಗೆ ವಹಿಸಿರೋ ಪಾಲಿಕೆ, ಇದೀಗ CSR ಫಂಡ್ ಬಳಸಿಕೊಂಡು ಮಳೆ ನೀರಿನ ಮರುಬಳಕೆಗೆ ಹೊಸದೊಂದು ಪ್ಲಾನ್ ಸಿದ್ಧಪಡಿಸಿದೆ. ಬೆಂಗಳೂರಿನ 115 ಪಾರ್ಕ್ ಗಳಲ್ಲಿ ಇಂಗುಗುಂಡಿ ನಿರ್ಮಿಸಲು ಸಜ್ಜಾಗಿರೋ ಪಾಲಿಕೆ, ಆ ಮೂಲಕ ಮಳೆನೀರಿನ ಸಂರಕ್ಷಣೆ ಜೊತೆಗೆ ಮರುಬಳಕೆ ಮಾಡೋದಕ್ಕೆ ಪ್ಲಾನ್ ಮಾಡಿದೆ.
ಸದ್ಯ ಮುಂದಿನ ಮಾನ್ಸೂನ್ ಒಳಗಾಗಿ ಸುಮಾರು 1 ಸಾವಿರ ಇಂಗುಗುಂಡಿಗಳ ನಿರ್ಮಾಣಕ್ಕೆ ಪ್ಲಾನ್ ಮಾಡಿರೋ ಪಾಲಿಕೆ, ಈಗಾಗಲೇ ದಾಸರಹಳ್ಳಿ, ಯಲಹಂಕ, ದಕ್ಷಿಣವಲಯದಲ್ಲಿ ಕೆಲಸ ಶುರುಮಾಡಿದೆ. ವರ್ಷದೊಳಗೆ ಸಾಧ್ಯವಾದಷ್ಟು ಗುಂಡಿಗಳನ್ನ ಮಾಡೋಕೆ ಸಜ್ಜಾಗಿದೆ. 20 ಅಡಿ ಆಳ, 4 ಅಡಿ ಅಗಲ ಇರೋ ಈ ಇಂಗುಗುಂಡಿಗಳ ನಿರ್ಮಾಣಕ್ಕೆ ಒಂದು ಗುಂಡಿಗೆ 40 ಸಾವಿರ ರೂಪಾಯಿ ವೆಚ್ಚವಾಗಲಿದ್ದು ಈ ವೆಚ್ಚವನ್ನ CSR ಫಂಡ್ ಮೂಲಕ ಭರಿಸೋಕೆ ಪಾಲಿಕೆ ನಿರ್ಧರಿಸಿದೆ.
ಇದನ್ನೂ ಓದಿ: ರಾತ್ರೊರಾತ್ರಿ ಕ್ವಾರಿಯಲ್ಲಿ ಕಸ ಸುರಿದು ಬೆಂಕಿ ಹಚ್ಚಿ ಅವಾಂತರ: ಬಿಬಿಎಂಪಿ ಎಡವಟ್ಟಿಗೆ ಜನರು ಹೈರಾಣು
ಇನ್ನು ಈ ಹಿಂದೆ ಕೂಡ ಕೆಲ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಲಾಲ್ ಬಾಗ್, ಚಾಮರಾಜಪೇಟೆಯ ಜಿಂಕೆವನ ಸೇರಿದಂತೆ ಹಲವೆಡೆ ಕೆಲ ಇಂಗುಗುಂಡಿಗಳನ್ನ ನಿರ್ಮಿಸಲಾಗಿದೆ. ಆದರೆ ಇದೀಗ ನಿರ್ಮಾಣ ಮಾಡಲಿರೋ ಇಂಗುಗುಂಡಿಗಳು ಈ ಹಿಂದೆ ಇದ್ದ ಗುಂಡಿಗಳಿಗಿಂತ ದೊಡ್ಡದಾಗಿರಲಿದ್ದು, ಒಂದು ಗುಂಡಿಯಿಂದ ಸುಮಾರು 4 ಸಾವಿರ ಲೀಟರ್ ನೀರು ಸಂಗ್ರಹಿಸೋಕೆ ತಯಾರಿ ನಡೆಸಲಾಗುತ್ತಿದೆ.
ಒಟ್ಟಾರೆ ಬೆಂಗಳೂರಿನ ಒಂದಷ್ಟು ಕಡೆಗಳಲ್ಲಿ ನೀರಿನ ಹಾಹಾಕಾರ ಇರೋ ಸಮಸ್ಯೆಗಳು ಕೇಳಿಬರ್ತಿರೋ ಹೊತ್ತಲ್ಲೇ, ಪಾಲಿಕೆಯ ಈ ನಡೆ ಒಂದಷ್ಟು ಆಶಾಭಾವನೆ ಮೂಡಿಸ್ತಿದೆ. ಸದ್ಯ ವ್ಯರ್ಥವಾಗಿ ಹರಿದುಹೋಗುವ ಮಳೆ ನೀರಿನ ಸದ್ಬಳಕೆಗೆ ಕೈಗೊಂಡಿರೋ ಈ ಯೋಜನೆ ಎಷ್ಟರಮಟ್ಟಿಗೆ ಜಾರಿಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ