ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಟ್ಯಾಂಕರ್ಗಳಿಗೆ ಬಿಬಿಎಂಪಿ ಶಾಕ್; ದರ ನಿಗದಿಗೆ ಚಿಂತನೆ
ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದ್ದು ದರ ನಿಗದಿ ಮಾಡುವ ಬಗ್ಗೆ ತಯಾರಿ ನಡೆಸಿದೆ. ಪಾಲಿಕೆ ಮುಖ್ಯ ಆಯುಕ್ತರು ಟ್ಯಾಂಕರ್ ಮಾಫಿಯಾ ಪರಿಶೀಲನೆಗೆ ಮುಂದಾಗಿದ್ದಾರೆ. ಒಂದು ವೇಳೆ ಹೆಚ್ಚು ದರ ವಸೂಲಿ ಮಾಡಿದ್ರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಚಿಂತನೆ ನಡೆದಿದೆ ಎಂದು ಟಿವಿ9ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬೆಂಗಳೂರು, ಫೆ.18: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಬಿಸಿಲಿನಿಂದಾಗಿ ಜನರು ರೋಸಿಹೋಗ್ತಿದ್ದು, ಕೆಲವೊಂದು ಏರಿಯಾಗಳಲ್ಲಿ ನೀರಿನ ಸಮಸ್ಯೆಯು ಕಾಡುವುದಕ್ಕೆ ಶುರುವಾಗಿದೆ (Drinking Water Crisis). ಬೇಸಿಗೆಯನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಟ್ಯಾಂಕರ್ (Water Tank) ಮಾಲೀಕರು ದುಪ್ಪಟ್ಟು ಹಣ ವಸೂಲಿಗೆ ಮುಂದಾಗಿವೆ. ಹೀಗಾಗಿ ನೀರು ಪೂರೈಸುವ ಖಾಸಗಿ ಟ್ಯಾಂಕರ್ಗಳಿಗೆ ಬಿಬಿಎಂಪಿ (BBMP) ಶಾಕ್ ಕೊಟ್ಟಿದೆ.
ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಬಿಬಿಎಂಪಿ ತಯಾರಿ ನಡೆಸಿದೆ. ನಗರದಲ್ಲಿ ಕುಡಿಯೋ ನೀರಿನ ಅಭಾವ ಹೆಚ್ಚಾಗ್ತಿದೆ. ಇತ್ತ ನಗರದ ಬಹುತೇಕ ಕಡೆ ನೀರಿಗೆ ಹಾಹಾಕಾರ ಶುರುವಾಗಿದೆ. ನಗರದ ಕೆಲ ಪ್ರದೇಶಗಳಲ್ಲಿ ಟ್ಯಾಂಕರ್ ನೀರೆ ಗತಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಟ್ಯಾಂಕರ್ ಮಾಲೀಕರು ಹಣ ಮಾಡಲು ಮುಂದಾಗಿವೆ. ಬೇಕಾಬಿಟ್ಟಿ ರೇಟ್ ಪಡೆದು ಟ್ಯಾಂಕರ್ ನೀರು ಸರಬರಾಜು ಮಾಡ್ತಿದ್ದಾರೆ. 500-600 ರೂಪಾಯಿ ಇದ್ದ ಟ್ಯಾಂಕರ್ ನೀರು ಈಗ ಗಗನಕ್ಕೆ ಏರಿಕೆಯಾಗಿದೆ. ಇಂದಿರಾನಗರ, ರಾಜಾಜಿನಗರ, ಸುಂಕದಕಟ್ಟೆಯಲ್ಲಿ ಹೆಚ್ಚು ಬೆಲೆಗೆ ನೀರು ಮಾರಾಟ ಮಾಡಲಾಗುತ್ತಿದೆ. 20 ಸಾವಿರ ಲೀಟರ್ ನೀರಿಗೆ ₹6,500 ಪಡೆಯುತ್ತಿದ್ದಾರೆ. 5 ಸಾವಿರ ಲೀಟರ್ ನೀರಿಗೆ 1000 ದಿಂದ 6 ಸಾವಿರ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಈ ಮೊದಲು ಬಿಬಿಎಂಪಿ 5 ಸಾವಿರ ಲೀಟರ್ ಟ್ಯಾಂಕರ್ಗೆ 540 ರೂ., 12 ಸಾವಿರ ಲೀಟರ್ ನೀರಿಗೆ 1 ಸಾವಿರ ರೂ. ನಿಗದಿ ಮಾಡಿತ್ತು. ಆದರೆ ಬೇಸಿಗೆ ಆರಂಭಕ್ಕೂ ಮೊದಲೇ ಟ್ಯಾಂಕರ್ ಮಾಲೀಕರು ವಸೂಲಿಗೆ ಮುಂದಾಗಿವೆ. ಈ ಸಂಬಂಧ ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆ ನೀರು ಪೂರೈಸುವ ಖಾಸಗಿ ಟ್ಯಾಂಕರ್ ಮಾಲೀಕರಿಗೆ ದರ ನಿಗದಿಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಸಾರ್ವಜನಿಕರ ಅನುಕೂಲಕ್ಕೆ ದರ ನಿಗದಿ ಮಾಡಲು ಬಿಬಿಎಂಪಿ ಮುಂದಾಗಿದೆ. ಆಯಾ ವಲಯಗಳ ವಲಯ ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಿದೆ.
ಪಾಲಿಕೆ ಮುಖ್ಯ ಆಯುಕ್ತರು ಟ್ಯಾಂಕರ್ ಮಾಫಿಯಾ ಪರಿಶೀಲನೆಗೆ ಮುಂದಾಗಿದ್ದಾರೆ. ಒಂದು ವೇಳೆ ಹೆಚ್ಚು ದರ ವಸೂಲಿ ಮಾಡಿದ್ರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಚಿಂತನೆ ನಡೆದಿದೆ. ಅಧಿಕ ದರ ಪೀಕುತ್ತಿರೋ ಟ್ಯಾಂಕರ್ ಗಳನ್ನ ಮುಟ್ಟುಗೋಲು ಹಾಕಲು ಚಿಂತನೆ ನಡೆದಿದೆ. ಈಗಾಗಲೇ ಜಿಲ್ಲಾಡಳಿತ ಜೊತೆ ಸಭೆ ನಡೆಸಿ ಅಧಿಕಾರಿಗಳು ಖಾಸಗಿ ಟ್ಯಾಂಕರ್ ಗಳ ಸರ್ವೆ ನಡೆಸಿದ್ದಾರೆ. ಮುಂದಿನ ವಾರ ಹೊಸ ದರ ನಿಗದಿ ಮಾಡಿ ಸಾರ್ವಜನಿಕವಾಗಿ ಪ್ರಕಟಣೆಗೆ ಪ್ಲಾನ್ ಮಾಡಿದ್ದೇವೆ ಎಂದು ಟಿವಿ9ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ