ಡಿಸಿಎಂ ಕೊಟ್ಟ ಡೆಡ್ ಲೈನ್ ಮುಗಿಯುವ ಹಂತ; ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಪಾಲಿಕೆಯಿಂದ ಮತ್ತಷ್ಟು ವೇಗ

| Updated By: ಆಯೇಷಾ ಬಾನು

Updated on: Sep 15, 2024 | 8:44 AM

ಸಿಕಾನ್ ಸಿಟಿಯ ರಸ್ತೆಗುಂಡಿಗಳ ಬಗ್ಗೆ ಟಿವಿ 9 ಅಭಿಯಾನದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್ ಲೈನ್ ಮುಗಿಯೋಕೆ ಕೌಂಟ್ ಡೌನ್ ಶುರುವಾಗಿದೆ. ಡೆಡ್ ಲೈನ್ ಒಳಗೆ ಗುಂಡಿ ಮುಚ್ಚಲು ಫೀಲ್ಡ್ ಗಿಳಿದಿರೋ ಬಿಬಿಎಂಪಿ, ಸತತ 6 ನೇ ದಿನವೂ ಯಲಹಂಕ ವಲಯದಲ್ಲಿ ಗುಂಡಿ ಮುಚ್ಚಿವೆ. ಇತ್ತ ಡಿಕೆಶಿ ಡೆಡ್ ಲೈನ್ ಬಳಿಕ ಹಗಲು-ರಾತ್ರಿ ರೌಂಡ್ಸ್ ಹಾಕ್ತಿರೋ ಪಾಲಿಕೆ ಆಯುಕ್ತರು ನಿನ್ನೆ ಕೂಡ ಫೀಲ್ಡ್ ಗಿಳಿದು ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದ್ದಾರೆ.

ಡಿಸಿಎಂ ಕೊಟ್ಟ ಡೆಡ್ ಲೈನ್ ಮುಗಿಯುವ ಹಂತ; ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಪಾಲಿಕೆಯಿಂದ ಮತ್ತಷ್ಟು ವೇಗ
ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಪಾಲಿಕೆಯಿಂದ ಮತ್ತಷ್ಟು ವೇಗ
Follow us on

ಬೆಂಗಳೂರು, ಸೆ.15: ರಾಜಧಾನಿಯ ರಸ್ತೆಗುಂಡಿಗಳನ್ನ (Potholes) ಮುಚ್ಚುವ ಕೆಲಸ ಆರಂಭಿಸಿರೋ ಬಿಬಿಎಂಪಿ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar)ಕೊಟ್ಟಿದ್ದ ಡೆಡ್ ಲೈನ್ ಹತ್ತಿರವಾಗ್ತಿರೋ ಬೆನ್ನಲ್ಲೆ ಮತ್ತಷ್ಟು ಅಲರ್ಟ್ ಆಗಿದೆ. ಬೆಂಗಳೂರಿನ ರಸ್ತೆಗಳನ್ನ ಗುಂಡಿಮುಕ್ತ ಮಾಡದಿದ್ರೆ ಸಸ್ಪೆಂಡ್ ಮಾಡ್ತೀನಿ ಎಂದಿದ್ದ ಡಿಸಿಎಂ ಎಚ್ಚರಿಕೆಗೆ ಬೆಚ್ಚಿದ ಪಾಲಿಕೆ (BBMP) ಹಗಲು-ರಾತ್ರಿ ಎನ್ನದೇ ಗುಂಡಿ ಮುಚ್ಚುವ ಕೆಲಸ ಮಾಡ್ತಿದೆ. ಸದ್ಯ ಕಳೆದ ಐದು ದಿನಗಳಿಂದ ಗುಂಡಿ ಮುಚ್ಚುವ ಕೆಲಸ ಮಾಡ್ತಿರೋ ಪಾಲಿಕೆ ನಿನ್ನೆ ಯಲಹಂಕ ವಲಯದ ಸಹಕಾರನಗರ ಸುತ್ತಮುತ್ತ ರಸ್ತೈಗುಂಡಿಗಳಿಗೆ ತೇಪೆ ಹಚ್ಚಿದ್ರು. ವಲಯ ಆಯುಕ್ತರು, ಜಂಟಿ ಆಯುಕ್ತರು ಸೇರಿದಂತೆ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಗುಂಡಿ ಮುಚ್ಚಿಸಿದ್ರು.

ಇನ್ನು ಡಿಸಿಎಂ ಕೊಟ್ಟಿರೋ ಡೆಡ್ ಲೈನ್ ಗೆ ಇನ್ನೊಂದು ದಿನ ಬಾಕಿ ಇರೋ ಬೆನ್ನಲ್ಲೆ ಹಗಲು-ರಾತ್ರಿ ಸಿಟಿ ರೌಂಡ್ಸ್ ಹಾಕ್ತಿರೋ ಬಿಬಿಎಂಪಿ ಕಮಿಷನರ್, ಸಹಕಾರನಗರದಲ್ಲಿ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದ್ರು. ಈ ವೇಳೆ ರಸ್ತೆಗುಂಡಿಗಳನ್ನ ಮುಚ್ಚುವ ಕೆಲಸ ಭರದಿಂದ ಸಾಗ್ತಿದೆ. ಭಾನುವಾರ ಇದ್ರೂ ರಜೆ ಇಲ್ಲದೇ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದೇವೆ ಬಾಕಿ ಇರೋ ಗುಂಡಿಗಳನ್ನ ಕೂಡ ಮುಚ್ಚಿ ಗುಂಡಿಮುಕ್ತ ರಸ್ತೆ ಕೊಡ್ತೀವೆ ಎಂದರು.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಕಡಿಮೆಯಾದ ಮಳೆ, ಬಹುತೇಕ ಕಡೆ ಒಣಹವೆ

ಇತ್ತ ರಸ್ತೆಗುಂಡಿಗಳನ್ನ ಪರಿಶೀಲಿಸೋ ಜೊತೆಗೆ ಏರಿಯಾದ ಫುಟ್ ಪಾತ್, ಇತರೆ ರಸ್ತೆಗಳನ್ನೂ ಪರಿಶೀಲಿಸಿದ ತುಷಾರ್ ಗಿರಿನಾಥ್, ಗುಂಡಿಗಮನ ಆಪ್ ಅಲ್ಲದೇ ಎಲ್ಲೆಲ್ಲಿ ಗುಂಡಿ ಬಿದ್ದಿದೆ ಆ ರಸ್ತೆಗಳನ್ನ ಕೂಡ ಸರಿಪಡಿಸಬೇಕು ಅಂತಾ ಅಧಿಕಾರಿಗಳಿಗೆ ಸೂಚಿಸಿದ್ರು. ಇದೇ ವೇಳೆ ಹಾಟ್ ಮಿಕ್ಸ್ ಬಳಸಿ ಮುಚ್ಚಿದ್ದ ಗುಂಡಿಗಳು ಹಾಗೂ ಏರಿಯಾದ ರಸ್ತೆಗಳನ್ನ ಪರಿಶೀಲಿಸಿದ ಆಯುಕ್ತರು ರಸ್ತೆಗುಂಡಿ ಮುಚ್ಚುವ ಕಾರ್ಯ, ರಸ್ತೆಗಳ ಸ್ಥಿತಿಗತಿ ಪರಿಶೀಲಿಸಿದ್ರು.

ಒಟ್ಟಿನಲ್ಲಿ ಇಷ್ಟು ದಿನ ರಾಜಧಾನಿಯ ರಸ್ತೆಗುಂಡಿಗಳ ಬಗ್ಗೆ ಸೈಲೆಂಟ್ ಆಗಿದ್ದ ಬಿಬಿಎಂಪಿ, ಇದೀಗ ಡಿಸಿಎಂ ಡೆಡ್ ಲೈನ್ ಎಚ್ಚರಿಕೆಯಿಂದ ಹಗಲು ರಾತ್ರಿ ಎನ್ನದೇ ಗುಂಡಿಗಳ ಬಾಯಿ ಮುಚ್ಚಿಸೋಕೆ ಹೊರಟಿದೆ. ಸದ್ಯ ಡೆಡ್ ಲೈನ್ ಮುಗಿಯೋಕೆ ಕೌಂಟ್ ಡೌನ್ ಶುರುವಾಗಿದ್ದು, ಬಾಕಿ ಇರೋ ಗುಂಡಿಗಳಿಗೂ ಟಾರ್ ಭಾಗ್ಯ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:43 am, Sun, 15 September 24