
ಬೆಂಗಳೂರು, ಸೆಪ್ಟೆಂಬರ್ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆರೋಪಿ ಟೆಕ್ಕಿಯನ್ನು ಬಂಧಿಸಲಾಗಿದೆ. ಹೆಬ್ಬಗೋಡಿ ಪೊಲೀಸರು (Hebbagodi Police) ಆರೋಪಿ ಟೆಕ್ಕಿಯನ್ನು ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ವಾಸವಿದ್ದ ಟೆಕ್ಕಿ ಮೊಜೀಫ್ ಅಶ್ರಫ್ ಬೇಗ್ ಬಂಧಿತ ಯುವಕ. ಬಂಧಿತನ ಸಹೋದ್ಯೋಗಿ ಯುವತಿ ನಿಡಿದ ದೂರಿನ ಮೇರೆಗೆ ಹೆಬ್ಬಗೋಡಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಯುವಕ, ಯುವತಿ ಕೆಲಸ ಮಾಡ್ತಿದ್ದರು. ಆರೋಪಿ ಕಾಶ್ಮೀರಿ ಯುವಕ ಕೆಲಸದ ವೇಳೆ ಯುವತಿಗೆ ಪರಿಚಯವಾಗಿದ್ದ. ಬೆಂಗಳೂರಿನ ಶಿಕಾರಿಪಾಳ್ಯದಲ್ಲಿ ವಾಸವಿದ್ದ ಮೊಜೀಫ್ ಅಶ್ರಫ್ ಬೇಗ್, ಮದುವೆಯಾಗುವುದಾಗಿ ಟೆಕ್ಕಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಮದುವೆಯ ಹೆಸರಲ್ಲಿ ತನ್ನ ಧರ್ಮಕ್ಕೆ ಮತಾಂತರಗೊಳಿಸಲು (Love Jihad) ಯತ್ನಿಸಿದ ಎಂಬ ಆರೋಪವೂ ಬಂಧಿತನ ಮೇಲಿದೆ.
ಏನಿದು ಪ್ರಕರಣ?
ಮದುವೆ ಹೆಸರಲ್ಲಿ ಬೇರೆ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನ ನಡೆಸಿದ್ದು ಅಲ್ಲದೇ ಆರೋಪಿ ಬೆದರಿಕೆ ಸಹ ಹಾಕಿದ್ದನಂತೆ. ಈ ಬಗ್ಗೆ ಮೊದಲು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ, ಪೊಲೀಸರ ಸ್ಥಳ ಪರಿಶೀಲನೆ ವೇಳೆ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದಿದ್ದ ಕೃತ್ಯವಾಗಿದ್ದು, ಪ್ರಕರಣವನ್ನು ಬೆಳ್ಳಂದೂರು ಪೊಲೀಸರು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಿದ್ದಾರೆ.
ಇದನ್ನೂ ಓದಿ: ಬೆಳ್ಳಂದೂರು ಮಹಿಳಾ ಟೆಕ್ಕಿಯಿಂದ ಲವ್ ಜಿಹಾದ್ ಆರೋಪ: ಯುವಕನ ಬೆನ್ನುಹತ್ತಿ ಕಾಶ್ಮೀರಕ್ಕೆ ತೆರಳಿದ ಹೆಬ್ಬಗೋಡಿ ಪೊಲೀಸರು
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಟೆಕ್ಕಿ ಪತ್ತೆಗೆ ಬಲೆ ಬೀಸಿದ್ದಾರೆ. ಹೆಬ್ಬಗೋಡಿ ಪೊಲೀಸರ ತಂಡ ಕಾಶ್ಮೀರಕ್ಕೆ ತೆರಳಿದೆ. ಯುವತಿ ಹೇಳಿಕೆಯನ್ನಾಧರಿಸಿ, ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಐಪಿಸಿ ಸೆಕ್ಷನ್ 506, 34, 376,377, 420, 417 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ರಕ್ಷಣಾ ಕಾಯ್ದೆ 2022ರ ಅಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Fri, 22 September 23