ಬೆಂಗಳೂರು ನ.02: ನಗರದಲ್ಲಿ ಐವರು ಶಂಕಿತ ಉಗ್ರರ (Suspected Terrorists) ಬಂಧನ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ (CCB) ರಾಷ್ಟ್ರೀಯ ತನಿಖಾ ದಳ (NIA)ಗೆ ವರ್ಗಾವಣೆ ಮಾಡಿದೆ. ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್ ಬಂಧಿತ ಶಂಕಿತ ಉಗ್ರರು. ಸದ್ಯ ಎನ್ಐಎ ಅಧಿಕಾರಿಗಳು ಸಿಸಿಬಿ ಬಂಧಿಸಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಭಾರಿ ಅನಾಹುತ ಎಸಗಲು ಐವರು ಶಂಕಿತ ಉಗ್ರರು ಗ್ರೈನೇಡ್ ಸೇರಿದಂತೆ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು. ಶಂಕಿತ ಉಗ್ರ ನಾಸೀರ್ ಜೈಲಿನಲ್ಲಿದ್ದುಕೊಂಡೆ ಈ ಐವರು ಶಂಕಿತ ಉಗ್ರರ ಬ್ರೈನ್ ವಾಶ್ ಮಾಡಿದ್ದನು.
ಆರೋಪಿಗಳು ಸುಲ್ತಾನ್ ಪಾಳ್ಯದ ಪ್ರಾರ್ಥನಾ ಸ್ಥಳ ಮತ್ತು ಆರ್.ಟಿ ನಗರದ ಕನಕ ಬಡಾವಣೆಯ ಸೈಯದ್ ಸುಹೇಲ್ ಬಾಡಿಗೆ ಮನೆಯಲ್ಲಿ ಸಭೆ ಸೇರಿ ಉಗ್ರ ಚಟುವಟಿಕೆ ಹಾಗೂ ಸ್ಫೋಟ ನಡೆಸುವುದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಚರ್ಚೆ ನಡೆಸಿದ್ದರು. ಈ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಕೇಂದ್ರ ಗುಪ್ತಚರ ಇಲಾಖೆ ಸಂಪರ್ಕಿಸಿದ್ದರು. ನಂತರ ಎರಡೂ ವಿಭಾಗದ ಸಿಬ್ಬಂದಿ ಇದೇ ವರ್ಷ ಜುಲೈ 19 ರಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು.
ಆರ್ಟಿ ನಗರ, ಸುಲ್ತಾನ್ಪಾಳ್ಯ, ಡಿಜೆ ಹಳ್ಳಿ, ಕೋಡಿಗೆಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್ ಶಂಕಿತರನ್ನು ಬಂಧಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ ವೇಳೆ ಸಿಕ್ಕಿದ್ದ 5 ಗ್ರೆನೇಡ್ಗಳ ನಾಶ
7 ನಾಡ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿಗಳು, 12 ಮೊಬೈಲ್, ಡ್ರಾಗರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು. ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿ, ಅಪರಾಧದ ಒಳಸಂಚು, ಶಸ್ತ್ರಾಸ್ರ ಕಾಯ್ದೆ ಅಡಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೈಲು ಕಸ್ಟಡಿಯಿಂದ ಸಿಸಿಬಿ ಶಂಕಿತರನ್ನು ತನ್ನ ವಶಕ್ಕೆ ಪೆಡೆದು ವಿಚಾರಣೆ ನಡೆಸಿತ್ತು. ಇದೇ ವೇಳೆ ಜೈಲಿನಲ್ಲಿ ನಾಸೀರ್ ಪೋನ್ ಬಳಸ್ತಿದ್ದದ್ದು ಪತ್ತೆಯಾಗಿತ್ತು. ಇನ್ನು ಐವರು ಶಂಕಿತರನ್ನು ಮಾನಿಟರ್ ಮಾಡುತ್ತಿದ್ದ ಶಂಕಿತ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಜೈಲಿನಲ್ಲಿರುವ ನಾಸೀರ್ ಸೇರಿ ಐವರನ್ನು ಕಸ್ಟಡಿಗೆ ಪಡೆಯಲು ಎನ್ಐಎ ಸಿದ್ದತೆ ನಡೆಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Thu, 2 November 23