ಬೆಂಗಳೂರು, ನವೆಂಬರ್ 02: ಬೆಂಗಳೂರು (Bengaluru) ನಗರದಲ್ಲಿ ದೀಪಾವಳಿ ಹಬ್ಬದ (Deepavali) ಸಡಗರ ಮನೆ ಮಾಡಿದೆ. ಜನರು ಬಹಳ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಕ್ಕಳು, ದೊಡ್ಡವರು ಎಲ್ಲರು ಒಂದುಗೂಡಿ ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ನಗರದಲ್ಲಿ ಪಟಾಕಿ (Firecrackers) ಸದ್ದು ಜೋರಾಗಿದೆ. ಆದರೆ, ಪಟಾಕಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ವಾಯುಮಾಲಿನ್ಯ ಬಹಳಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಕಳೆದ ವಾರ 50ರ ಆಸುಪಾಸಿನಲ್ಲಿದ್ದಂತಹ ವಾಯು ಪ್ರಮಾಣ ಎರಡು-ಮೂರು ದಿನದಲ್ಲಿ 100ರ ಗಡಿ ದಾಟಿದ್ದು, ಕಳಪೆ ಗುಣಮಟ್ಟದ ಗಾಳಿಯನ್ನ ಹೊಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 50 ಎಕ್ಯೂ ಇದ್ದರೆ ಉತ್ತಮ ಗಾಳಿ ಎಂದರ್ಥ. 60 ರಿಂದ 80 ರ ಗಡಿಯಲ್ಲಿದ್ದರೆ ಸಾಧಾರಣ ಗುಣಮಟ್ಟದಲ್ಲಿದೆ. 100 ರಿಂದ 150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲದ ಗಾಳಿ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130ರ ಗಡಿ ದಾಟಿದೆ.
ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಶನಿವಾರ ನಗರದಲ್ಲಿ ವಾಯುಮಾಲಿನ್ಯ ಶೇ10 ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವವರಿಗಿಂತ..ನಿಂತು ನೋಡಿದವರಿಗೆ ಹೆಚ್ಚು ಗಾಯ..!
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಇಡೀ ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಟ ಬರೋಬ್ಬರಿ 5 ಸಾವಿರ ನೂತನ ವಾಹನಗಳು ನೋಂದಣಿಯಾಗ್ತಿದ್ದಾವೆ. ಅಂದರೆ, ತಿಂಗಳಿಗೆ ಒಂದೂವರೆ ಲಕ್ಷ ಹಾಗೂ ವರ್ಷಕ್ಕೆ 18 ಲಕ್ಷ ವಾಹನಗಳು ಹೊಸದಾಗಿ ರಾಜ್ಯದ ರಸ್ತೆಗೆ ಇಳಿಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ನೋಂದಣಿ ಆಗಿರುವ ವಾಹನಗಳ ಪ್ರಮಾಣದಲ್ಲಿ ಶೇ. 6.5ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿದಿನ ಎರಡು ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ವಾಹನಗಳಿಂದ ಕೂಡ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ