ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 10 ಪ್ರಕರಣಗಳು ದಾಖಲು

| Updated By: ವಿವೇಕ ಬಿರಾದಾರ

Updated on: Oct 28, 2024 | 1:41 PM

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಹಲವಾರು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಕಳೆದ ಒಂದು ವಾರದಲ್ಲಿ 10 ಬಾರಿ ಬೆದರಿಕೆಗಳು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ವೆಬ್‌ಸೈಟ್ ಮತ್ತು ಎಕ್ಸ್ ಖಾತೆಗಳ ಮೂಲಕ ಬೆದರಿಕೆ ಹಾಕಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 10 ಪ್ರಕರಣಗಳು ದಾಖಲು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್​ ಠಾಣೆ
Follow us on

ಬೆಂಗಳೂರು, ಅಕ್ಟೋಬರ್​ 28: ಬೆಂಗಳೂರು ಗ್ರಾಮಾಂತರ (Bengaluru) ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಮತ್ತು ವಿಮಾನಕ್ಕೆ ಬಾಂಬ್​ ಬೆದರಿಕೆ ಸಂದೇಶ (Bomb Threat) ಕಳುಹಿಸಿದ ಆರೋಪಿಗಳ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ​​ಪೊಲೀಸ್ ಠಾಣೆಯಲ್ಲಿ 10 ಕೇಸ್​ ದಾಖಲಾಗಿವೆ. ಕಳೆದ ಒಂದು ವಾರದಲ್ಲಿ 10 ಬಾರಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಕಿಡಿಗೇಡಿಗಳು ಅಕ್ಟೋಬರ್​ 22 ರಿಂದ 26ರವರೆಗೆ ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದರು.

ಕಿಡಿಗೇಡಿಗಳು ವೆಬ್​​ಸೈಟ್​ ಮತ್ತು ಎಕ್ಸ್ ಖಾತೆ ಮುಖಾಂತರ ವಿಮಾನ ನಿಲ್ದಾಣ ಮತ್ತು ಇಂಡಿಗೋ ಏರ್​ಲೈನ್ಸ್​​ ಸೇರಿದಂತೆ ಹಲವು ಏರ್​ಲೈನ್ಸ್​ಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ದೇವನಹಳ್ಳಿ ಎಸಿಪಿ ನವೀನ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.

ಬೆಂಗಳೂರು ಟು ಅಯೋಧ್ಯೆ ವಿಮಾನಕ್ಕೆ ಬಾಂಬ್​ ಬೆದರಿಕೆ

ಅಕ್ಟೋಬರ್​ 27 ರಂದು ಬೆಂಗಳೂರಿನಿಂದ ಅಯೋಧ್ಯೆ ಮಧ್ಯೆ ಸಂಚರಿಸುವ ವಿಮಾನಕ್ಕೆ ಕಿಡಿಗೇಡಿಗಳು ಬಾಂಬ್​ ಬೆದರಿಕೆ ಸಂದೇಶ ಕಳುಹಿಸಿದ್ದರು. ಬಾಂಬ್​ ಬೆದರಿಕೆ ಸಂದೇಶ ಬರುತ್ತಿದ್ದಂತೆ ವಿಮಾನ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾಗಿದೆ. ವಿಮಾನದಲ್ಲಿ ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್​ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್​ ಬೆದರಿಕೆ ಎಂದು ಖಾತರಿಯಾಗಿದೆ.

ಇದನ್ನೂ ಓದಿ: ತಿರುಪತಿಯ ಇಸ್ಕಾನ್ ದೇಗುಲಕ್ಕೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್​

ಮುಂಬೈ ಬೆಂಗಳೂರು ವಿಮಾನಕ್ಕೆ ಬಾಂಬ್​ ಬೆದರಿಕೆ

ಅಕ್ಟೋಬರ್​ 22 ರಂದು ಮುಂಬೈಯಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನಕ್ಕೆ ಬಾಂಬ್​ ಬೆದರಿಕೆ ಸಂದೇಶ ಬಂದಿತ್ತು. ಮುಂಬೈ-ಬೆಂಗಳೂರು ವಿಮಾನ ಸೇರಿದಂತೆ ಇಂಡಿಗೋ, ವಿಸ್ತಾರ ಏರ್​ಲೈನ್ಸ್​​, ಏರ್​ ಇಂಡಿಯಾದ ಸುಮಾರು 30 ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಇದರಿಂದ ದೇಶದ ವಿಮಾನ ಪ್ರಯಾಣಿಕರಲ್ಲಿ ಕೆಲ ಕಾಲ ಆತಂಕ ಮೂಡಿತ್ತು.

6 ವಿಮಾನಗಳಿಗೆ ಬಾಂಬ್​ ಬೆದರಿಕೆ

ಬೆಂಗಳೂರಿನಿಂದ ಹೊರಡುವ 6 ವಿಮಾನಗಳಲ್ಲಿ ತಲಾ ಇಬ್ಬರಂತೆ ಒಟ್ಟು 12 ಬಾಂಬರ್‌ಗಳಿದ್ದಾರೆ ಎಂದು ಅಕ್ಟೋಬರ್​ 20 ರಂದು ಅನಾಮಧೇಯ ಎಕ್ಸ್​ ಖಾತೆಯಿಂದ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಇಂಡಿಗೋ ಏರ್‌ಲೈನ್ಸ್‌ನ IX 233, IX 375, IX 481, IX 383, IX 549, IX 399 ವಿಮಾನಗಳಲ್ಲಿ ಬಾಂಬರ್‌ಗಳಿರುವುದಾಗಿ ಸಂದೇಶ ರವಾನಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ