ಬೆಂಗಳೂರಿನಲ್ಲಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳ ನಿರ್ಮಾಣ: ಸ್ಥಳಕ್ಕೆ ಬುಲ್ಡೋಜರ್ ಆಗಮನ!

ಬೆಂಗಳೂರಿನಲ್ಲಿ ಭಾರೀ ಮಳೆಯ ನಡುವೆ ನಿರ್ಮಾಣ ಹಂತದಲ್ಲಿರುವ ಅಕ್ರಮ ಕಟ್ಟಡ ಕುಸಿದು ಬಿದ್ದು 9 ಜನರು ಸಾವನ್ನಪ್ಪಿದ್ದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಉಮುಖ್ಯಮಂತ್ರಿ ಡಿಕೆಶಿ ಕೊಟ್ಟ ಎಚ್ಚರಿಕೆಯಿಂದ ಬಿಬಿಎಂಪಿ ಅಧಿಕಾರಿಗಳು ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗಿಳಿದಿದ್ದು, ಇದೀಗ ಮೆಜೆಸ್ಟಿಕ್​ನಲ್ಲಿ ಅಕ್ರಮ ಕಟ್ಟಡ ತೆರವಿಗೆ ಅಧಿಕಾರಿಗಳು ಬುಲ್ಡೋಜರ್ ಮೂಲಕ ಸ್ಥಳಕ್ಕೆ ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳ ನಿರ್ಮಾಣ: ಸ್ಥಳಕ್ಕೆ ಬುಲ್ಡೋಜರ್ ಆಗಮನ!
ಪ್ರಾತಿನಿಧಿಕ ಚಿತ್ರ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Oct 28, 2024 | 3:16 PM

ಬೆಂಗಳೂರು, (ಅಕ್ಟೋಬರ್ 28): ಸುಳ್ಳು ಮಾಹಿತಿ ನೀಡಿ ಅಕ್ರಮ ಕಟ್ಟಡ ನಿರ್ಮಾಣ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಮೊನ್ನೇ ಅಷ್ಟೇ ನಾಲ್ಕು ಅಂತಸ್ತಿಗೆ ಅನುಮತಿ ಪಡೆದು ಏಳು ಫ್ಲೋರ್​ ನಿರ್ಮಾಣ ಮಾಡಲಾಗುತ್ತಿದ್ದ ಕಟ್ಟಡ ಕುಸಿದು ಬಿದ್ದು 9 ಜನರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚೆತ್ತುಕೊಂಡು ಅಕ್ರಮ ಕಟ್ಟಡದ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಇದೀಗ ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿ ಅಕ್ರಮ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಮೆಜೆಸ್ಟಿಕ್ ನಲ್ಲಿ ದಿನಕ್ಕೆ ಸಾವಿರಾರು ಜನರು ಓಡಾಡುತ್ತಾರೆ. ಅಂತಹ ಜಾಗವನ್ನು ಕಬಳಿಸಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದೀಗ ಅದನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಬುಲ್ಡೋಜರ್ ಸಮೇತ ಸ್ಥಳಕ್ಕೆ ಬಂದಿದ್ದಾರೆ.

ದಿಲೀಪ್ ಕುಮಾರ್ ಎನ್ನುವವರಿಗೆ ಸೇರಿರುವ ಕಟ್ಟಡ ಇದಾಗಿದ್ದು, ಎರಡೂವರೆಯಿಂದ ಮೂರು ಮೀಟರ್ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಕೆಲ ನಿಯಮಗಳನ್ನ ಗಾಳಿಗೆ ತೂರಿದ್ದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು . ನೋಟಿಸ್ ಕೊಟ್ಟು ಹಲವು ದಿನ ಕಳೆದರೂ ತೆರವು ಮಾಡದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿಯ ಪಶ್ಚಿಮ ವಲಯ ಆಯುಕ್ತೆ ಅರ್ಚನಾ ನೇತೃತ್ವದ ಅಧಿಕಾರಿಗಳು ಕಟ್ಟಡದ ಒತ್ತುವರಿ ಭಾಗ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ

ಇಂದು ಬರೀ ರಸ್ತೆಯಲ್ಲಿರೋ ಕಟ್ಟಡದ ಭಾಗ ಮಾತ್ರ ತೆರವು ಮಾಡಲಾಗುತ್ತಿದ್ದು, ಕಟ್ಟಡ ತೆರವಿಗೆ ಇನ್ನೊಂದು ನೋಟಿಸ್ ಕೊಡಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಆ ನೋಟಿಸ್ ಕೊಟ್ಟ ಬಳಿಕ ಪ್ರತಿಕ್ರಿಯೆ ಬಾರದಿದ್ದರೆ ಮತ್ತೆ ಡೆಮಾಲಿಷನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ನಕ್ಷೆ ಮಂಜೂರಾತಿಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಕೇವಲ ಎರಡು ಅಂತಸ್ತಿನ ಕಟ್ಟಡ, ಟೆರೇಸ್ ಗೆ ಮಾತ್ರ ಅನುಮತಿ ಪಡೆದುಕೊಂಡಿದ್ದಾರೆ. ಆದ್ರೆ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆ ಕಟ್ಟಡ ಮಾಲೀಕನ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:15 pm, Mon, 28 October 24