ಬೆಂಗಳೂರು ನಗರ ಹಾಗೂ ವಿಮಾನ ನಿಲ್ದಾಣ ಮಧ್ಯೆ ನೇರ ರೈಲು ಸಂಪರ್ಕ: ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರದೊಂದಿಗೆ ಸಂಪರ್ಕಿಸುವ ಹೊಸ ರೈಲು ಮಾರ್ಗ ಯೋಜನೆಯನ್ನು ಘೋಷಿಸಿದ್ದಾರೆ. 7.9 ಕಿ.ಮೀ. ರೈಲು ಮಾರ್ಗವು ದೊಡ್ಡಜಾಲ ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿದೆ. ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯ ವಿಳಂಬಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಕೆ-ರೈಡ್‌ಗೆ ಹೆಚ್ಚಿನ ತಾಂತ್ರಿಕ ಸಿಬ್ಬಂದಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಹಾಗೂ ವಿಮಾನ ನಿಲ್ದಾಣ ಮಧ್ಯೆ ನೇರ ರೈಲು ಸಂಪರ್ಕ: ಸಚಿವ ಅಶ್ವಿನಿ ವೈಷ್ಣವ್ ಘೋಷಣೆ
ಬೆಂಗಳೂರು ನಗರ ಹಾಗೂ ವಿಮಾನ ನಿಲ್ದಾಣ ಮಧ್ಯೆ ನೇರ ರೈಲು ಸಂಪರ್ಕ: ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

Updated on: Feb 16, 2025 | 1:28 PM

ಬೆಂಗಳೂರು, ಫೆಬ್ರವರಿ 16: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ಬೆಂಗಳೂರು ನಗರದೊಂದಿಗೆ ನೇರವಾಗಿ ಸಂಪರ್ಕಿಸುವ ರೈಲ್ವೆ ಯೋಜನೆಯನ್ನು ಜಾರಿಗೆ ತರುವ ಹೊಸ ಯೋಜನೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಪ್ರಕಟಿಸಿದ್ದಾರೆ. ಹೊಸ ಯೋಜನೆಯ ಪ್ರಕಾರ, ದೊಡ್ಡಜಾಲ ಮತ್ತು ವಿಮಾನ ನಿಲ್ದಾಣ ನಡುವೆ 7.9 ಕಿ.ಮೀ. ರೈಲು ಮಾರ್ಗ ನಿರ್ಮಾಣವಾಗಲಿದೆ. ಇದರಲ್ಲಿ 6.25 ಕಿ.ಮೀ. ಮಾರ್ಗ ಮೇಲ್ಸೇತುವೆ ಮೇಲೆ ಬರಲಿದ್ದು, 1.65 ಕಿ.ಮೀ. ಅಂಡರ್​ಗ್ರೌಂಡ್ ಮಾರ್ಗವಾಗಿರಲಿದೆ.

ಸುದ್ದಿಗಾರರ ಜತೆ ಮಾತನಾಡಿದ ವೈಷ್ಣವ್, ರಸ್ತೆ, ಮೆಟ್ರೋ ಮತ್ತು ಉಪನಗರ ರೈಲು ಸಂಪರ್ಕಗಳ ಹೊರತಾಗಿ, ನಾವು ವಿಮಾನ ನಿಲ್ದಾಣಕ್ಕೆ ಮತ್ತೊಂದು ರೈಲ್ವೆ ಮಾರ್ಗವನ್ನು ಒದಗಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಹಿಂದೆ ನಗರಕ್ಕೆ ಭೇಟಿ ನೀಡಿದ್ದಾಗ ವಿಮಾನ ನಿಲ್ದಾಣದಿಂದ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. 40 ರಿಂದ 45 ನಿಮಿಷಗಳ ಆರಾಮದಾಯಕ ಪ್ರಯಾಣ ಅದಾಗಿತ್ತು ಎಂದು ಅವರು ಹೇಳಿದ್ದಾರೆ.

ಪ್ರಸ್ತಾವಿತ ಯೋಜನೆಗೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದಕ್ಕೆ ರೈಲ್ವೆ ಫ್ಲೈಓವರ್ ಅಗತ್ಯವಿದೆ. ಈಗ ತಜ್ಞರ ತಂಡ ವರದಿಯನ್ನು ಮಂಡಿಸಿದೆ. ಅದನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಈ ರೈಲು ಮಾರ್ಗದಿಂದ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ವೈಷ್ಣವ್ ಹೇಳಿದ್ದಾರೆ.

ಬೆಂಗಳೂರಿಗೆ ಉಪನಗರ ಮತ್ತು ಮೆಟ್ರೋ ರೈಲು ಯೋಜನೆಗಳ ಅಗತ್ಯವನ್ನು ಒತ್ತಿ ಹೇಳಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವುಗಳನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಉಪನಗರ ರೈಲು ಯೋಜನೆ ವಿಳಂಬಕ್ಕೆ ಅಸಮಾಧಾನ

ಉಪನಗರ ರೈಲ್ವೆ ಯೋಜನೆಯ ಕಾಮಗಾರಿಯನ್ನು ‘ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್)’ ಇನ್ನೂ ಸಂಪೂರ್ಣವಾಗಿ ಕಾರ್ಯಗತಗೊಳಿಸದ ಬಗ್ಗೆ ವೈಷ್ಣವ್ ನಿರಾಶೆ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಪರಿಣತಿಯ ಕೊರತೆಯಿದೆ ಎಂದು ಅವರು ಹೇಳಿದ್ದಾರೆ. ಕೆ-ರೈಡ್‌ಗೆ ಪೂರ್ಣ ಸಮಯದ ವ್ಯವಸ್ಥಾಪಕ ನಿರ್ದೇಶಕ ಮತ್ತು 13 ತಾಂತ್ರಿಕವಾಗಿ ಅರ್ಹ ಸಿಬ್ಬಂದಿಯನ್ನು ನೇಮಿಸುವಂತೆ ರಾಜ್ಯಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ರೈಲು ಜಾಲ ಹೆಚ್ಚಿಸಲು ಕ್ರಮ: ಅಶ್ವಿನಿ ವೈಷ್ಣವ್

ಬೆಂಗಳೂರಿನ ರೈಲು ಜಾಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇದಿಲ್ಲದಿದ್ದರೆ, ಪ್ರಗತಿ ನಿಧಾನವಾಗುತ್ತದೆ. ಜನರು ಹೆಚ್ಚಿನ ಭರವಸೆಗಳನ್ನು ಹೊಂದಿದ್ದಾರೆ ಮತ್ತು ಅವುಗಳನ್ನು ಸಾಕಾರಗೊಳಿಸಲು ನಮಗೆ ಬಲವಾದ ತಾಂತ್ರಿಕ ತಂಡದ ಅಗತ್ಯವಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪ್ರೆಸಿಡೆನ್ಸಿ ಫೌಂಡೇಷನ್​ನಿಂದ ಉದ್ಯೋಗ ಮೇಳ; ನೂರಾರು ಆಕಾಂಕ್ಷಿಗಳು ಭಾಗಿ

ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ. ಅವರು ಒಪ್ಪಿದರೆ, ಯೋಜನೆಯನ್ನು ತ್ವರಿತಗೊಳಿಸಲು ನಾವು ರೈಲ್ವೆ ಅಧಿಕಾರಿಗಳನ್ನು ಕೆ-ರೈಡ್‌ಗೆ ನಿಯೋಜಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ