ಬೆಂಗಳೂರು: ಕೆಎಂಎಫ್ ಮತ್ತು ಅಮುಲ್ ವಿಲೀನ (KMF And Amul Merge) ಆಗಲಿದೆ ಎಂಬ ಸುದ್ದಿಯನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ (S.T.Somashekhar) ಅವರು ಅಲ್ಲಗಳೆದಿದ್ದಾರೆ. ಕೆಎಂಎಫ್ ಮತ್ತು ಅಮುಲ್ ವಿಲೀನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಎಲ್ಲೂ ಹೇಳಿಲ್ಲ. ಕೆಎಂಎಫ್ ಒಂದು ಬಲಿಷ್ಠವಾದ ಸಂಸ್ಥೆ. ಸಾವಿರಾರು ವಹಿವಾಟು ನಡೆಸುವ ಸಂಸ್ಥೆಯಾಗಿದೆ. ಗುಜರಾತ್ ಅಮೂಲ್ ಜೊತೆ ನಮ್ಮ ಕೆಎಂಎಫ್ ವಿಲೀನ ಮಾಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಗುಜರಾತ್ನಲ್ಲಿ ಡೈರಿ ಮೊದಲ ಸ್ಥಾನದಲ್ಲಿ ಇದೆ, ಇಲ್ಲಿ (ಕರ್ನಾಟಕ) ಕೂಡ ಬಲಿಷ್ಠ ಇದೆ ಅಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಆದರೆ ಯಾಕೆ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಈ ಪ್ರಶ್ನೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ ಎಂದರು. ಅಲ್ಲದೆ, ಸೊಸೈಟಿ ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರೆ. ಆದರೆ ಎರಡು ಕಂಪನಿಗಳನ್ನು ವಿಲೀನ ಮಾಡುವ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗುವ ರೀತಿ ಅವರು ಹೇಳಿಲ್ಲ. ವಿರೋಧ ಪಕ್ಷಗಳು ಚುನಾವಣೆ ಗಿಮಿಕ್ಗಾಗಿ ಹಾಗೆ ಹೇಳುತ್ತಿದ್ದಾರೆ ಅಷ್ಟೇ ಎಂದರು.
ಇದನ್ನೂ ಓದಿ: ಅಮುಲ್ ಜತೆ ನಂದಿನಿ ವಿಲೀನ ಎನ್ನುವ ಅಮಿತ್ ಶಾ ಹೇಳಿಕೆ ಸುದ್ದಿಗೆ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ
ಅನ್ಯಪಕ್ಷದವರ ಸೇರ್ಪಡೆ ಬಗ್ಗೆ ಒಂದು ಚರ್ಚೆ ಆಗಿದೆ. ಪಕ್ಷ ಬಲಪಡಿಸಲು ಏನೇನು ಮಾಡಬೇಕು ಎಂಬಿತ್ಯಾದಿ ಚರ್ಚೆಗಳು ನಡೆದಿವೆ. ಮೈಸೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರುತ್ತಿದ್ದಾರೆ. ಮತ್ತೊಮ್ಮೆ ಮಂಡ್ಯಕ್ಕೂ ಬರುತ್ತೇನೆ ಅಂತ ಹೇಳಿದ್ದಾರೆ. ನಾಳೆಯಿಂದ ಅವರು ಹಾಕಿಕೊಟ್ಟ ಕಾರ್ಯಕ್ರಮಗಳ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಕೆಲಸ ಆಗಲಿದೆ ಎಂದರು.
ಅಮುಲ್ ಮತ್ತು ಕೆಎಂಎಫ್ ವಿಲೀನ ಬಗ್ಗೆ ಅಮಿತ್ ಶಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೊದಲು ಅಮಿತ್ ಶಾ ಏನು ಹೇಳಿಕೆ ಕೊಟ್ಟಿದ್ದಾರೆ ಸರಿಯಾಗಿ ನೋಡಿ. ಒಟ್ಟಿಗೆ ಮಾರುಕಟ್ಟೆ ಮಾಡಿದರೆ ನಿಮ್ಮ ವ್ಯಾಪ್ತಿ ದೊಡ್ಡದಾಗುತ್ತದೆ ಎಂದಿದ್ದಾರೆ. ನಿಮ್ಮ ಬ್ರ್ಯಾಂಡ್ ವಿಲೀನ ಮಾಡಬೇಕು ಅಂತಾ ಎಲ್ಲೂ ಹೇಳಿಲ್ಲ ಎಂದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ ಅಥವಾ ನಂದಿನಿ ಅತ್ಯಂತ ಗಟ್ಟಿಮುಟ್ಟಾಗಿ ಮುಂದುವರಿಯುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Sun, 1 January 23