ದೇವನಹಳ್ಳಿ, ಸೆ.10: ನಾಡಿನ ನಾರಿ ಶಕ್ತಿಗೆ ಉಚಿತ ಬಸ್ ಸೇವೆ ನೀಡುವ ಸರ್ಕಾರದ ಶಕ್ತಿಯೋಜನೆಯಿಂದಾಗಿ ಖಾಸಗಿ ಸಾರಿಗೆಗೆ ಭಾರೀ ಹೊಡೆತಬಿದ್ದಿದೆ. ಹೀಗಾಗಿ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸುತ್ತಿದ್ದ ಖಾಸಗಿ ಸಾರಿಗೆ ಒಕ್ಕೂಟ, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರು ಬಂದ್‌ಗೆ ಮುಂದಾಗಿದೆ. ಆದರೆ ಇತ್ತ ನಗರದ ಜನರಿಗೆ ಸಮಸ್ಯೆ ಆಗಬಾರದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಭರ್ಜರಿ ಪ್ಲಾನ್ ಮಾಡಿದ್ದು ಹೆಚ್ಚುವರಿ ಬಸ್ಗಳನ್ನು ರಸ್ತೆಗಿಳಿಸಲು ಸೂಚಿಸಿದ್ದಾರೆ. ಬಂದ್ ನಿಂದ ಏರ್ಪೋಟ್ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಎಂಟಿಸಿ ಮುನ್ನೆಚರಿಕೆ ಕ್ರಮ ಕೈಕೊಂಡಿದೆ. ಪ್ರತಿನಿತ್ಯ 500ಕ್ಕೂ ಅಧಿಕ ಟ್ರಿಪ್ಗಳನ್ನ ಓಡಿಸುವ ಬಿಎಂಟಿಸಿಗೆ ನಾಳೆ 500 ಟ್ರಿಪ್ ಜೊತೆಗೆ ಹೆಚ್ಚುವರಿ 100 ಟ್ರಿಪ್ ಓಡಿಸಲು ಸೂಚಿಸಲಾಗಿದೆ.
ಬೈಕ್ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿದಂತೆ ಸರ್ಕಾರದ ಮುಂದೆ ಹತ್ತು ಹಲವು ಬೇಡಿಕೆ ಇಟ್ಟಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇದೇ ಸೋಮವಾರ ಬೆಂಗಳೂರು ಬಂದ್‌ಗೆ ಕರೆಕೊಟ್ಟಿವೆ. ಭಾನುವಾರ ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್ ನಡೆಸಲು ತಯಾರಿ ನಡೆದಿದೆ. ಆದರೆ ಇತ್ತ ಸರ್ಕಾರಿ ಸಾರಿಗೆ ಇಲಾಖೆ ಅಲರ್ಟ್ ಆಗಿದ್ದು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ಲಾನ್ ರೂಪಿಸಿದೆ.
ಬಂದ್ನಿಂದಾಗಿ ಏರ್ಪೋಟ್ ಪ್ರಯಾಣಿಕರಿಗೆ ತೊಂದರೆಯಾಗದಂತೆ ನಾಳೆ ಟ್ಯಾಕ್ಸಿ ಬದಲಾಗಿ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ಗಳನ್ನು ನಿಯೋಜನೆ ಮಾಡಲಾಗಿದೆ. ಕೆಂಪೇಗೌಡ ಏರ್ಪೋಟ್ನಿಂದ ವಿವಿಧೆಡೆಗೆ ಹೆಚ್ಚುವರಿ ಟ್ರಿಪ್ ಮಾಡಲು ಚಾಲಕರಿಗೆ ಸೂಚಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೆ ಏರ್ಪೋಟ್ ನಿಂದ ಬಿಎಂಟಿಸಿ ವಾಯುವಜ್ರ ಬಸ್ಗಳ ಸಂಚಾರ ಆರಂಭವಾಗಲಿದೆ. ಪ್ರತಿನಿತ್ಯ 500ಕ್ಕೂ ಅಧಿಕ ಟ್ರಿಪ್ಗಳನ್ನ ಬಿಎಂಟಿಸಿ ಓಡಿಸುತ್ತಿದೆ. ಆದರೆ ನಾಳೆ ಬಂದ್ ಇರುವ ಹಿನ್ನೆಲೆ ಹೆ್ಚುವರಿ 100 ಟ್ರಿಪ್ ಓಡಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಸೆ.11 ಬೆಂಗಳೂರು ಬಂದ್; ಯಾರಿಗೆಲ್ಲ ಸಮಸ್ಯೆ, ಸಾರಿಗೆ ಸಂಘಟನೆಗಳ ಪ್ರಮುಖ ಬೇಡಿಕೆಗಳೇನು?
ಇನ್ನು ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಆಯೋಜಿಸಲಾಗಿದೆ. ಬೆಂಗಳೂರು ನಗರದಲ್ಲಿ ಯಾವುದೇ ಱಲಿ ನಡೆಸಲು ಅವಕಾಶವಿಲ್ಲ. ಭದ್ರತೆಗೆ ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜಿಸಲಾಗುವುದು. ಕಾನೂನು ಬಾಹಿರ ಕೃತ್ಯ, ಶಾಂತಿ ಕದಡುವ ಯತ್ನ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ