ಬೆಂಗಳೂರು: ಬೆಂಗಳೂರು ಉದ್ಯಾನನಗರಿ ಎಂಬ ಹೆಗ್ಗಳಿಕೆ ಪಡೆದಿರುವ ನಗರ. ಇಲ್ಲಿ ಪ್ರತಿ ಏರಿಯಾಗೂ ನಾಲ್ಕೈದು ಪಾರ್ಕ್ಗಳಿರುತ್ತವೆ. ಸಾಮಾನ್ಯವಾಗಿ ಭಾರತದ ಸಾರ್ವಜನಿಕ ಪಾರ್ಕ್ಗಳಲ್ಲಿ ಜನರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅವರಿಗಾಗಿ ಸಮಯವನ್ನೂ ನಿಗದಿ ಮಾಡಲಾಗುತ್ತದೆ. ಬೆಳಗಿನ ವೇಳೆ ಜಾಗಿಂಗ್, ವಾಕಿಂಗ್ ಮಾಡುವವರಿಗೆ ಮತ್ತು ಸಂಜೆಯ ವೇಳೆ ವಾಕಿಂಗ್ ಮಾಡುವವರಿಗೆ ಪಾರ್ಕ್ಗಳ ಗೇಟ್ ಓಪನ್ ಮಾಡಲಾಗುತ್ತದೆ. ಆದರೆ, ಬೆಂಗಳೂರಿನ ಈ ಪಾರ್ಕ್ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದ್ದು, ಪಾರ್ಕ್ನಲ್ಲಿ ವಾಕಿಂಗ್ ಮಾಡಬಾರದು ಎಂದಾದರೆ ನಾಗಿಣಿ ಡ್ಯಾನ್ಸ್ ಮಾಡಬಹುದಾ? ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಪಾರ್ಕ್ನ ಗೇಟ್ನಲ್ಲಿ ಹಾಕಿರುವ ಒಂದು ಫಲಕದ ಫೋಟೋ ಈಗ ವೈರಲ್ ಆಗಿದೆ. ಇಲ್ಲಿ ಜನರು ಆ್ಯಂಟಿ ಕ್ಲಾಕ್ವೈಸ್ (ಬಲದಿಂದ ಎಡಕ್ಕೆ) ನಡೆಯುವಂತಿಲ್ಲ, ವಾಕಿಂಗ್ ಮಾಡುವಂತಿಲ್ಲ, ಜಾಗಿಂಗ್ ಮಾಡುವಂತಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಹಾಗಿದ್ದರೆ ಈ ಪಾರ್ಕ್ನಲ್ಲಿ ಏನು ಮಾಡಬೇಕು? ಎಂಬುದು ಸದ್ಯಕ್ಕೆ ನೆಟ್ಟಿಗರ ಪ್ರಶ್ನೆಯಾಗಿದೆ. ಈ ಬೋರ್ಡ್ ಹಾಕುವ ಮೂಲಕ ಬಿಬಿಎಂಪಿ ಸಾಮಾಜಿಕ ಜಾಲತಾಣ ಬಳಕೆದಾರರ ಲೇವಡಿಗೆ ಗುರಿಯಾಗಿದೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೆಂಡತಿಯನ್ನು ಇರಿದು ಕೊಂದು ಪೊಲೀಸರಿಗೆ ಫೋನ್ ಮಾಡಿದ ಟೈಲರ್!
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಕಿರುವ ಬೋರ್ಡ್ ಈಗ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಪಾರ್ಕ್ನಲ್ಲಿ ನಾಗಿನ್ (ಹಾವಿನ) ನೃತ್ಯವನ್ನು ಮಾಡಬಹುದಾ? ಎಂದು ಒಬ್ಬರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಮರುಟ್ವೀಟ್ ಮಾಡಿರುವ ಇನ್ನೊಬ್ಬರು, ನೀವು ನಾಗಿಣಿ ಡ್ಯಾನ್ಸನ್ನು ಕೂಡ ಎಡದಿಂದ ಬಲಕ್ಕೇ ಮಾಡಬೇಕು, ಇಲ್ಲವಾದರೆ ನಿಮಗೆ ಅನುಮತಿಯಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಇನ್ನು ಕೆಲವರು ಹಾಗಾದರೆ ಈ ಪಾರ್ಕ್ನಲ್ಲಿ ಮೂನ್ ವಾಕ್ ಮಾಡಬಹುದಾ? ಎಂದು ಬಿಬಿಎಂಪಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಸರಿಯಾಗಿ ರಸ್ತೆ ರಿಪೇರಿ, ಚರಂಡಿ ರಿಪೇರಿ ಮಾಡೋದನ್ನು ಬಿಟ್ಟು ಬಿಬಿಎಂಪಿ ಬೇರೆಲ್ಲ ನಿಯಮಗಳನ್ನೂ ಮಾಡುತ್ತಿದೆ ಎಂದು ಹಲವರು ಟೀಕಿಸಿದ್ದಾರೆ.
Published On - 1:20 pm, Thu, 14 July 22