ಬಿಬಿಎಂಪಿಯ ಮತ್ತೊಂದು ಕಳಪೆ ಕಾಮಗಾರಿ ಬಟಾಬಯಲು! ವೈಟ್ ಟಾಪಿಂಗ್ ಮಾಡಿದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ
ನಗರದಲ್ಲಿ 2 ಸಾವಿರ ಕೋಟಿ ರೂ. ಖರ್ಚು ಮಾಡಿ ವೈಟ್ ಟಾಪಿಂಗ್ ಮಾಡಲಾಗಿತ್ತು. 1 ಕಿಲೋಮೀಟರ್ಗೆ 6ರಿಂದ 9 ಕೋಟಿ ರೂ. ಖರ್ಚು ಮಾಡಿದ್ದ ರಸ್ತೆಗಳಲ್ಲಿ ಇದೀಗ ಗುಂಡಿಗಳು ಕಾಣಿಸಿಕೊಂಡಿವೆ.
ಬೆಂಗಳೂರು: ಶಾಂತಿನಗರ ಅಕ್ಕಪಕ್ಕದ ರಸ್ತೆಯಲ್ಲಿ ವೈಟ್ ಟಾಪಿಂಗ್ (White Topping) ಮಾಡಿದ ಒಂದೇ ವರ್ಷಕ್ಕೆ ಗುಂಡಿಗಳು ನಿರ್ಮಾಣವಾಗಿದ್ದು, ಬಿಬಿಎಂಪಿಯ (BBMP) ಮತ್ತೊಂದು ಕಳಪೆ ಕಾಮಗಾರಿ ಬಟಾಬಯಲಾಗಿದೆ. ನಗರದಲ್ಲಿ 2 ಸಾವಿರ ಕೋಟಿ ರೂ. ಖರ್ಚು ಮಾಡಿ ವೈಟ್ ಟಾಪಿಂಗ್ ಮಾಡಲಾಗಿತ್ತು. 1 ಕಿಲೋಮೀಟರ್ಗೆ 6ರಿಂದ 9 ಕೋಟಿ ರೂ. ಖರ್ಚು ಮಾಡಿದ್ದ ರಸ್ತೆಗಳಲ್ಲಿ ಇದೀಗ ಗುಂಡಿಗಳು ಕಾಣಿಸಿಕೊಂಡಿವೆ. ಈ ಹಿಂದೆ ಬಿಬಿಎಂಪಿ 10-15 ವರ್ಷ ಗುಂಡಿಗಳು ನಿರ್ಮಾಣ ಆಗಲ್ಲ ಎಂದು ಹೇಳಿತ್ತು. ಆದರೆ ನಿರ್ಮಿಸಿದ ಒಂದೇ ವರ್ಷದಲ್ಲಿ ಗುಂಡಿಗಳು ನಿರ್ಮಾಣವಾಗಿದೆ.
ನಗರದಲ್ಲಿ ರಸ್ತೆ ಗುಂಡಿಗಳು ಈಗಾಗಲೇ ಹಲವರ ಜೀವ ತೆಗೆದಿವೆ. ಟಾರ್ ರಸ್ತೆಗಳಲ್ಲಿ ಗುಂಡಿ ನಿರ್ಮಾಣ ಆಗುತ್ತದೆ ಎಂದು ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಬಿಬಿಎಂಪಿ ಕೂಡಾ ಈ ಬಗ್ಗೆ ಭರವಸೆ ನೀಡಿತ್ತು.
ಕೋರ್ಟ್ಗೆ ಹಾಜರಾಗಿದ್ದ ಆಯುಕ್ತರು: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಬಗ್ಗೆ ಹೈಕೋರ್ಟ್ ಹಲವು ದಿನಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುತ್ತಲೇ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 30ಕ್ಕೆ ಹೈಕೋರ್ಟ್ ವಿಚಾರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಬಿಬಿಎಂಪಿ ಮುಖ್ಯ ಎಂಜಿನಿಯರ್ ಎಂ.ಲೋಕೇಶ್ ಹಾಜರಾಗಿದ್ದರು.
ಇದನ್ನೂ ಓದಿ: Privatise all PSBs: ಎಸ್ಬಿಐ ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ ಬ್ಯಾಂಕ್ಗಳ ಖಾಸಗೀಕರಣಕ್ಕೆ ಶಿಫಾರಸು
ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಏನಾದರೂ ಕಷ್ಟಗಳಿವೆಯೇ? ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಪಿಎಂ ಬಂದಾಗ ಮಾಡಿದ ರಸ್ತೆಗಳು ಹಾಳಾಗಿರುವ ವರದಿಗಳಿವೆ ಎಂದು ಹೈಕೋರ್ಟ್ ಆಕ್ಷೇಪಿಸಿತ್ತು.
ಬಿಬಿಎಂಪಿ ಚುನಾವಣೆಗೆ ಸಿದ್ಧತೆ: ಸುಪ್ರೀಂಕೋರ್ಟ್ ಸೂಚನೆಯಂತೆ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ಬೆನ್ನಲ್ಲೇ ಕಟ್ಟಡ ನವೀಕರಣ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಕೌನ್ಸಿಲ್ ಕಟ್ಟಡ ನವೀಕರಣ ಮಾಡಲಾಗುತ್ತಿದೆ. 243 ಕಾರ್ಪೊರೇಟರ್ಸ್, 28 ಶಾಸಕರು ಹಾಗೂ ಸಂಸದರು, ಎಂಎಲ್ಸಿ ಸೇರಿ ಎಲ್ಲ ಜನಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.
Published On - 11:20 am, Wed, 13 July 22