Sexual Abuse: ಲೈಂಗಿಕ ದೌರ್ಜನ್ಯಕ್ಕೆ ಹುಡುಗಿಯರ ಫ್ಯಾಷನ್ ಕಾರಣ; ಇದು ಬೆಂಗಳೂರಿನ ಬಹುತೇಕ ಪೋಷಕರ ಅಭಿಪ್ರಾಯ
Girls Education: ಹೆಣ್ಣುಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಅವರಿಷ್ಟದ ಉಡುಪು ತೊಡುವ ಸ್ವಾತಂತ್ರ್ಯ ಇರಬೇಕೆಂದು ಬಯಸಿದ್ದಾರೆ.
ಬೆಂಗಳೂರು: ಮಹಿಳಾ ಸ್ವಾತಂತ್ರ್ಯ, ಸ್ತ್ರೀ ಸಮಾನತೆ (Gender Eqality), ಬಾಲಕಿಯರ ವಿದ್ಯಾಭ್ಯಾಸದ (Girls Education) ಬಗ್ಗೆ ಜಾಗೃತಿ ಮೂಡಿಸಲು ಎಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿದ್ದರೂ ಜನರ ಮನೋಭಾವ ಮಾತ್ರ ಇನ್ನೂ ಬದಲಾಗುತ್ತಿಲ್ಲ. ಕರ್ನಾಟಕ ಸರ್ಕಾರವು ನೇಮಿಸಿದ್ದ ಸಮಿತಿಯೊಂದರ ಸಮೀಕ್ಷೆ ಈ ಮನೋಭಾವಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. ನಗರದ ಶೇ 34ರಷ್ಟು ಪೋಷಕರು ಲೈಂಗಿಕ ದೌರ್ಜನ್ಯಕ್ಕೆ ಹೆಣ್ಣುಮಕ್ಕಳು ಬಟ್ಟೆ ಧರಿಸುವ ರೀತಿ, ವರ್ತನೆ ಮತ್ತು ಫ್ಯಾಷನ್ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಶಿಕ್ಷಕರ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿಲ್ಲ. ನಗರದ ಶೇ 35ರಷ್ಟು ಶಿಕ್ಷಕರು ಸಹ ‘ಬಾಲಕಿಯರ ವರ್ತನೆ ಮತ್ತು ಅವರು ಹಾಕಿಕೊಳ್ಳುವ ಬಟ್ಟೆಯು ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುತ್ತದೆ’ ಎಂದು ಹೇಳಿದ್ದಾರೆ. ಮಂಗಳೂರು ಮೂಲದ ಸ್ವತಂತ್ರ ಸಮಾಲೋಚಕರ ಮೂಲಕ ಸರ್ಕಾರವು ನಡೆಸಿದ ‘ಡಿಪ್-ಸ್ಟಿಕ್’ ಸಮೀಕ್ಷೆಯು ಲಿಂಗ ಸಮಾನತೆ ಕುರಿತ 20 ಪ್ರಶ್ನೆಗಳಿಗೆ 1,070 ಶಿಕ್ಷಕರು, 404 ಪೋಷಕರು ಮತ್ತು 221 ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಪಡೆದಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy – NEP) ಭಾಗವಾಗಿ ನಡೆದ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ಜಾಲತಾಣವು ವರದಿ ಮಾಡಿದೆ.
ಇದು ನಗರದ ಎಲ್ಲ ಪೋಷಕರ ಮನೋಭಾವವನ್ನು ಪ್ರತಿನಿಧಿಸುವುದಿಲ್ಲ ಎಂದು ಸಮೀಕ್ಷೆಯು ಸ್ಪಷ್ಟಪಡಿಸಿದೆ. ಆದರೆ ಪೋಷಕರ ಮನೋಭಾವವನ್ನು ಅರಿಯಲು ಹಾಗೂ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಲಿಂಗತ್ವ ಸೂಕ್ಷ್ಮತೆ ಮೂಡಿಸುವ (Gender Education) ಆಶಯದೊಂದಿಗೆ ರೂಪಿಸಬೇಕಾದ ಶಿಕ್ಷಣ ಕ್ರಮ ಹೇಗಿರಬೇಕು ಎನ್ನುವ ಬಗ್ಗೆ ಕೇವಲ ಇಣುಕುನೋಟವನ್ನು ಮಾತ್ರ ಈ ಸಂಶೋಧನಾ ಪ್ರಬಂಧ ನೀಡುತ್ತದೆ ಎಂದು ಸಂಶೋಧನಾ ಪ್ರಬಂಧವು ಹೇಳಿದೆ.
ಬಾಲಕ ಅಥವಾ ಬಾಲಕಿಯ ಮೇಲೆ ಯಾವುದೇ ಹಂತದಲ್ಲಿ ಲೈಂಗಿಕ ದೌರ್ಜನ್ಯ ನಡೆಯಬಹುದು ಎಂಬ ಆತಂಕ ಪೋಷಕರಿಗೆ ಇದೆ. ಹೆಣ್ಣುಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಅವರಿಷ್ಟದ ಉಡುಪು ತೊಡುವ ಸ್ವಾತಂತ್ರ್ಯ ಇರಬೇಕೆಂದು ಬಯಸುತ್ತಾರೆ ಎನ್ನುವ ಬಗ್ಗೆಯೂ ವರದಿ ಗಮನ ಸೆಳೆದಿದೆ.
ಶೇ 45ರಷ್ಟು ಶಿಕ್ಷಕ/ಶಿಕ್ಷಕಿಯರು ಸಂಜೆ 5ರ ನಂತರ ಹೆಣ್ಣುಮಕ್ಕಳಿಗೆ ವಿಶೇಷ ತರಗತಿ ಇರಬಾರದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊತ್ತು ಮುಳುಗುವ ಒಳಗೆ ಹೆಣ್ಣುಮಕ್ಕಳು ಮನೆಗಳನ್ನು ಸೇರಿಕೊಳ್ಳಬೇಕು ಎನ್ನುವ ಪರಂಪರಾಗತ ನಿಲುವನ್ನೇ ಬಹುತೇಕ ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ಶಾಲೆಗೆ ಅಲಂಕಾರ ಮಾಡುವ, ರಂಗೋಲಿ ಹಾಕುವ ಕೆಲಸಗಳನ್ನು ಬಾಲಕಿಯರಿಗೆ ಮತ್ತು ದೈಹಿಕ ಶ್ರಮದ ಕೆಲಸಗಳನ್ನು ಬಾಲಕರಿಗೆ ವಹಿಸುವುದಾಗಿಯೂ ಹಲವು ಶಿಕ್ಷಕರು ಹೇಳಿದ್ದಾರೆ. ಶೇ 40ರಷ್ಟು ಶಿಕ್ಷಕರು ಸ್ಟಿರಿಯೊಟೈಪ್ ಮಿತಿಗಳ ವ್ಯಾಪ್ತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎನ್ನುವ ಸಂಗತಿಯೂ ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಕರ್ನಾಟಕವನ್ನು ಮಹಿಳೆಯರಿಗೆ ಸುರಕ್ಷಿತ, ಮುಕ್ತ, ಸಮಾನ ಅವಕಾಶಗಳು ಲಭ್ಯವಿರುವ ರಾಜ್ಯವಾಗಿ ರೂಪಿಸಲು ತೆಗೆದುಕೊಳ್ಳಬೇಕಾದ ಅತ್ಯಗತ್ಯ ಕ್ರಮಗಳ ಬಗ್ಗೆ ಈ ಸಂಶೋಧನೆಯು ಬೆಳಕು ಚೆಲ್ಲಿದೆ.
Published On - 9:31 am, Wed, 13 July 22