ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ: ಊರಿಗೇ ಮಕ್ಮಲ್ ಟೋಪಿ ಹಾಕಿದ ಶಿಕ್ಷಕಿಯ ಮಗ
ಉಡುಪಿಯ ವಿದ್ಯಾರ್ಥಿ ಓರ್ವ ನೀಟ್ ಪರೀಕ್ಷೆಯಲ್ಲಿ ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ, ತಾನು ಟಾಪರ್ ಎಂದು ಸುಳ್ಳು ಪ್ರಚಾರ ಪಡೆದುಕೊಂಡಿರುವಂತಹ ಘಟನೆ ನಡೆದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ 107ನೇ ರ‍್ಯಾಂಕ್ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅನುಮಾನ ಬಂದು ಪರೀಶಿಲಿಸಿದಾಗ ವಿದ್ಯಾರ್ಥಿಯ ನಕಲಿ ಮುಖ ಬಯಲಾಗಿದೆ.

ಉಡುಪಿ, ಜೂನ್ 21: ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಉಡುಪಿ (Udupi) ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಿಕ್ಷಕಿ ಮತ್ತು ಸರ್ಕಾರಿ ಅಧಿಕಾರಿಯ ಮಗನೇ ಅತೀ ಬುದ್ದಿವಂತಿಕೆಯಿಂದ ಇಡೀ ಊರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಜಿಲ್ಲೆಗೆ ತಾನೇ ಟಾಪರ್ (Toppr) ಎಂದು ನಕಲಿ ಮಾಡಿದವನ ಅಸಲಿ ಮುಖ ಇದೀಗ ಬಯಲಾಗಿದೆ.
ಊರಿಗೆ ಮಕ್ಮಲ್ ಟೋಪಿ ಹಾಕಿದ ಯುವಕ
ಕೃಷ್ಣ ನಗರಿ ಉಡುಪಿ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆ, ಪಿಯುಸಿ, ಎಸ್ಎಸ್ಎಲ್ಸಿ ಫಲಿತಾಂಶ ಬಂತು ಅಂದರೆ ಉಡುಪಿಯ ವಿದ್ಯಾರ್ಥಿಗಳೇ ಟಾಪರ್. ಆದರೆ ನೀಟ್ ಪರೀಕ್ಷೆಯಲ್ಲಿ ನಾನೇ ಟಾಪರ್ ಎಂದು ಬಿಂಬಿಸಲು ಹೋಗಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಯ ಮಗ ರೋನಕ್ ಶೆಟ್ಟಿ ಊರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ.
ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯ: ಯುಜಿ ಪರೀಕ್ಷೆಯಲ್ಲಿ ನಡೆಯಿತಾ ಗೋಲ್ ಮಾಲ್?
ಹೌದು.. ವೈದ್ಯಕೀಯ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿತ್ತು. ಹಲವು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಉಡುಪಿಯ ಈ ರೋನಕ್ ಶೆಟ್ಟಿ ನಕಲಿ ಅಂಕ ಪಟ್ಟಿ ಸಿದ್ಧಪಡಿಸುವ ಮೂಲಕ ನಾನೇ ಟಾಪರ್ ಎಂದು ಹೇಳಿಕೊಂಡು ಇಡೀ ಊರಿಗೆ ಯಾಮಾರಿಸಿದ್ದಾನೆ.
ನಕಲಿ ಅಂಕಪಟ್ಟಿ ಮೂಲಕ ಪ್ರಚಾರ ಗಿಟ್ಟಿಸಿಕೊಂಡ ವಿದ್ಯಾರ್ಥಿ
ನೀಟ್ ಫಲಿತಾಂಶದಲ್ಲಿ ರಾಜ್ಯದ ಹಲವು ವಿದ್ಯಾರ್ಥಿಗಳು 200ನೇ ರ‍್ಯಾಂಕ್ ನೊಳಗೆ ಸಾಧನೆ ಮಾಡಿದ್ದಾರೆ. ಇದರ ಮಧ್ಯೆ ಉಡುಪಿ ರೋನಕ್ ಶೆಟ್ಟಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಎಂಟನೇ ಸ್ಥಾನ ಎಂದು ಹೇಳಲಾಗಿತ್ತು. ಈತನ ಸಾಧನೆ ಬಗ್ಗೆ ಇತರ ವಿದ್ಯಾರ್ಥಿಗಳಿಗೆ ಸಂಶಯ ಬಂದು ಪರಿಸೀಲಿಸಿದಾಗ ಅಸಲಿಗೆ ಆತನಿಗೆ ಸಿಕ್ಕಿದ್ದು 17 ಲಕ್ಷ ಸರಣಿಯ ರ‍್ಯಾಂಕ್. ಇದಲ್ಲದೇ ಆತ ಮತ್ತು ಆತನ ಪೋಷಕರು ನಕಲಿ ಅಂಕಪಟ್ಟಿಯನ್ನೇ ಕಾಲೇಜಿನ ಮೂಲಕ ಪ್ರಚಾರ ತಂತ್ರಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ರೋನಕ್ ಶೆಟ್ಟಿ ಅಸಲಿ ಅಂಕಪಟ್ಟಿಯಲ್ಲಿ 65 ಅಂಕ ಎಂದಿದ್ದು, ನಕಲಿ ಪಟ್ಟಿಯಲ್ಲಿ 646 ಎಂದಿದೆ. ನಕಲಿ ಪ್ರಮಾಣ ಪತ್ರದ ಅಕ್ಷರಗಳು ಸಂಪೂರ್ಣ ಅದಲು ಬದಲಾಗಿದ್ದು, 2024ರ ಅಂಕಪಟ್ಟಿಗೆ ಅಂಕಗಳನ್ನು ಸೇರಿಸಲಾಗಿದೆ. ಎರಡೂ ಅಂಕಪಟ್ಟಿಯನ್ನು ತಾಳೆಹಾಕಿ ನೋಡಿದಾಗ ನಕಲಿ ಎಂಬುದು ಬಯಲಿಗೆ ಬಂದಿದೆ.
ಮುಖ್ಯವಾಗಿ ಪರೀಕ್ಷಾ ನಿರ್ದೇಶಕರ ಬದಲಾಗಿ ಹಿರಿಯ ನಿರ್ದೇಶಕರ ಸಹಿ ಹಾಕಲಾಗಿದೆ. ಮೂಲ ದಾಖಲೆಯಲ್ಲಿ ಎರಡು ಪುಟಗಳಿದ್ದರೆ ನಕಲಿಯಲ್ಲಿ ಒಂದೇ ಪುಟವಿದೆ. ಅಭ್ಯರ್ಥಿಯ ಭಾವಚಿತ್ರದಲ್ಲೂ ವ್ಯತ್ಯಾಸವಿದೆ. ಕಟ್‌ಆಫ್ ಸ್ಕೋರ್ ಹಾಗೂ ಒಟ್ಟು ಅಭ್ಯರ್ಥಿಗಳ ಸಂಖ್ಯೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ನೀಟ್‌ನಲ್ಲಿ ಇಡೀ ದೇಶಕ್ಕೆ 107ನೇ ರ‍್ಯಾಂಕ್ ಎಂದು ಬಿಂಬಿಸಿದ್ದ ರೋನಕ್ಗೆ ನಿಜವಾಗಿ ಬಂದಿದ್ದು 17,62,258 ರ‍್ಯಾಂಕ್. 107 ನೇ ರ‍್ಯಾಂಕ್ ಹೊಸದಿಲ್ಲಿ ಮೂಲದ ವಿದ್ಯಾರ್ಥಿನಿಯೊಬ್ಬರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ, ಶಾಲೆ ಅನುದಾನ ಬಂದ್
ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾ ಸಂಸ್ಥೆಗಳಿಗೆ ಮೋಸ ಮಾಡುವ ಮತ್ತು ವೈದ್ಯಕೀಯದಂತಹ ಸೀಟುಗಳನ್ನು ಸುಲಭವಾಗಿ ಪಡೆಯಲು ಅಡ್ಡದಾರಿ ಹಿಡಿಯಲು ಯತ್ನಿಸಿದವರ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.