AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ನಿರ್ದೇಶಿಸಲು ಮುಂದಾದ ಹಂಸಲೇಖ, ಸಿನಿಮಾ ಹೆಸರೇನು?

Hamsalekha movie: ನಾದಬ್ರಹ್ಮ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗದ ಮೇರು ಸಂಗೀತ ನಿರ್ದೇಶಕ ಮತ್ತು ಗೀತ ಸಾಹಿತಿ ಹಂಸಲೇಖ ಅವರು ತಮ್ಮ ಬಹು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳುವ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರ ಈ ಸಾಹಸಕ್ಕೆ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ.

ಸಿನಿಮಾ ನಿರ್ದೇಶಿಸಲು ಮುಂದಾದ ಹಂಸಲೇಖ, ಸಿನಿಮಾ ಹೆಸರೇನು?
Hamsalekha
ಮಂಜುನಾಥ ಸಿ.
|

Updated on: Jun 21, 2025 | 9:04 PM

Share

ಹಂಸಲೇಖ (Hamsalekha), ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರು. ಕನ್ನಡ ಸಿನಿಮಾ ಸಂಗೀತವನ್ನು  ಬೇರೆಯದ್ದೇ ಎತ್ತರಕ್ಕೆ ಅವರು ಕೊಂಡೊಯ್ದಿದ್ದಾರೆ. ಹಂಸಲೇಖ ಅವರ  ಹೆಸರಿನ ಉಲ್ಲೇಖವಿಲ್ಲದೆ ಕನ್ನಡ ಚಿತ್ರರಂಗದ ಇತಿಹಾಸ ಬರೆಯಲು ಅಸಾಧ್ಯ ಎಂಬಷ್ಟು ಅಗಾಧ ಪ್ರಭಾವವನ್ನು ಕನ್ನಡ ಚಿತ್ರರಂಗದ ಮೇಲೆ ಅವರು ಬೀರಿದ್ದಾರೆ. ಹಂಸಲೇಖ ಅವರು ಅದ್ಭುತ ಸಂಗೀತಗಾರ ಆಗಿರುವ ಜೊತೆಗೆ ಹಲವಾರು ಸಿನಿಮಾಗಳಿಗೆ ಚಿತ್ರಕತೆಯನ್ನು, ಸಂಭಾಷಣೆಯನ್ನೂ ರಚಿಸಿದ್ದಾರೆ. ಇದರ ಜೊತೆಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ಸಹ ಅವರ ಬಹು ವರ್ಷಗಳ ಕನಸು, ಆದರೆ ಒಂದಲ್ಲ ಒಂದು ಅಡೆ-ತಡೆಗಳು ಬಂದು ಹಂಸಲೇಖ ಅವರ ನಿರ್ದೇಶನದ ಕನಸು ನನಸಾಗುತ್ತಲೇ ಇರಲಿಲ್ಲ. ಆದರೆ ಇದೀಗ ಕೊನೆಗೂ ಹಂಸಲೇಖ ಅವರು ನಿರ್ದೇಶಕನ ಟೋಪಿ ಧರಿಸಲು ಮುಂದಾಗಿದ್ದಾರೆ.

ಹಂಸಲೇಖ ಅವರು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದು, ಸಿನಿಮಾಕ್ಕೆ ಚಾಲನೆ ಸಹ ದೊರೆತಿದೆ. ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕೃಷ್ಣನಲ್ಲಿ ಹಂಸಲೇಖ ಅವರು ಹೊಸ ಸಿನಿಮಾನಕ್ಕೆ ಚಾಲನೆ ದೊರೆತಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಹಂಸಲೇಖ ಅವರ ಸಾಹಸಕ್ಕೆ ಶುಭಾಶಯ ತಿಳಿಸಿದ್ದಾರೆ. ಹಂಸಲೇಖ ಅವರು ‘ಓಕೆ: ಬಿ ಪಾಸಿಟಿವ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:‘ಪ್ಯಾನ್ ಇಂಡಿಯಾ ಅಂದ್ರೆ ಹೀರೋಗಳ ಶೋಕಿ; ದಾಡಿ, ಬಾಡಿ ಬೆಳೆಯತ್ತೆ ಅಷ್ಟೇ’: ಹಂಸಲೇಖ ಗರಂ

ಈ ಹಿಂದೆ ಮೂರು ಬಾರಿ ಹಂಸಲೇಖ ಅವರು ಸಿನಿಮಾ ನಿರ್ದೇಶನ ಮಾಡುವ ಪ್ರಯತ್ನ ಮಾಡಿದ್ದರು. ಅಸಲಿಗೆ ಹಂಸಲೇಖ ಅವರು ಸಿನಿಮಾ ನಿರ್ದೇಶಕ ಆಗುವ ಕನಸಿನಿಂದಲೇ ಚಿತ್ರರಂಗಕ್ಕೆ ಬಂದಿದ್ದರು‌. ಆದರೆ ಅದು ಕೈಗೂಡದೆ ಸಂಗೀತ ನಿರ್ದೇಶಕ ಆದರು. ಈ ಹಿಂದೆ ‘ರಾಹುಚಂದ್ರ’ ಹೆಸರಿನ ಸಿನಿಮಾ ನಿರ್ದೇಶನ ಮಾಡುವುದಾಗಿ ಘೋಷಿಸಿದ್ದರು. ಅದಾದ ಬಳಿಕ ಅವರ ಪುತ್ರ ನಾಯಕನಾಗಿ ನಟಿಸಿದ್ದ ‘ಸುಗ್ಗಿ’ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣ ಮಾಡಿದರು. ಈ ಎರಡೂ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಅದಾದ ಬಳಿಕ ‘ಶಾಕುಂತಲೆ’ ಸಿನಿಮಾ ನಿರ್ದೇಶಿಸಲಿದ್ದೇನೆ ಎಂದರು. ಆ ಸಿನಿಮಾ ಸೆಟ್ಟೆರಲೆ ಇಲ್ಲ. ಈಗ ‘ಓಕೆ’ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.

ಹಂಸಲೇಖ ನಿರ್ದೇಶನ ಮಾಡಲಿರುವ ಸಿನಿಮಾಕ್ಕೆ ನಾಗೇಶ್ ವಾಷ್ಟರ್ ಮತ್ತು ಸೂರ್ಯಪ್ರಕಾಶ್ ಬಂಡವಾಳ ತೊಡಗಿಸಿದ್ದಾರೆ. ಈ ಸಿನಿಮಾವನ್ನು ಆಕಾಂಕ್ಷ ಪ್ರೊಡಕ್ಷನ್ ಮತ್ತು ಐದನಿ ಎಂಟರ್ಟೈನ್ ಮೆಂಟ್ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಐದನಿ, ಹಂಸಲೇಖ ಅವರದ್ದೆ ಸಂಸ್ಥೆಯಾಗಿದೆ. ಸಿನಿಮಾದ ಕಲಾವಿದರು, ಇತರೆ ತಂತ್ರಜ್ಞರ ಬಗ್ಗೆ ಮಾಹಿತಿ ಬಿಡುಗಡೆ ಆಗಿಲ್ಲ. ಮುಂದಿನ ದಿನಗಳಲ್ಲಿ ಕಲಾವಿದರನ್ನು ಘೋಷಿಸಲಾಗುವುದು ಎನ್ನಲಾಗಿದೆ.

ಸಿನಿಮಾ ಸಂಗೀತದಲ್ಲಿ ಅಪಾರ ಪ್ರತಿಭೆ, ಪ್ರಭುತ್ವ ಹೊಂದಿರುವ ಹಂಸಲೇಖ, ಅದೇ ಮ್ಯಾಜಿಕ್ ಅನ್ನು ನಿರ್ದೇಶನದಲ್ಲೂ ತೋರಬಲ್ಲರೆ. ಈಗಿನ ಪ್ರೇಕ್ಷಕನ ಅಭಿರುಚಿಗೆ ತಕ್ಕಂತೆ ಸಿನಿಮಾ ನಿರ್ದೇಶನ ಮಾಡಬಲ್ಲರೆ. ಕಾದು ನೋಡಬೇಕಿದೆ.  ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕದಿಂದ ಇರುವ ಅನುಭವಿ ಮತ್ತು ಪ್ರತಿಭಾವಂತ ಕಲಾವಿದ ಹಂಸಲೇಖ ಅವರು ಸಿನಿಮಾ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿರುವುದಕ್ಕೆ ಹಲವರು ಖುಷಿ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ