ಈದ್ಗಾ ಮೈದಾನದ ದಾಖಲೆ ಸಲ್ಲಿಸಲು ವಕ್ಫ್ ಬೋರ್ಡ್ಗೆ ನಾಳೆಯೇ ಕೊನೆಯ ದಿನ! ಬಿಬಿಎಂಪಿಯ ಮುಂದಿನ ನಿರ್ಧಾರವೇನು?
ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನ ಬಿಡುಗಡೆ ಮಾಡುವಂತೆ ವಕ್ಫ್ ಬೋರ್ಡ್ಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿ ಒಂದು ತಿಂಗಳ ಕಾಲ ಅವಕಾಶ ನೀಡಿತ್ತು.
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ (Idgah Maidan) ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈದ್ಗಾ ಮೈದಾನ ನಮ್ಮ ಸ್ವತ್ತು ಎಂದು ಬಿಬಿಎಂಪಿ (BBMP) ಹೇಳುತ್ತಿದ್ದರೆ, ಇದು ವಕ್ಫ್ ಬೋರ್ಡ್ಗೆ ಸೇರಿದ್ದೆಂದು ಮುಸ್ಲಿಂ ಮುಖಂಡರು ವಾದಿಸುತ್ತಿದ್ದಾರೆ. ಈ ಹಿನ್ನೆಲೆ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನ ಬಿಡುಗಡೆ ಮಾಡುವಂತೆ ವಕ್ಫ್ ಬೋರ್ಡ್ಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿ ಒಂದು ತಿಂಗಳ ಕಾಲ ಅವಕಾಶ ನೀಡಿತ್ತು. ದಾಖಲೆ ಸಲ್ಲಿಸಲು ನಾಳೆಯೇ ಕೊನೆಯ ದಿನ. ಆದರೂ ವಕ್ಫ್ ಬೋರ್ಡ್ ಇದುವರೆಗೆ ಯಾವುದೇ ದಾಖಲೆಗಳನ್ನ ಸಲ್ಲಿಕೆ ಮಾಡಿಲ್ಲ.
ವಕ್ಫ್ ಬೋರ್ಡ್ ಇದುವರೆಗೂ ಮಾಹಿತಿ, ದಾಖಲೆ ನೀಡದ ಕಾರಣ ನಾಳೆ ರೆವಿನ್ಯೂ ಇಲಾಖೆಗೆ ಬಿಬಿಎಂಪಿಯಿಂದ ವರದಿ ಸಲ್ಲಿಕೆ ಮಾಡಲಾಗುತ್ತದೆ. ರೆವಿನ್ಯೂ ಇಲಾಖೆಯಿಂದ ಪರಭಾರೆ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Tamil Nadu Politics: ಎಐಎಡಿಎಂಕೆ ವಿಭಜನೆಯಿಂದ ಡಿಎಂಕೆಗೆ ಲಾಭ, ಬಿಜೆಪಿ ಹೊಸ ಅವಕಾಶ
ಮೈದಾನಕ್ಕೆ ಯಾರು ಮಾಲೀಕತ್ವ ಇಲ್ಲದ ಕಾರಣ ಬಿಬಿಎಂಪಿಗೆ ಸುಪರ್ದಿಗೆ ನೀಡುವಂತೆ ಬಿಬಿಎಂಪಿ ವರದಿ ತಯಾರಿಸುತ್ತಿದೆ. ನಂತರ ಬಿಬಿಎಂಪಿ ಹೆಸರಿಗೆ ಮೈದಾನ ನೋಂದಣಿ ಮಾಡಿಕೊಳ್ಳುತ್ತದೆ.
ಇಂದು ಚಾಮರಾಜಪೇಟೆ ಬಂದ್: ಮೈದಾನ ವಿವಾದದ ಹಿನ್ನೆಲೆ ಇಂದು ಚಾಮರಾಜಪೇಟೆ ಬಂದ್ಗೆ ಕರೆ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ, ಇಂದಿನ ಬಂದ್ಗೆ ಕ್ಷೇತ್ರದ ಜನರ ಬೆಂಬಲ ತುಂಬಾ ಚೆನ್ನಾಗಿದೆ. ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ. ಓಪನ್ ಇರುವ ಅಂಗಡಿಗಳಿಗೆ ತೆರಳಿ ಮನವಿ ಮಾಡುತ್ತಿದ್ದೇವೆ. ಮೈದಾನ ಎಂದೆಂದಿಗೂ ಬಿಬಿಎಂಪಿ ಸ್ವತ್ತು ಅಂತ ಘೋಷಿಸಲಿ. ಈ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕು. ಇಂದು ಪ್ರತಿಭಟನೆ ಅಷ್ಟೇ, ಱಲಿ ಇರಲ್ಲ. ಕೇವಲ ಬಂದ್. ಬಂದ್ ಬಳಿಕ ಒಕ್ಕೂಟದ ಸದಸ್ಯರೆಲ್ಲ ಸೇರಿ ಸಭೆ ನಡೆಸುತ್ತೇವೆ. ಆ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: Breaking News: ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ; ಕಿಟಕಿ ಗಾಜುಗಳು ಪುಡಿಪುಡಿ
Published On - 9:27 am, Tue, 12 July 22