ಬೆಂಗಳೂರು: ಯುವತಿ ಮೇಲೆ ಬಸ್​ ಹತ್ತಿಸಲು ಯತ್ನಿಸಿದ BMTC ಬಸ್​ ಚಾಲಕ, ವಿಡಿಯೋ ವೈರಲ್​

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕನೊಬ್ಬ ಮಹಿಳೆಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಘಟನೆ ನಡೆದಿದೆ. ಕ್ಷೀನ್ಸ್ ಜಂಕ್ಷನ್ ಬಳಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಲಾಗಿದೆ. ಚಾಲಕ ತನ್ನ ಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಜೂನ್​ 01: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚಾಲಕ ಯುವತಿ ಮೇಲೆ ಬಸ್​ ಹತ್ತಿಸಲು ಯತ್ನಿಸಿರುವ ಘಟನೆ ಕಸ್ತೂರ್ಬಾ ರಸ್ತೆಯ ಕ್ಷೀನ್ಸ್​ ಜಂಕ್ಷನ್​ (ಎಂ.ಜಿ.ರಸ್ತೆ) ಬಳಿ ನಡೆದಿದೆ. ಮೇ 23ರ ಸಂಜೆ 5.40ಕ್ಕೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್​ ಚಾಲಕ (BMTC Bus Driver) ಮತ್ತು ಯುವತಿ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೀನ್ಸ್​ ಜಂಕ್ಷನ್​ನಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಚಾಲಕನನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ, ಚಾಲಕ ಯುವತಿಯ ಮೇಲೆ​ ಬಸ್​ ನುಗ್ಗಿಸಿದ್ದಾರೆ.

ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರು ಯುವತಿಯ ಜೀವಕ್ಕೆ ಕುತ್ತು ಬರುತ್ತಿತ್ತು. ಚಾಲಕನ ಕೃತ್ಯ ಕಂಡು ಜನರು ಬೆಚ್ಚಿಬಿದ್ದಿದ್ದರು. ಇನ್ನು, ಯುವತಿಯ ಮೇಲೆ ಬಸ್​ ಹತ್ತಿಸಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಬಿಎಂಟಿಸಿ ಬಸ್​ ಚಾಲಕ ಅಮಾನತು

ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಮುಂದಾಗಿದ್ದ ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ
ಕಾರಿನ ಗ್ಲಾಸ್ ಒಡೆದು 11 ಲಕ್ಷ ರೂ. ಕಳ್ಳತನ: ಸಿಸಿಟಿವಿ ವಿಡಿಯೋ ನೋಡಿ
ಬೆಂಗಳೂರಿನ ಉದ್ಯಮಿ ಮನೆಯಲ್ಲಿ ನೇಪಾಳ ಮೂಲದ ದಂಪತಿ ಸೇರಿ ಐವರಿಂದ ಕಳ್ಳತನ
ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಇದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್
ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ?

ಯುವತಿ ಹಲ್ಲೆ ಮಾಡಲು ಮುಂದಾದರು: ಬಿಎಂಟಿಸಿ ಬಸ್​ ಚಾಲಕ

ಹಡ್ಸನ್ ಸಿಗ್ನಲ್​ನಲ್ಲಿ ಟ್ಯಾಂಕರ್ ಹಾಗೂ ಬಿಎಂಟಿಸಿ ಬಸ್ ಮುಂದೆ ಯುವತಿ ಕಾರು ಓಡಿಸಿಕೊಂಡು ಬಂದರು. ಆಗ ಯುವತಿ ಟ್ಯಾಂಕರ್ ಚಾಲಕನಿಗೆ ಬೈಯುತ್ತಾರೆ. ನಂತರ ಕಾರ್ಪೋರೇಷನ್ ಸಿಗ್ನಲ್​ನಲ್ಲಿ ಜನರನ್ನು ಹತ್ತಿಸಿಕೊಳ್ಳುವಾಗ, ಜಗಳದಲ್ಲಿ ಒಂದು ಸಿಗ್ನಲ್ ಹೋಯ್ತು ಅಂತಾ ನಾನು ಬೈದೆ ಎಂದು ಅಮಾನತು ಆದ ಬಿಎಂಟಿಸಿ ಚಾಲಕ ಪ್ರಶಾಂತ್ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ

ಈ ಸಲುವಾಗಿ ಬಿಎಂಟಿಸಿ ಬಸ್​ ಅನ್ನು ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದರು. ಕಬ್ಬನ್ ಪೇಟೆ ಸಿಗ್ನಲ್​ನಲ್ಲಿ ಬಸ್ ನಿಲ್ಲಿಸಿದಾಗ ಅವಾಚ್ಯ ಶಬ್ದದಿಂದ ಬೈದು, ನನ್ನ ‌ಮೇಲೆ ‌ಹಲ್ಲೆ ಮಾಡಲು ಮುಂದಾದರು. ಕೆಳಗೆ ಇಳಿ ಅಂತ ಕೈ ಸನ್ನೆ ಮಾಡಿದರು. ನನ್ನ ತಪ್ಪು ಇಲ್ಲದೆ ನಾನು ಏಕೆ ಕೇಳಗೆ ಇಳಿಯಲಿಲ್ಲ. ಎಡಭಾಗಕ್ಕೆ ಬಸ್ ಚಲಾಯಿಸಿದೆ ಹೊರತು ಯುವತಿ ಮೇಲೆ ನುಗ್ಗಿಸಲು ಪ್ರಯತ್ನಿಸಿಲ್ಲ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ