ಕೊರೊನಾ ಮಧ್ಯೆ Influenza, SARI ಕೇಸ್ಗಳು ಹೆಚ್ಚಳ!
ಕರ್ನಾಟಕದಲ್ಲಿ ಕೊರೋನಾ ವೈರಸ್‌ನ ಓಮಿಕ್ರಾನ್ ಉಪತಳಿ ಜೆಎನ್.1 ಹರಡುತ್ತಿದೆ. ಈ ಮಧ್ಯೆ ಜನವರಿಯಿಂದ 4536 ಸಾರಿ ಮತ್ತು ಇನ್ಫ್ಲುಯೆನ್ಜ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವಾರ 154 ಸಾರಿ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆ ಜನರಿಗೆ ಜಾಗರೂಕರಾಗಿರಲು, ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ. ಜ್ವರ, ಕೆಮ್ಮು, ಇತ್ಯಾದಿ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ.

ಬೆಂಗಳೂರು, ಜೂನ್ 01: ವೈರಸ್ ಜೊತೆ ಬದುಕಲು ಕಲಿಯಬೇಕು ಎಂದು ಹೇಳುವ ವೈದ್ಯರ ಮಾತು ನಿಜವಾಗುತ್ತಿದೆ. ಎಡ್ಮೂರು ವರ್ಷಗಳ ಹಿಂದೆ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಕೊರೊನಾ ವೈರಸ್ (Covid) ಮತ್ತೆ ಬಂದಿದೆ. ವೈರಲ್ ಫೀವರ್ ಹಾಗೂ ಸಾಂಕ್ರಾಮಿಕ ಖಾಯಿಲೆಗಳ ನಡುವೆ ರಾಜ್ಯದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ರೂಪಾಂತರ ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ವೈರಸ್ ರಾಜ್ಯಕ್ಕೆ ವಕ್ಕರಿಸಿದೆ. ಈ ನಡುವೆ ರಾಜ್ಯದಲ್ಲಿ ಜನವರಿಯಿಂದ ಈವರೆಗೆ 4536 ಸಾರಿ (SARI) ಹಾಗೂ ಇನ್ಫ್ಲುಯೆನ್ಜ್ (Influenza) ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆ ಕೆಡಿಸಿದೆ.
ಕಳೆದ ಒಂದು ವಾರದ ಹಿಂದೆ 154 ಸಾರಿ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಾರಿ ಪ್ರಕರಣಗಳ ಸಂಖ್ಯೆ 3357ಕ್ಕೆ ಏರಿಕೆಯಾಗಿದೆ. ಕಳೆದ ವಾರ 12 ಇನ್ಫ್ಲುಯೆನ್ಜ್ ಪ್ರಕರಣಗಳು ಪತ್ತೆಯಾಗಿದ್ದವು. ದಿನದಿಂದ ದಿನಕ್ಕೆ ಸಾರಿ ಹಾಗೂ ಇನ್ಫ್ಲುಯೆನ್ಜ್ ಪ್ರಕರಣಗಳು ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಸಾರಿ, ಇನ್ಫ್ಲುಯೆನ್ಜ್ ವೈರಸ್ ಕೊರೊನಾ ಬರಲು ಕಾರಣವಾಗುತ್ತಿದ್ದು, ಆರೋಗ್ಯ ಇಲಾಖೆ ಈ ರೋಗ ಗುಣಲಕ್ಷಣ ಹೊಂದಿದವರ ಮೇಲೆ ಹೆಚ್ಚು ಗಮನ ಇರಿಸಿದೆ. ಸಾರಿ ಗುಣಲಕ್ಷಣ ಹೊಂದಿರುವವರಿಗೆ ಕೋವಿಡ್ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಆರೋಗ್ಯ ಇಲಾಖೆಯಿಂದ ಸೂಚನೆ
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ನೀಡಿದೆ. ಜನರು ಆತಂಕ ಪಡಬಾರದು, ಜಾಗರೂಕರಾಗಿ ಇರಬೇಕು. ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿಯನ್ನ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ. ಜನದಟ್ಟಣೆ ಸ್ಥಳದಲ್ಲಿ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಗುಣಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. ರ‍್ಯಾಂಡಮ್ ಪರೀಕ್ಷೆಗೆ ಸಹಕರಿಸಬೇಕು. ಗುಣಲಕ್ಷಣಗಳಿರುವ ಮಕ್ಕಳನ್ನು ಮನೆಯಲ್ಲೇ ಇರಿಸಿಕೊಳ್ಳಿ ಎಂದು ಸೂಚನೆ ನೀಡಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯತೆ ಕಾಪಾಡಿ. ಕೊರೊನಾ ಸಹಾಯವಾಣಿಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಿ ಎಂದು ಸೂಚನೆ ನೀಡಿದೆ.
ಇದನ್ನೂ ಓದಿ: ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಪ್ರಮುಖ ಸೂಚನೆ
ವೈದ್ಯರಿಂದ ಸಲಹೆ
ಜನರು ಜ್ವರ, ಕೆಮ್ಮು, ಸುಸ್ತು, ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಅತಿಸಾರ ಮತ್ತು ತಲೆನೋವು, ಉಸಿರಾಟದ ತೊಂದರೆ, ಆಯಾಸ, ತಲೆನೋವು, ಗಂಟಲು ನೋವು ಗುಣಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ.







