ಜ್ಯೋತಿಷಿ ಮಾತು ಕೇಳಿ ಬಾಂಬ್ ಬೆದರಿಕೆ ಹಾಕಿದ್ದ ರೆನೆ ಜೋಶಿಲ್ದಾ: ಮಾಜಿ ಲವರ್ ವಿರುದ್ಧ ಸಂಚು ಹೂಡಿದವಳ ಮೇಲಿದೆ 30 ಕೇಸ್!

ಗುಜರಾತ್​ನ ಟೆಕ್ಕಿ ಬೆಂಗಳೂರಿನ ಏಳು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಆರೋಪಿತೆ ರೆನೆ ಜೋಶಿಲ್ದಾ ದೆಹಲಿ ಪೊಲೀಸರಿಗೂ ಮೋಸ್ಟ್ ವಾಂಟೆಡ್ ಎನ್ನಲಾಗಿದೆ. ಈ ನಡುವೆ ಆಕೆಯ ಪ್ರಿಯಕರನಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು ಎಂಬ ವಿವರ ಇಲ್ಲಿದೆ.

ಜ್ಯೋತಿಷಿ ಮಾತು ಕೇಳಿ ಬಾಂಬ್ ಬೆದರಿಕೆ ಹಾಕಿದ್ದ ರೆನೆ ಜೋಶಿಲ್ದಾ: ಮಾಜಿ ಲವರ್ ವಿರುದ್ಧ ಸಂಚು ಹೂಡಿದವಳ ಮೇಲಿದೆ 30 ಕೇಸ್!
ರೆನೆ ಜೋಶಿಲ್ದಾ
Updated By: Ganapathi Sharma

Updated on: Nov 08, 2025 | 8:08 AM

ಬೆಂಗಳೂರು, ನವೆಂಬರ್ 8: ಬೆಂಗಳೂರಿನ (Bengaluru) ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರೆನೆ ಜೋಶಿಲ್ದಾನ ವಿಚಾರಣೆ ನಡೆಸಿದ ಉತ್ತರ ಸೆನ್ ವಿಭಾಗದ ಪೊಲೀಸರು ವಾಪಸ್ ಗುಜರಾತ್​ಗೆ ಬಿಟ್ಟು ಬಂದಿದ್ದಾರೆ. ಈ ನಡುವೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ನೇಮಗೌಡ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ಅಸ್ಪಷ್ಟ ಹಾಗೂ ವಿಚಿತ್ರ ಹೇಳಿಕೆಗಳನ್ನು ನೀಡಿದ್ದಾಳೆ. ಹೀಗಾಗಿ ರೆನೆ ಜೋಶಿಲ್ದಾ ಪ್ರಿಯಕರ ಪ್ರಭಾಕರ್‌ಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಚೆನ್ನೈಗೆ ತೆರಳಿರುವ ಪೊಲೀಸರು, ಅಲ್ಲಿನ ಸಿಸಿಬಿ ತಂಡದಿಂದ ರೆನಿ ಕೇಸ್‌ಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ನೀಡಲು ಮನವಿ ಮಾಡಿದ್ದಾರೆ. ಮೊದಲು ಚೆನೈ ಸಿಸಿಬಿ ಅಧಿಕಾರಿಗಳು ಆರೋಪಿತೆಯ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ ತನಿಖೆಗೆ ಅಗತ್ಯ ದಾಖಲೆ ನೀಡಲು ಅವರ ಬಳಿ ಮನವಿ ಮಾಡಿದ್ದಾರೆ.

ರೆನೆ ಜೋಶಿಲ್ದಾ ಯಾರು, ಹಿನ್ನೆಲೆ ಏನು?

ಮೂಲತಃ ಗುಜರಾತ್​ನವಳಾಗಿರುವ ರೆನೆ ಜೋಶಿಲ್ದಾ ಚೆನ್ನೈ ಏರ್ಪೋರ್ಟ್ ರಸ್ತೆಯ ಲುಮಿನಾ ಬ್ಲಾಕ್‌ನಲ್ಲಿ ವಾಸವಾಗಿದ್ದಳು. ಅಲ್ಲಿ ಬಿಇ ಎಲೆಕ್ಟ್ರಿಕಲ್ ವಿದ್ಯಾಭ್ಯಾಸ ಮುಗಿಸಿದ್ದಳು. ಹೀಗೆ 2023ರಲ್ಲಿ ಬೆಂಗಳೂರಿಗೆ ಬಂದಿದ್ದಳು. ಯಮಲೂರಿನ ಖಾಸಗಿ ಕಂಪನಿಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ರೋಬೋಟಿಕ್ ಇಂಜಿನಿಯರಿಂಗ್‌ ಹಿನ್ನಲೆ ಹೊಂದಿದ ರೆನಿಗೆ ತಾಂತ್ರಿಕ ಜ್ಞಾನವೂ ಸಾಕಷ್ಟಿತ್ತು. 2023 ರಿಂದ 2024 ರವರೆಗೆ ಕೆಲಸ ನಿರ್ವಹಿಸಿದ ಅವಧಿಯಲ್ಲಿ ಸ್ನೇಹಿತೆಯ ಮೂಲಕ ಪ್ರಭಾಕರ್ ಜೊತೆ ಪರಿಚಯವಾಗಿದ್ದು ನಂತರ ಪ್ರೇಮಕ್ಕೆ ತಿರುಗಿತ್ತು. ಬಳಿಕ ಪ್ರಭಾಕರ್ ಮತ್ತೊಬ್ಬಳನ್ನು ಮದುವೆಯಾದ ನಂತರ ರೆನಿ ತನ್ನ ಪ್ರೇಮ ವೈಫಲ್ಯಕ್ಕೆ ಪ್ರತೀಕಾರವಾಗಿ ಇಮೇಲ್ ಬಾಂಬ್ ಬೆದರಿಕೆ ಕಳುಹಿಸಿದ್ದಾಳೆ. ಇದಕ್ಕೂ ಮುನ್ನ ಆಕೆ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಪ್ರೇಮ ವೈಫಲ್ಯದ ಬಗ್ಗೆ ಸಮಾಲೋಚನೆ ನಡೆಸಿದ್ದಳು ಎನ್ನಲಾಗಿದೆ. ಆಗ, ಪ್ರಭಾಕರ್ ಹೆಸರಿಗೆ ಮಸಿ ಬಳಿಯುವಂತೆ ಏನಾದರೂ ಮಾಡು ಎಂದು ಜ್ಯೋತಿಷಿ ಸಲಹೆ ನೀಡಿದ್ದರು. ಅದಾದ ನಂತರ ಯುವತಿ ಬಾಂಬ್ ಬೆದರಿಕೆ ಹಾಕುವಂಥ ಕೃತ್ಯಕ್ಕೆ ಕೈಹಾಕಿದ್ದಳು ಎನ್ನಲಾಗಿದೆ.

ವರ್ಷಕ್ಕೆ 34 ಲಕ್ಷ ರೂ. ವೇತನ ಪ್ಯಾಕೇಜ್!

ವರ್ಷಕ್ಕೆ 34 ಲಕ್ಷ ರೂ. ಪ್ಯಾಕೇಜ್ ಸ್ಯಾಲರಿ ಇದ್ದರೂ ಅದನ್ನು ಬಿಟ್ಟು ದ್ವೇಷಕ್ಕೆ ಡಾರ್ಕ್ ವೆಬ್ ಮೂಲಕ ಇಡೀ ದೇಶಾದ್ಯಂತ ಖಾಸಗಿ ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ದೇಶಾದ್ಯಂತ ಬರೋಬ್ಬರಿ 30 ಕ್ಕೂ ಹೆಚ್ಚು ಪ್ರಕರಣಗಳು ಆರೋಪಿತೆ ರೆನಿ ಮೇಲಿದ್ದು, ದೆಹಲಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ‌.

ಇದನ್ನೂ ಓದಿ: ಲವ್ ಒಲ್ಲೆ ಎಂದ ಯುವಕ: ಸಿಟ್ಟಿನಲ್ಲಿ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಯುವತಿ ಅರೆಸ್ಟ್

ತನಗೆ ಗುರುತು ಪತ್ತೆಯಾಗದಂತೆ ಪ್ರಭಾಕರ್‌ನ ಇಮೇಲ್ ಐಡಿಯನ್ನು ಬಳಸಿ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ ಎಂಬ ವಿಚಾರವೂ ವಿಚಾರಣೆಯಲ್ಲಿ ಹೊರಬಂದಿದೆ. VPN ಸೇವೆ, ವರ್ಚುವಲ್ ನಂಬರ್ ಅಪ್ಲಿಕೇಶನ್ ಹಾಗೂ ಇಂಟರ್ನೆಟ್ ಸರ್ಚ್ ಮೂಲಕ ಪ್ಲಾನ್ ರೂಪಿಸಿದ್ದಾಳೆ ಎಂಬುದಾಗಿ ರೆನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ದೂರಾದ ಪ್ರಿಯಕರನ ಹೆಸರಿಗೆ ಮಸಿ ಬಳಿಯಲಿಯತ್ನಿಸಿ, ಪ್ರಿಯಕರನ ಮೇಲೆ ಮಸಲತ್ತು ಮಾಡಲೆತ್ನಿಸಿ ಆಕೆ ತಾನೇ ತೋಡಿದ ಹಳ್ಳಕ್ಕೆ ಬಿದ್ದು ಇದೀಗ ಮಾಡಿದ್ದುಣ್ಣೋ ಮಹರಾಯ ಎಂಬಂತೆ ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆಯುತ್ತಾ ಜೈಲಿನಲ್ಲಿ ಬಂದಿಯಾಗಿ ವಿಚಾರಣೆ ಎದುರಿಸುವಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ