
ಬೆಂಗಳೂರು, ಜನವರಿ 16: ಅವರು ನೋಡಲು ಹುಡುಗರಂತೆ ಕಾಣುತ್ತಿದ್ದರು. ಶರ್ಟ್, ಪ್ಯಾಂಟ್ ಹಾಕಿ, ಸ್ಟೈಲಿಷ್ ಆಗಿ ಓಡಾಡಿಕೊಂಡು ಹಾಡುಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದರು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಾಗಲೇ ಗೊತ್ತಾಗಿದ್ದು ಅವರು ಹುಡುಗಿಯರು ಎಂದು! ಈ ರೀತಿ ವೇಷ ಬದಲಿಸಿ ನಗರದ ಹೊರವಲಯದ ಸಂಪಿಗೆಹಳ್ಳಿಯಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಯುವತಿಯರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು–ನೀಲು ಎಂಬ ಯುವತಿಯರು ಹುಡುಗರ ವೇಷದಲ್ಲಿ ಬೈಕ್‌ನಲ್ಲಿ ಓಡಾಡುತ್ತಾ, ಮನೆ ಮಾಲೀಕರು ಹೊರಗೆ ಹೋದ ಸಮಯವನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದೇ ರೀತಿ ಜನವರಿ 13ರಂದು ಯಲಹಂಕ ಸಮೀಪದ ಅಗ್ರಹಾರ ಲೇಔಟ್‌ನಲ್ಲಿರುವ ಆಟೋ ಚಾಲಕ ಸಂಗಮೇಶ್ ಮನೆಗೆ ನುಗ್ಗಿದ್ದ ಕಳ್ಳಿಯರು, ಹಾಡಹಗಲೇ ಕನ್ನ ಹಾಕಿದ್ದರು. ಮನೆಯವರು ಹೊರಗೆ ಹೋಗಿದ್ದನ್ನೇ ಕಾದು, ನಂತರ ಮನೆಯಲ್ಲಿದ್ದ ನಗದು ಹಾಗೂ ಮೌಲ್ಯವಸ್ತುಗಳನ್ನು ದೋಚಿದ್ದರು.
ಇದನ್ನೂ ಓದಿ ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ
ಮನೆಗೆ ವಾಪಸ್ ಬಂದ ಸಂಗಮೇಶ್, ಕಳ್ಳತನವಾಗಿರುವುದು ತಿಳಿದು ದಂಗಾಗಿದ್ದರು. ಬಳಿಕ ಸಂಪಿಗೆಹಳ್ಳಿ ಪೊಲೀಸರಿಗೆ ಚಾಲಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕಳ್ಳತನದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳಿಯರು ಬಳಸಿದ್ದ ಸ್ಕೂಟಿಯ ನಂಬರ್ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಸಿಸಿಟಿವಿ ಹಾಗೂ ವಾಹನ ನೋಂದಣಿ ಸಂಖ್ಯೆ ಆಧಾರವಾಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಠಾಣೆಗೆ ಕರೆತಂದಾಗ ಶಾಕ್ ಆಗಿದ್ದರು. ಹುಡುಗರಂತೆ ಕಾಣುತ್ತಿದ್ದ ಕಳ್ಳರು ಶಾಲು ಮತ್ತು ನೀಲು ಎಂಬ ಯುವತಿಯರು ಎನ್ನುವುದು ಬೆಳಕಿಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.