ಬೆಂಗಳೂರೇ ಬೇಡ, ಚಿನ್ನಸ್ವಾಮಿಯಲ್ಲಿ ಪಂದ್ಯವಾಡಲ್ಲ ಅಂತಿದೆ RCB! ಅಭಿಮಾನಿಗಳಿಗೆ ನಿರಾಸೆ, KSCAಗೆ ಶಾಕ್
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ವರ್ಷ RCB ಪಂದ್ಯ ನಡೆಯುವುದು ಅನುಮಾನ. ಅಂದು ನಡೆದ ಆ ಒಂದು ಘಟನೆಯಿಂದ ಮತ್ತೆ ಚೇತರಿಸಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂಗೆ ಸಾಧ್ಯವಾಗುತ್ತಿಲ್ಲ. ಕೆಎಸ್ಸಿಎಗೆ ಹೊಸ ಆಡಳಿತ ಬಂದಮೇಲೆ ಮತ್ತೆ RCB ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಸಲು ಹರಸಾಹಸ ಪಡುತ್ತಿದೆ. ಆದರೂ ಇಲ್ಲಿ ಆಡಲ್ಲ ಎನ್ನುತ್ತಿದೆ ಆರ್ಸಿಬಿ ಮ್ಯಾನೇಜ್ಮೆಂಟ್!

ಬೆಂಗಳೂರು, ಜನವರಿ 16: ಕಳೆದ ವರ್ಷ ಜೂನ್ ನಾಲ್ಕರಂದು ಆರ್ಸಿಬಿ (RCB) ಅಭಿಮಾನಿಗಳಿಗೆ ಅತ್ಯಂತ ಕೆಟ್ಟ ಘಳಿಗೆ. ಟ್ರೋಫಿ ಗೆದ್ದ ಖುಷಿ ಅರೆ ಕ್ಷಣದಲ್ಲಿ ಮಾಯವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನ ಅವ್ಯವಸ್ಥೆ, ಪೊಲೀಸರ ನಿರ್ಲಕ್ಷ್ಯ, ಸರ್ಕಾರದ ಬೇಜವಬ್ದಾರಿಗೆ 11 ಜನ ಮೃತಪಟ್ಟಿದ್ದರು. ಆ ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಹಳೆ ವೈಭವವನ್ನು ಕಾಣಲು ಸಾಧ್ಯವಾಗದೆ ಪರದಾಡುತ್ತಾ ಇದೆ. ಕೆಎಸ್ಸಿಎ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಕೂಡ ಭರವಸೆ ಕೊಟ್ಟಿದ್ದರು. ಆದರೆ KSCAಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಸಡನ್ ಶಾಕ್ ನೀಡಿದೆ.
ಕಾಲ್ತುಳಿತ ಪ್ರಕರಣದಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಪ್ರಮುಖ ಆರೋಪಿ ಸ್ಥಾನದಲ್ಲಿದೆ. ಅಲ್ಲದೆ ಉಪಾಧ್ಯಕ್ಷ ರಾಜೇಶ್ ಮೆನನ್ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೆ ಆರ್ಸಿಬಿ ಮ್ಯಾನೇಜ್ಮೆಂಟ್ ಮೇಲೆ ಈ ಘಟನೆ ಕಪ್ಪು ಚುಕ್ಕೆ ತಂದಿಟ್ಟಿತ್ತು. ಈ ಹಿನ್ನಲೆ ರಾಜೇಶ್ ಮೆನನ್ ಚಿನ್ನಸ್ವಾಮಿ ಸಹವಾಸ ಬೇಡ ಅಂದಿದ್ದಾರೆ. ನಾವು ರಾಯಪುರ್ ಅಥವಾ ನವೀ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ಹೋಮ್ ಗ್ರೌಂಡ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಆರ್ಸಿಬಿ ಪಂದ್ಯ ಚಿನ್ನಸ್ವಾಮಿಯಿಂದ ದೂರವಾದ್ರೆ ಕೆಎಸ್ಸಿಎಗೆ ಇದು ದೊಡ್ಡ ನಷ್ಟ.
ಚಿನ್ನಸ್ವಾಮಿ ಸ್ಟೇಡಿಯಂ ಕಾಮಗಾರಿಗಳ ಪರಿಶೀಲಿಸಿದ ಪೊಲೀಸ್ ಆಯುಕ್ತ
ಪೊಲೀಸ್ ಕಮಿಷನರ್ ಒಳಗೊಂಡು ಗುರುವಾರ ಸಭೆ ಕೂಡ ಮಾಡಲಾಗಿದೆ. ಪೊಲೀಸ್ ಇಲಾಖೆ ಈಗಾಗಲೆ 17 ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು KSCAಗೆ ಸೂಚನೆ ಕೊಟ್ಟಿತ್ತು. ಅದರ ಕಾಮಗಾರಿಯನ್ನು ಈಗಾಗಲೆ KSCA ಶುರುಮಾಡಿಕೊಂಡಿದೆ. ಗುರುವಾರದ ಸಭೆಯ ನಂತರ, ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕಮಿಷನರ್ ಪರಿಶೀಲನೆ ನಡೆಸಿದ್ದಾರೆ. ಸಭೆಯಲ್ಲಿ ಜಿಬಿಎ, ಅಗ್ನಿಶಾಮಕ, BWSSB, ಬೆಸ್ಕಾಂ ಅಧಿಕಾರಿಗಳು ಬಾಗಿಯಾಗಿದ್ದರು. ಹೇಗಾದ್ರೂ ಮಾಡಿ ಸಮಸ್ಯೆ ಬಗೆಹರಿಸಿಕೊಂಡು ಆರ್ಸಿಬಿ ಪಂದ್ಯವನ್ನು ಚಿನ್ನಸ್ವಾಮಿಯಲ್ಲಿ ಆಡಿಸಲು KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮುಳುವಾದ ಆರ್ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು
ಒಟ್ಟಾರೆ ಈ ವರ್ಷ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯವಾಡುವುದು ಬಹುತೇಕ ಅನುಮಾನ. ವ್ಯವಸ್ಥೆ ಸರಿ ಇಲ್ಲ, ಏನಾದರೂ ಆದರೆ ನಾವೇ ಹೊಣೆಯಾಗುತ್ತೇವೆ ಎಂಬ ಭಯ ಆರ್ಸಿಬಿ ಮ್ಯಾನೇಜ್ಮೆಂಟ್ ಹಿಂದಿದೆ. ಈ ನಡುವೆ KSCA ಮಾತ್ರ ಎಲ್ಲಾ ಸಮಸ್ಯೆ ಕ್ಲಿಯರ್ ಮಾಡಿ ಆರ್ಸಿಬಿ ಮ್ಯಾನೇಜ್ಮೆಂಟ್ ಮನವೊಲಿಸುವ ಕೆಲಸ ಮಾಡುತ್ತಾ ಇದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
