WPL 2026: ಹಾಲಿ ಚಾಂಪಿಯನ್ ಮುಂಬೈ ಮಣಿಸಿ ಮೊದಲ ಗೆಲುವು ದಾಖಲಿಸಿದ ಯುಪಿ
WPL 2026: ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಆವೃತ್ತಿಯ 8ನೇ ಪಂದ್ಯದಲ್ಲಿ, ಯುಪಿ ವಾರಿಯರ್ಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಆಘಾತ ನೀಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಯುಪಿ ತಂಡದ ಇದು ಮೊದಲ ಗೆಲುವು. ಹರ್ಲೀನ್ ಡಿಯೋಲ್ ಅವರ ಅಜೇಯ 64 ರನ್‌ಗಳ ಅಮೋಘ ಪ್ರದರ್ಶನದಿಂದ ಯುಪಿ ತಂಡವು ಗೆಲುವಿನ ದಡ ಸೇರಿತು.

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) 4ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ (UP Warriors vs Mumbai Indians) ತಂಡಗಳು ಮುಖಾಮುಖಿಯಾಗಿದ್ದವು. ಈ ಆವೃತ್ತಿಯಲ್ಲಿ ಯುಪಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿರುವುದರಿಂದ ಇಂದಿನ ಪಂದ್ಯದಲ್ಲೂ ಮುಂಬೈ ತಂಡವೇ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಯುಪಿ ತಂಡ ಬಲಿಷ್ಠ ಮುಂಬೈ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಈ ಆವೃತ್ತಿಯಲ್ಲಿ ಮೊದಲು ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್ಲೀನ್ ಡಿಯೋಲ್ (Harleen Deol) 39 ಎಸೆತಗಳಲ್ಲಿ 64 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
161 ರನ್ ಕಲೆಹಾಕಿದ ಮುಂಬೈ
ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ತಂಡದ ಪರ ನ್ಯಾಟ್ ಸಿವರ್-ಬ್ರಂಟ್ 43 ಎಸೆತಗಳಲ್ಲಿ 65 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಇನ್ನಿಂಗ್ಸ್ ಆರಂಭಿಸಿದ ಅಮನ್‌ಜೋತ್ ಕೌರ್ 38 ರನ್‌ಗಳ ಕಾಣಿಕೆ ನೀಡಿದರು. ನಿಕೋಲಾ ಕ್ಯಾರಿ ಕೂಡ ಅಜೇಯ 32 ರನ್‌ಗಳ ಕೊಡುಗೆ ನೀಡಿದರು. ಇತ್ತ ಯುಪಿ ವಾರಿಯರ್ಸ್ ಪರ ಶಿಖಾ ಪಾಂಡೆ, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್ ಮತ್ತು ಆಶಾ ಸಬಾನಾ ತಲಾ ಒಂದು ವಿಕೆಟ್ ಪಡೆದರು.
ಹರ್ಲೀನ್ ಡಿಯೋಲ್ ಅದ್ಭುತ ಇನ್ನಿಂಗ್ಸ್
ಗುರಿಯನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡವು ಅದ್ಭುತ ಬ್ಯಾಟಿಂಗ್ ನಡೆಸಿ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 162 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್ಲೀನ್ ಡಿಯೋಲ್ ಅಜೇಯ 64 ರನ್ ಗಳಿಸಿದರು. 164.10 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಹರ್ಲೀನ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಸೇರಿದ್ದವು. ವಾಸ್ತವವಾಗಗಿ ಹರ್ಲೀನ್ ಡಿಯೋಲ್ ಹಿಂದಿನ ಪಂದ್ಯದಲ್ಲಿಯೂ 47 ರನ್ ಗಳಿಸಿದ್ದರು. ಆದರೆ ಅವರ ಕಳಪೆ ಸ್ಟ್ರೈಕ್ ರೇಟ್ ಕಾರಣದಿಂದಾಗಿ ಅವರನ್ನು ಆಟದ ಮಧ್ಯದಲ್ಲಿಯೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿಕೊಳ್ಳಲಾಗಿತ್ತು. ಆದರೆ ಈ ಪಂದ್ಯದಲ್ಲಿ ಆದ ಅವಮಾನಕ್ಕೆ ಹರ್ಲೀನ್ ಸೂಕ್ತ ಉತ್ತರ ನೀಡಿದರು.
ಹರ್ಲೀನ್ ಡಿಯೋಲ್ ಜೊತೆಗೆ, ಕ್ಲೋಯ್ ಟ್ರಯಾನ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿ 11 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಫೋಬೆ ಲಿಚ್‌ಫೀಲ್ಡ್ ಕೂಡ 25 ರನ್‌ಗಳ ಕೊಡುಗೆ ನೀಡಿದರು. ಇದಕ್ಕೂ ಮೊದಲು, ನಾಯಕಿ ಮೆಗ್ ಲ್ಯಾನಿಂಗ್ ಕೂಡ 25 ರನ್ ಗಳಿಸಿದರು. ಇತ್ತ ಮುಂಬೈ ಪರ ನ್ಯಾಟ್ ಸಿವರ್-ಬ್ರಂಟ್ ಎರಡು ವಿಕೆಟ್ ಪಡೆದರಾದರೂ ಅವರ ಪ್ರದರ್ಶನ ತಂಡದ ಗೆಲುವಿಗೆ ಸಾಕಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 pm, Thu, 15 January 26
