ಬೆಂಗಳೂರು, ಆಗಸ್ಟ್ 5: ಪಿಎಸ್ಐ ಪರಶುರಾಮ್ ಸಾವು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಬಳಿ, ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಮ್ಮೇಗೌಡ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಬೆಂಗಳೂರು ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ತಿಮ್ಮೇಗೌಡ ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಸದ್ಯ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ವ್ಯಕ್ತಿಯೊಬ್ಬರ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಿಡದಿ ಸಮೀಪ ಸೋಮವಾರ ಬೆಳಗ್ಗೆ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರೊಬ್ಬರು ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ಮೃತಪಟ್ಟವರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಎಂಬುದು ಗೊತ್ತಾಯಿತು.
ತಿಮ್ಮೇಗೌಡ ಸುಮಾರು 20 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ತಿಂಗಳುಗಳ ಹಿಂದಷ್ಟೇ ಅವರು ಸಿಸಿಬಿ ಆರ್ಥಿಕ ವಿಭಾಗಕ್ಕೆ ವರ್ಗಾವಣೆಯಾಗಿದ್ದರು.
ಇದನ್ನೂ ಓದಿ: PSI ಪರಶುರಾಮ್ ಸಾವು: ಸರ್ಕಾರ ಆದೇಶಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ಎಂಟ್ರಿ, ಮೊದಲ ದಿನ ಏನೇನಾಯ್ತು?
ಇದೀಗ ಬಿಡದಿ ಪೊಲೀಸರು ತಿಮ್ಮೇಗೌಡ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಆ ನಂತರದಲ್ಲಿ ಪಿಎಸ್ಐ ಪರಶುರಾಮ್ ಸಾವು ಕೂಡ ಬಹಳಷ್ಟು ಸದ್ದು ಮಾಡುತ್ತಿದೆ. ಈ ಎಲ್ಲ ಘಟನೆಗಳ ಬೆನ್ನಲ್ಲೇ ಇದೀಗ ಸಿಸಿಬಿ ಇನ್ಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 am, Mon, 5 August 24