ಲಾಕ್​ಡೌನ್ ವೇಳೆ ರಸ್ತೆ ಪಕ್ಕ ನಿಲ್ಲಿಸಿದ್ದ ರೋಡ್ ರೋಲರ್ ಕದ್ದರು! ಅನ್​ಲಾಕ್ ಆಗುತ್ತಿದ್ದಂತೆ ಸಿಕ್ಕಿಬಿದ್ದರು!

| Updated By: Skanda

Updated on: Jun 24, 2021 | 7:15 AM

ರೋಡ್ ರೋಲರ್ ಕದ್ದೊಯ್ದ ಆರೋಪಿಗಳು ಮಾಗಡಿರಸ್ತೆಯ ಸೀಗೆಹಳ್ಳಿ ಬಳಿ ಗುಜರಿ ವ್ಯಾಪಾರಿ ಇಸ್ಮಾಯಿಲ್ ಎಂಬಾತನಿಗೆ ಮಾರಾಟ ಮಾಡಿದ್ದರು. ಕಬ್ಬಿಣದ ತೂಕದ ಲೆಕ್ಕದಲ್ಲಿ ಕದ್ದ ರೋಡ್ ರೋಲರ್ ಮಾರಾಟ ಮಾಡಿದ್ದ ಆರೋಪಿಗಳು, 7,200 ತೂಕದ ರೋಡ್ ರೋಲರ್​ನ್ನು ಕೆಜಿಗೆ 28 ರೂ ನಂತೆ ಮಾರಾಟ ಮಾಡಿದ್ದರು.

ಲಾಕ್​ಡೌನ್ ವೇಳೆ ರಸ್ತೆ ಪಕ್ಕ ನಿಲ್ಲಿಸಿದ್ದ ರೋಡ್ ರೋಲರ್ ಕದ್ದರು! ಅನ್​ಲಾಕ್ ಆಗುತ್ತಿದ್ದಂತೆ ಸಿಕ್ಕಿಬಿದ್ದರು!
ಕದ್ದು ಮಾರುತ್ತಿದ್ದ ರೊಡ್ ರೋಲರ್
Follow us on

ಬೆಂಗಳೂರು: ಲಾಕ್​ಡೌನ್ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರ್ ಕದ್ದು ಮಾರಿದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಬಾವಿ ನಿವಾಸಿ ಪವನ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಮತ್ತೋರ್ವ ಆರೋಪಿ ವಿನಯ್​ಗಾಗಿ ಪೋಲಿಸರು ಶೋಧ ಮುಂದುವರೆಸಿದ್ದಾರೆ. ರೋಡ್ ರೋಲರ್ ವಾಹನವನ್ನು ಜೂನ್ 18 ರಂದು ನಾಗರಬಾವಿಯಿಂದ ಆರೋಪಿಗಳು ಕಳವು ಮಾಡಿದ್ದರು.

ತಮಿಳುನಾಡು ಮೂಲದ ಸೆಲ್ವರಾಜ್ ಮಾಲೀಕತ್ವದ ರೋಡ್ ರೋಲರ್ ಕಳವು ಮಾಡಿದ್ದ ಆರೋಪಿಗಳು ಬುಲ್ಡೋಜರ್​ನ ಬಿಡಿಭಾಗಗಳನ್ನು ಬಿಚ್ಚಿ ಕಬ್ಬಿಣದ ಗುಜರಿಗೆ ಮಾರಾಟ ಮಾಡಿದ್ದರು. ಗುತ್ತಿಗೆ ಆಧಾರದಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ಸೆಲ್ವರಾಜ್ ತಮಿಳುನಾಡಿನಿಂದ ಚಂದ್ರಾಲೇಔಟ್ ಗೆ 5.50 ಲಕ್ಷ ಹಣ ನೀಡಿ ರೋಡ್ ರೋಲರ್ ತಂದಿದ್ದರು. ಲಾಕ್ ಡೌನ್ ಇದ್ದ ಕಾರಣ ಕಳೆದ ಮೇ ತಿಂಗಳಲ್ಲಿ ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿದ್ದ ಸೆಲ್ವರಾಜ್ ಲಾಕ್ ಡೌನ್ ಆಗಿ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೋಡ್ ರೋಲರ್ ನಾಗರಭಾವಿ ಬಳಿ ಪಾರ್ಕ್ ಮಾಡಿ ತೆರಳಿದ್ದರು. ಆದರೆ ಜೂನ್ 18 ರಂದು ನಾಗರಬಾವಿ ಬಳಿ ನಿಲ್ಲಿಸಿದ್ದ ರೋಡ್ ರೋಲರ್ ಪವನ್ ಮತ್ತು ಸಹಚರರು ಕದ್ದೊಯ್ದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಜೂನ್ 18 ರಂದು ಸೆಲ್ವರಾಜ್ ಬಂದು ನೋಡಿದಾಗ ರೋಡ್ ರೋಲರ್ ಕಳುವಾಗಿರುವುದು ಪತ್ತೆಯಾಗಿದ್ದು, ಚಂದ್ರಾಲೇಔಟ್ ಠಾಣೆಯಲ್ಲಿ ಈ ಬಗ್ಗೆ ಸೆಲ್ವರಾಜ್ ದೂರು ನೀಡಿದ್ದರು.

ರೋಡ್ ರೋಲರ್ ಕದ್ದೊಯ್ದ ಆರೋಪಿಗಳು ಮಾಗಡಿರಸ್ತೆಯ ಸೀಗೆಹಳ್ಳಿ ಬಳಿ ಗುಜರಿ ವ್ಯಾಪಾರಿ ಇಸ್ಮಾಯಿಲ್ ಎಂಬಾತನಿಗೆ ಮಾರಾಟ ಮಾಡಿದ್ದರು. ಕಬ್ಬಿಣದ ತೂಕದ ಲೆಕ್ಕದಲ್ಲಿ ಕದ್ದ ರೋಡ್ ರೋಲರ್ ಮಾರಾಟ ಮಾಡಿದ್ದ ಆರೋಪಿಗಳು, 7,200 ತೂಕದ ರೋಡ್ ರೋಲರ್​ನ್ನು ಕೆಜಿಗೆ 28 ರೂ ನಂತೆ ಮಾರಾಟ ಮಾಡಿದ್ದರು. ಇಸ್ಮಾಯಿಲ್ , ರೋಡ್ ರೋಲರ್ ಬಿಡಿಭಾಗಗಳನ್ನು ಬಿಚ್ಚಿ ತುಂಡು ಕಬ್ಬಿಣದ ರೀತಿ ಮಾರಾಟ ಮಾಡಲು ಮುಂದಾಗಿದ್ದ ಎಂದು ಪೊಲೀಸರು ತನಿಖೆಯ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಚಂದ್ರಾಲೇಔಟ್ ಠಾಣೆ ಪೊಲೀಸರು ಸದ್ಯ ಪವನ್ ಎಂಬಾತನನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ವಿನಯ್ ಹಾಗೂ ಇಸ್ಮಾಯಿಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:  ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ

ಹಾಸನದಲ್ಲಿ ಮೀನು ಹಿಡಿಯಲು ಕೆರೆಗೆ ನುಗ್ಗಿದ ಸಾವಿರಾರು ಜನ; ವಿಡಿಯೋ ವೈರಲ್

(Bengaluru Chandra Layout Police arrest man who stolen Road roller in Lockdown )