ಒಡೆದ ಹಾಲಿನ ಬಗ್ಗೆ ಬೆಂಗಳೂರಿಗರಿಂದ ದೂರಿನ ಸುರಿಮಳೆ; ಬೇಸಿಗೆ ನೆಪ ಹೇಳಿದ ಕೆಎಂಎಪ್
ಬುಧವಾರ ಮತ್ತು ಗುರುವಾರ ಬೆಂಗಳೂರಿನಲ್ಲಿ ಸಪ್ಲೈ ಆದ ನಂದಿನಿ ಹಾಲಿನ ಬ್ಲೂ ಪ್ಯಾಕೆಟ್ನ ಹಾಲು ಬಹುತೇಕ ಕೆಟ್ಟಿದ್ದು ಹಾಲು ಒಡೆದಿದೆ ಎಂದು ಅನೇಕ ಮಂದಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ.

ಬೆಂಗಳೂರು: ಮುಂಜಾನೆ ಎದ್ದ ತಕ್ಷಣ ಕಾಫಿ, ಟೀ ಕುಡಿಯಲು ಇಷ್ಟಪಡುವ ಅನೇಕ ಮಂದಿ ಬೆಳ್ಳಂ ಬೆಳಗ್ಗೆ ಕೆಎಂಎಫ್( Karnataka Milk Federation) ವಿರುದ್ಧ ಗರಂ ಆಗಿದ್ದಾರೆ. ಏಕೆಂದರೆ ಬುಧವಾರ ಮತ್ತು ಗುರುವಾರ ಬೆಂಗಳೂರಿನಲ್ಲಿ ಸಪ್ಲೈ ಆದ ನಂದಿನಿ ಹಾಲಿನ(Nandini Milk) ಬ್ಲೂ ಪ್ಯಾಕೆಟ್ನ ಹಾಲು ಬಹುತೇಕ ಕೆಟ್ಟಿದ್ದು ಈಗ ತಂದ ಹಾಲು ಒಡೆದಿದೆ ಎಂದು ಅನೇಕ ಮಂದಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದಕ್ಕೆ ಉತ್ತರಿಸಿರುವ ಕೆಎಂಎಫ್ ಬೇಸಿಗೆಯ ಕಾರಣ ಹೇಳಿ ಜಾರಿಕೊಂಡಿದೆ.
ಬೆಂಗಳೂರು ಸೇರಿದಂತೆ ಅನೇಕ ಕಡೆ ನಂದಿನಿ ಹಾಲು ಬಳಕೆದಾರರು ಇದೇ ರೀತಿಯ ಅನುಭವಗಳನ್ನು ಪಡೆದಿದ್ದಾರೆ. ಆದ್ರೆ ಇದರಲ್ಲಿ ಅಚ್ಚರಿಯ ವಿಷಯವೆಂದರೆ ಒಡೆದ ಹಾಲಿನ ಅನುಭವ ಪಡೆದ ಬಹುತೇಕ ನಂದಿನಿ ಹಾಲು ಬಳಕೆದಾರರು ಯಲಹಂಕದ ಕೆಎಂಎಫ್‌ನ ಮದರ್ ಡೈರಿಯ ಡೀಲರ್‌ಗಳಿಂದ ಹಾಲನ್ನು ಖರೀದಿಸಿದವರೇ ಆಗಿದ್ದಾರೆ. ಗ್ರಾಹಕರು ಬೆಳಗ್ಗೆ 6 ಗಂಟೆಗೆಯೇ ಹಾಲಿನ ಡೀಲರ್‌ಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಅಮುಲ್ನೊಂದಿಗೆ, KMF ನಂದಿನಿಯನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಮಾಧುಸ್ವಾಮಿ
ಹೆಸರು ಹೇಳಲು ಇಚ್ಛಿಸದ ಹಾಲಿನ ವ್ಯಾಪಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಅಂಗಡಿ ತೆರೆದು ಒಂದು ಗಂಟೆಯೊಳಗೆ ಒಡೆದ ಹಾಲಿನ ಬಗ್ಗೆ 10ಕ್ಕೂ ಹೆಚ್ಚು ಗ್ರಾಹಕರು ನನಗೆ ದೂರು ನೀಡಿದ್ದಾರೆ. ಹಾಗೂ ಗ್ರಾಹಕರು ಹಾಲಿನ ಮೊತ್ತ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದ್ರೆ ಈ ವರೆಗೂ ಕೆಎಂಎಫ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಗ್ರಾಹಕರಿಗೆ ಹಾಲನ್ನು ತಂಪಾಗಿಡಲು ಬರಲ್ಲ, ಅದುಕ್ಕೆ ಒಡೆದಿದೆ -ಕೆಎಂಎಫ್
ಬೇಸಿಗೆ ಶುರುವಾದ್ದರಿಂದ, ಹಾಲನ್ನು ಸಂಸ್ಕರಿಸುವಲ್ಲಿ ಗ್ರಾಹಕರಿಗೆ ಸಮಸ್ಯೆಗಳು ಎದುರಾಗಿರಬಹುದು. ನಾವು ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತೇವೆ. 20 ಲಕ್ಷ ಲೀಟರ್ ಹಾಲನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗಿದೆ. ಈ ಪೈಕಿ 10-5 ಲೀಟರ್ ಮಾತ್ರ ಹಾಳಾಗಿರಬಹುದು. ಆದರೆ ಹಾಳಾದ ಹಾಲಿನ ಬಗ್ಗೆ ಯಾವುದೇ ದೂರುಗಳು ಬಂದಿರುವ ಬಗ್ಗೆ ನಮಗೆ ತಿಳಿದಿಲ್ಲ ಎಂದು ಕೆಎಂಎಫ್ ಅಧಿಕಾರಿ ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:10 am, Tue, 7 March 23




