ಅಮುಲ್​ನೊಂದಿಗೆ, KMF ನಂದಿನಿಯನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಮಾಧುಸ್ವಾಮಿ

ಗುಜರಾತ್​ನ ಅಮುಲ್ ಕಂಪನಿಯೊಂದಿಗೆ, ಕರ್ನಾಟಕ ಹಾಲು ಒಕ್ಕೂಟ (KMF-ನಂದಿನಿ)​ಯನ್ನು ವಿಲೀನ ಮಾಡುವ ವಿಚಾರವಾಗಿ ಯಾವುದೇ ರೀತಿಯಾದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಅಮುಲ್​ನೊಂದಿಗೆ, KMF ನಂದಿನಿಯನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಮಾಧುಸ್ವಾಮಿ
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ
Follow us
ವಿವೇಕ ಬಿರಾದಾರ
|

Updated on:Feb 22, 2023 | 8:27 AM

ಬೆಂಗಳೂರು: ಗುಜರಾತ್​ನ (Gujarat) ಅಮುಲ್ (Amul) ಕಂಪನಿಯೊಂದಿಗೆ, ಕರ್ನಾಟಕ ಹಾಲು ಒಕ್ಕೂಟ (KMF-ನಂದಿನಿ)​ಯನ್ನು ವಿಲೀನ ಮಾಡುವ ವಿಚಾರವಾಗಿ ಯಾವುದೇ ರೀತಿಯಾದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ಹೇಳಿದ್ದಾರೆ. ಕೆಎಂಎಫ್​ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಹೀಗಾಗಿ ಅಮೂಲ್​ನೊಂದಿಗೆ ವಿಲೀನಗೊಳಿಸುವುದಿಲ್ಲ ಎಂದು ವಿರೋಧ ಪಕ್ಷಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ರಾಷ್ಟ್ರದ ಹಾಲು ಒಕ್ಕೂಟಗಳು ಜನಪ್ರಿಯ ಬ್ರ್ಯಾಂಡ್​ಗಳನ್ನು ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಕುರಿತು ಪ್ರಸ್ತಾವನೆ ಇತ್ತು. ಆದರೆ ಈ ವಿಚಾರ ಈಗಿಲ್ಲ ಎಂದು ಮಾಜಿ ಕೆಎಂಎಫ್​ ಅಧ್ಯಕ್ಷ ಮಾಧುಸ್ವಾಮಿ ಹೇಳಿದ್ದಾರೆ.

ಮಂಗಳವಾರ (ಫೆ.21) ವಿಧಾನಷರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು, ಒಂದೇ ಬ್ರ್ಯಾಂಡ್​ನಿಂದ ರಾಷ್ಟ್ರ ಮಟ್ಟದಲ್ಲಿ ತುಪ್ಪ, ಮೊಸರು, ಐಸ್ ಕ್ರೀಮ್, ಬೆಣ್ಣ ಮಾರಾಟ ಮಾಡುವುದರಿಂದ ಉತ್ತಮ ಲಾಭ ದೊರೆಯುತ್ತದೆ ಎಂಬ ವಿಚಾರದಿಂದ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಹೇಳಿದರು. ಆದರೆ ಅಮುಲ್​ನೊಂದಿಗೆ ಕೆಎಂಎಫ್​​ನ್ನು ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ಕೆಎಂಎಫ್​​ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್​ ಆಗಿದೆ ಎಂದು ಹೇಳಿದರು.

ಅಮುಲ್​ನೊಂದಿಗೆ ಕೆಎಂಎಫ್​ ವಿಲೀನ ವಿಚಾರವಾಗಿ ಅಮಿತ್​ ಶಾ ಹೇಳಿದ್ದೇನು?

2022ರ ಡಿಸೆಂಬರ್ 30 ರಂದು ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ಮಿಸಿದ್ದ ಮೆಗಾ ಡೈರಿ ಉದ್ಘಾಟನೆ ಬಳಿಕ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಗುಜರಾತ್​​ನಲ್ಲಿರುವ ಸಹಕಾರ ಒಕ್ಕೂಟ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿ 1975ರಿಂದಲೂ ಕೆಎಂಎಫ್​ ಕೂಡ ಅಭಿವೃದ್ಧಿ ಹೊಂದಿದೆ. ಅಮುಲ್​ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದಿದ್ದರು.

ಟೀಕೆ ವ್ಯಕ್ತಪಡಿಸಿದ್ದ ಹೆಚ್​ ಡಿ ಕುಮಾರಸ್ವಾಮಿ

ಈ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಬಿಜೆಪಿ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumaraswamy)  ವಾಗ್ದಾಳಿ ಮಾಡಿದ್ದರು.

ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟ ವ್ಯಕ್ತಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಕಿವಿ ಹಿಂಡದ ವ್ಯಕ್ತಿ ಈಗ ಕನ್ನಡ ನೆಲದ ಮಣ್ಣಿನ ಮಕ್ಕಳ ಜೀವನಾಡಿ ಕರ್ನಾಟಕ ಹಾಲು ಒಕ್ಕೂಟ (KMF- ನಂದಿನಿ) ಯನ್ನು ಗುಜರಾತಿನ ಅಮುಲ್​ನಲ್ಲಿ ವಿಲೀನ ಮಾಡುವ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮಾಡಲು ಹೊರಟಿರುವ ಘೋರ ಅನ್ಯಾಯ. ಕರ್ನಾಟಕ ರಾಜ್ಯವನ್ನು ಗುಜರಾತ್ ಮಾಡುವ ಧೂರ್ತ ಹುನ್ನಾರ ಇದು. ಅಷ್ಟೇ ಅಲ್ಲ, ಗುಜರತ್​ಗೆ ಕರ್ನಾಟಕವೇ ಪ್ರತಿಸ್ಪರ್ಧಿ ಎನ್ನುವ ಕಾರಣಕ್ಕೆ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮುಗಿಸೇಬೀಡಬೇಕು ಎನ್ನುವ ದುರಾಲೋಚನೆ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ಇದ್ದಂತಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:44 am, Wed, 22 February 23