ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಸೋಂಕು (Coronavirus Infection) ಮತ್ತೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಕೊರೊನಾ ಸೋಂಕಿತರ (Covid-19) ಸಂಖ್ಯೆ ದುಪ್ಪಟ್ಟಾಗಿದೆ. ನಗರ ವ್ಯಾಪ್ತಿಯಲ್ಲಿ ಜೂನ್ 1ರಿಂದ 16ರವರೆಗೆ ಒಟ್ಟು 31 ಮಂದಿ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಜೂನ್ 17ರಿಂದ 27ರ ಅವಧಿಯಲ್ಲಿ ಆಸ್ಪತ್ರೆಗೆ ಸೇರಿರುವ ಸೋಂಕಿತರ ಸಂಖ್ಯೆ 72ಕ್ಕೆ ಹೆಚ್ಚಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಬಿಡುಗಡೆ ಮಾಡಿರುವ ಬುಲೆಟಿನ್ನಲ್ಲಿ ಈ ಮಾಹಿತಿ ನಮೂದಾಗಿದೆ.
ನಗರದಲ್ಲಿ ಪ್ರತಿದಿನ ಸರಾಸರಿ 600ರಿಂದ 700ರಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಬಹುತೇಕ ಸೋಂಕಿತರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬರುತ್ತಿಲ್ಲ (Asymptomatic). ಸುಮಾರು 60 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆದರೆ ಬಹುತೇಕರು ತಾವೇ ಸ್ವಯಂಪ್ರೇರಣೆಯಿಂದ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಿಗೆ ಬಂದಿದ್ದಾರೆ. ಈ ಪೈಕಿ ಬಹುತೇಕರು ಖಾಸಗಿ ಆಸ್ಪತ್ರೆಗಳಿಗೆ ಸೇರಿದ್ದಾರೆ ಎಂಬ ಬಿಬಿಎಂಪಿ ವಿಶೇಷ ಆಯುಕ್ತರಾದ ಡಾ.ತ್ರಿಲೋಕ್ ಚಂದ್ರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ನಗರ ವ್ಯಾಪ್ತಿಯಲ್ಲಿ ಮಂಗಳವಾರ (ಜೂನ್ 28) ಕೊವಿಡ್ನಿಂದ 72 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ 10 ಮಂದಿ ಐಸಿಯುಗೆ, ಮೂವರು ಹೈ ಡಿಪೆಂಡೆನ್ಸಿ ಯೂನಿಟ್ಗೆ ಮತ್ತು 59 ಮಂದಿ ಸಾಮಾನ್ಯ ವಾರ್ಡ್ಗಳಿಗೆ ದಾಖಲಾಗಿದ್ದಾರೆ.
ಕೊರೊನಾ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಗರದಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ಮತ್ತು ತೀವ್ರತೆಯನ್ನೂ ತೋರಿಸುತ್ತದೆ. ಸೋಂಕಿನ ಸಂಭಾವ್ಯತೆ ಇರುವ ಕಾರಣ ಸಾಮಾನ್ಯ ವಾರ್ಡ್ಗಳಿಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪರಿಸ್ಥಿತಿ ಆತಂಕಕಾರಿಯಾಗಿಲ್ಲ, ನಿಯಂತ್ರಣದಲ್ಲಿದೆ ಎನ್ನುತ್ತಾರೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ (Karnataka’s Covid Technical Advisory Committee – TAC) ಅಧ್ಯಕ್ಷರಾದ ಡಾ.ಎಂ.ಕೆ.ಸುದರ್ಶನ್.
ಕೊವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗಿದೆಯಾದರೂ ಸಾವಿನ ಸಂಖ್ಯೆ ಕಡಿಮೆಯಿದೆ. ಆದರೂ ಐಸಿಯುಗೆ ದಾಖಲಾಗಿರುವ ರೋಗಿಗಳನ್ನು ನಾವು ಗಮನಿಸುತ್ತಿರಬೇಕು. ಪ್ರಸ್ತುತ ಐಸಿಯು ದಾಖಲಾತಿಗಳು ಕಡಿಮೆಯಿವೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. ಆಸ್ಪತ್ರೆಗೆ ದಾಖಲಾಗುವವರು ಬೇಗನೇ ಡಿಸ್ಚಾರ್ಜ್ ಆಗುತ್ತಿದ್ದಾರೆ. ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಕೇವಲ ಮೂರು ದಿನಗಳಲ್ಲಿ ಸೋಂಕು ಗುಣವಾಗಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ಮಾರ್ಗಸೂಚಿ ಬಿಡುಗಡೆ
ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
Published On - 10:03 am, Wed, 29 June 22