Bengaluru Crime: ಬೆಂಗಳೂರಿನ ಚಿನ್ನದ ಅಂಗಡಿ ದರೋಡೆ ಮಾಡಿದ್ದ ಮೂವರ ಬಂಧನ; ಇವರ ಪ್ಲಾನ್ ಕೇಳಿದ್ರೆ ದಂಗಾಗ್ತೀರ!
Bangalore Crime News: ಇಂದಿರಾನಗರದ ಚಿನ್ನದ ಅಂಗಡಿಯನ್ನು ದೋಚುವ ದಿನ ಮೂವರು ಗೆಳೆಯರು ಮನೆಯಿಂದ ಹೊರಡುವ ಮೊದಲು ಭಾರೀ ಪ್ಲಾನ್ ಮಾಡಿಕೊಂಡಿದ್ದರು. ಮಾಸ್ಕ್, ಗ್ಲೌಸ್ ಹಾಕಿಕೊಂಡು ಬಂದಿದ್ದ ಅವರ ಪ್ಲಾನ್ನಿಂದ ಪೊಲೀಸರಿಗೆ ಫಿಂಗರ್ ಪ್ರಿಂಟ್ ಕೂಡ ಸಿಗಲಿಲ್ಲ.
ಬೆಂಗಳೂರು: ಬೆಂಗಳೂರಿನ ಇಂದಿರಾ ನಗರದಲ್ಲಿ ಚಿನ್ನದ ಅಂಗಡಿಗೆ ಕನ್ನ ಹಾಕಿದ್ದ ಮಹೇಂದ್ರ, ಸ್ಯಾಮ್ಸನ್, ನೀಲಕಂಠ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಕಳ್ಳತನದ ಪ್ಲಾನ್ ಕೇಳಿದ್ರೆ ನೀವು ದಂಗಾಗಿ ಹೋಗುತ್ತೀರ. ಬ್ಯುಸಿನೆಸ್ ಮಾಡಬೇಕೆಂದು ನಿರ್ಧರಿಸಿದ ಬಾಲ್ಯದ ಗೆಳೆಯರು ಬೇಗನೇ ದುಡ್ಡು ಸಂಪಾದಿಸಲು ಹೋಗಿ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ.
ಹೋಟೆಲ್ ಉದ್ಯಮ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದ ಈ ಮೂವರು ಬಳಿಕ ದರೋಡೆಗೆ ಇಳಿದಿದ್ದರು. ಮೊದಲ ಪ್ರಯತ್ನದಲ್ಲೇ ವೃತ್ತಿಪರ ಕಳ್ಳರನ್ನೇ ಮೀರಿಸುವಂತೆ ಕೈ ಚಳಕ ತೋರಿದ್ದ ಇವರು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಬ್ಬೊಬ್ಬರು ಆನ್ ಲೈನ್ ಆ್ಯಪ್ ಸೇರಿದಂತೆ 20ರಿಂದ 30 ಲಕ್ಷದವರೆಗೆ ಕೈಸಾಲ ಪಡೆದಿದ್ದರು. ಇದರಿಂದ ಸಾಲಗಾರರ ಕಾಟ ಹೆಚ್ಚಾಗ ತೊಡಗಿತ್ತು. ಯಾವುದೇ ಕೆಲಸಕ್ಕೆ ಸೇರಿದರೂ 15ರಿಂದ 20 ಸಾವಿರ ರೂ. ಸಂಬಳ ಅಷ್ಟೇ ಬರುತ್ತದೆ, ಕೆಲಸಕ್ಕೆ ಸೇರಿ ಸಾಲ ತೀತಿಸಲು ಆಗೋದೆ ಇಲ್ಲ ಎಂದು ಕಳ್ಳತನ ಪ್ಲಾನ್ ಮಾಡಿದ್ದರು. ಇದಕ್ಕಾಗಿ ಮೂವರು ಸೇರಿ ಜ್ಯುವೆಲ್ಲರಿ ಅಂಗಡಿಗಳನ್ನು ದೋಚಲು ಸ್ಕೆಚ್ ಹಾಕಿದ್ದರು. ಅದಕ್ಕಾಗಿ ಬೀಗ ಕಟ್ ಮಾಡೊ ಕಟರ್ ಖರೀದಿಸಿದ್ದರು.
ಇದೇ ರೋಡಲ್ಲಿ ಯಾವ ಅಂಗಡಿ ಕಳ್ಳತನ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದ ಆ ಮೂವರು ದೊಡ್ಡ ದೊಡ್ಡ ಅಂಗಡಿಗಳನ್ನು ದೋಚೋದು ಕಷ್ಟ ಎಂದು ನಿರ್ಧರಿಸಿದ್ದರು. ದೊಡ್ಡ ಅಂಗಡಿಗಳಲ್ಲಿ ಅಲಾರಾಮ್, ಉತ್ತಮ ಲಾಕ್ ಸಿಸ್ಟಂ ಎಲ್ಲವೂ ಇರುತ್ತದೆ. ಹಾಗಾಗಿ ಅದನ್ನ ದೋಚೋದು ಕಷ್ಟ ಎಂದುಕೊಂಡಿದ್ದ ಆಸಾಮಿಗಳು ಸುಲಭವಾಗಿ ಲಾಕ್ ಒಡೆಯಬಹುದಾದ ಸಣ್ಣ ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದರು.
ಇಂದಿರಾನಗರದ ಚಿನ್ನದ ಅಂಗಡಿಯನ್ನು ದೋಚುವ ದಿನ ಮನೆಯಿಂದ ಹೊರಡುವ ಮೊದಲು ಭಾರೀ ಪ್ಲಾನ್ ಮಾಡಿಕೊಂಡು ಬಂದಿದ್ದರು. ಮಾಸ್ಕ್, ಗ್ಲೌಸ್ ಹಾಕಿಕೊಂಡು ಬಂದಿದ್ದ ಕಳ್ಳರ ಪ್ಲಾನ್ನಿಂದ ಪೊಲೀಸರಿಗೆ ಫಿಂಗರ್ ಪ್ರಿಂಟ್ ಕೂಡ ಸಿಗಲಿಲ್ಲ. ಅಲ್ಲದೇ ಜನ ಜಾಸ್ತಿ ಬರದ ಸಮಯಕ್ಕಾಗಿ ಕಾಯುತ್ತಿದ್ದರು. ಅದಕ್ಕಾಗಿ ಮಳೆ ಬರೊ ಸಮಯವನ್ನೇ ಕಾದು ಕುಳಿತಿದ್ದರು. 15 ದಿನದ ಹಿಂದೆ ತನ್ನ ಭಾವನ ಕಾರನ್ನು ತಂದಿದ್ದ ಮಹೇಂದ್ರ ಅದೇ ಕಾರಿನಲ್ಲಿ ತೆರಳಿ ಕಳ್ಳತನ ಮಾಡಲಾಗಿತ್ತು. ಕಾರಿನ ನಂಬರ್ ಪ್ಲೇಟ್ ಗೆ ಕಪ್ಪು ಬಣ್ಣ ಬಳಿದಿದ್ದ ಆಸಾಮಿಗಳು ಇದರಿಂದ ನಂಬರ್ ಗೊತ್ತಾಗೋದಿಲ್ಲ ಎಂದು ಯೋಚಿಸಿದ್ದರು.
ಮಳೆ ಇರೋದರಿಂದ ಜನ ಜಾಸ್ತಿ ಬರಲ್ಲ ಕೆಲಸ ಸುಲಭ ಅಂದುಕೊಂಡಿದ್ದರು. ಆದರೆ, ಅದೇ ಮಳೆ ಆ ಮೂವರಿಗೆ ಮುಳುವಾಯ್ತು. ಮಳೆಯಿಂದ ಕಾರಿನ ನಂಬರ್ ಪ್ಲೇಟ್ ಗೆ ಹಾಕಿದ್ದ ಕಪ್ಪು ಬಣ್ಣ ಅಳಿಸಿ ಅರ್ಧಂಪರ್ಧ ನಂಬರ್ ಕಾಣಿಸಿತ್ತು. KA 03 MZ ನಂಬರ್ ಪೊಲೀಸರಿಗೆ ಕಾಣಿಸಿತ್ತು. ಆ ಸೀರಿಸ್ ನ ನಂಬರ್ ಲಿಸ್ಟ್ ತೆಗೆಸಿಕೊಂಡ ಪೊಲೀಸರು ಅಂದಾಜಿನ ಮೇಲೆ ಕಾರಿನ ಮಾಲೀಕರ ಸಂಪರ್ಕ ಮಾಡಿದ್ದರು. ಆಗ ತನ್ನ ಭಾಮೈದ 15 ದಿನದಿಂದ ಕಾರು ತೆಗೆದುಕೊಂಡು ಹೋಗಿದ್ದಾನೆ ಎಂದು ಅವರು ಹೇಳಿದ್ದರು. ಆಗ ಪೊಲೀಸರಿಗೆ ಇದೇ ಕಾರಿನಲ್ಲಿ ಕಳ್ಳರು ಪಾಸ್ ಆಗಿರೋದು ಖಾತ್ರಿಯಾಗಿತ್ತು.
ನಂತರ ಕಳ್ಳರು 1 ಕೋಟಿ ರೂ. ಮೌಲ್ಯದ ಚಿನ್ನ ಹೊತ್ತು ಗೋವಾಗೆ ತೆರಳಿದ್ದರು. ಪೊಲೀಸರು ಎಲ್ಲಾ ಟೋಲ್ ಗಳಿಗೂ ಕಾರಿನ ನಂಬರ್ ನೀಡಿ ಮಾಹಿತಿ ನೀಡುವಂತೆ ಕೇಳಿದ್ದರು. ದಾವಣಗೆರೆ ಟೋಲ್ ಗೋವಾದಿಂದ ಬೆಂಗಳೂರಿನತ್ತ ಪಾಸ್ ಆಗಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಇದೊಂದು ಪ್ರೊಫೆಶನಲ್ ಕಳ್ಳರ ಕೈಚಳಕ ಎಂದುಕೊಂಡಿದ್ದ ಪೊಲೀಸರು ದಾವಣಗೆರೆಯಿಂದ ಎಲ್ಲಾ ಟೋಲ್ ನಲ್ಲೂ ಪೊಲೀಸ್ ಸಿಬ್ಬಂದಿಗಳನ್ನ ಮಫ್ತಿಯಲ್ಲಿ ಇರಿಸಿದ್ದರು. ಖಾಲಿ ರಸ್ತೆಯಲ್ಲಿ ಕಳ್ಳರನ್ನು ಹಿಡಿಯೋದು ಕಷ್ಟ ಎಂದು ಟೋಲ್ ನಲ್ಲಿ ಟಾರ್ಗೆಟ್ ಮಾಡಿದ್ದರು. ಅದರಂತೆ ಟೋಲ್ ನಲ್ಲಿದ್ದ ಸಿಬ್ಬಂದಿ ಆ ಕಾರನ್ನು ಟೋಲ್ ನಲ್ಲಿ ಜಾಮ್ ಮಾಡಿಸಿದ್ದರು. ಈ ವೇಳೆ ತುಮಕೂರು ಟೋಲ್ ಬಳಿ ಫುಲ್ ಜಾಮ್ ಮಾಡಿಸಿ ಆರೋಪಿಗಳ ಸೆರೆ ಹಿಡಿಯಲಾಗಿತ್ತು.
Karnataka Weather Today: ಕರ್ನಾಟಕಕ್ಕೆ ನಾಳೆಯಿಂದ ಹಿಂಗಾರು ಪ್ರವೇಶ; ಬೆಂಗಳೂರಿನಲ್ಲಿ ಇಂದು ಮಳೆ ಸಾಧ್ಯತೆ