ಬೆಂಗಳೂರು: ತನ್ನ ಜೊತೆಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ (Live-In-Relationship) ಮಹಿಳೆಯನ್ನು ಬೆಂಗಳೂರಿನ 42 ವರ್ಷದ ವ್ಯಕ್ತಿಯೊಬ್ಬರು ಸುತ್ತಿಗೆಯಿಂದ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ಚುಂಚಘಟ್ಟ ಮುಖ್ಯರಸ್ತೆಯ ಬೀರೇಶ್ವರನಗರದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮಂಜುನಾಥ್ ಎಂಬ ವ್ಯಕ್ತಿ 35 ವರ್ಷದ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಅವರು ತನ್ನ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಗೆ ಹೊಡೆದು, ಹತ್ಯೆ (Murder) ಮಾಡಿದ್ದಾರೆ ಎನ್ನಲಾಗಿದೆ. 35 ವರ್ಷದ ಮೃತ ಮಹಿಳೆ ಮಂಜುಳಾ ಎರಡು ಮಕ್ಕಳ ತಾಯಿಯಾಗಿದ್ದು, ಖಾಸಗಿ ವಿಮಾ ಕಂಪನಿಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಮಂಜುನಾಥ್ ಬಾರ್ ಬೆಂಡರ್ ಆಗಿ ಕೆಲಸ ಮಾಡುತ್ತಿದ್ದರು.
ಈ ಪ್ರಕರಣದ ಕುರಿತು ಮಾಹಿತಿಯನ್ನು ನೀಡಿರುವ ಪೊಲೀಸರು, ಆರೋಪಿಯು ಜನವರಿ 6ರಂದು ತಡರಾತ್ರಿ ಮಹಿಳೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದರು. ಅದರಿಂದ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದರು. ಅವಳು ಮದ್ಯ ಸೇವಿಸಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂದು ಹೇಳಿ ಜ. 7ರಂದು ಬೆಳಗ್ಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಆಕೆ ಸತ್ತಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆ ಮಹಿಳೆ ಕೆಲವು ಗಂಟೆಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ ನಂತರ ಆರೋಪಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಹೆಚ್ಚಿನ ವರದಿಗಳ ಪ್ರಕಾರ, ಮಂಜುಳಾ ಕಳೆದ 2 ವರ್ಷಗಳಿಂದ ಮಂಜುನಾಥ್ ಅವರೊಂದಿಗೆ ವಾಸಿಸುತ್ತಿದ್ದರು. ಅವರ ಪತಿ ಎಂಟು ವರ್ಷಗಳ ಹಿಂದೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಇದರ ಹಿಂದೆ ಮಂಜುಳಾ ಕೈವಾಡವಿರಬಹುದು ಎಂದು ಮಂಜುನಾಥನಿಗೆ ಅನುಮಾನವಿತ್ತು. ಈ ವಿಷಯದ ಬಗ್ಗೆ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು.
ಜನವರಿ 6ರಂದು ಮದ್ಯದ ಅಮಲಿನಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಈ ನಡುವೆ ಮಂಜುಳಾ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿದ ಮಂಜುನಾಥ್ ಆಕೆಯ ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದುಕೊಂಡಿದ್ದರಿಂದ ಆಕೆ ಸಾವನ್ನಪ್ಪಿದ್ದಾರೆ. ಇದಾದ ನಂತರ, ಆರೋಪಿಯು ತನ್ನ ಮನೆ ಮಾಲೀಕರನ್ನು ಸಂಪರ್ಕಿಸಿದ್ದರು. ಹಾಗೇ, ತನ್ನ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು.
ಶವಪರೀಕ್ಷೆ ವರದಿಯ ನಂತರ ಆಕೆಯನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ತನ್ನ ಸಂಗಾತಿಯನ್ನು ಕೊಂದ ನಂತರ ಸಾಕ್ಷ್ಯ ನಾಶಪಡಿಸಿದ ಆರೋಪವನ್ನೂ ಹೊರಿಸಲಾಗಿದೆ.
ಇದನ್ನೂ ಓದಿ: Murder: ಮಲಗಿದ್ದ ಮೂವರ ತಲೆಗೆ ಸುತ್ತಿಗೆಯಿಂದ ಹೊಡೆದು ಕಗ್ಗೊಲೆ; 19 ವರ್ಷದ ಯುವಕನ ಬಂಧನ
Murder: ಲವರ್ ಜೊತೆ ಮಾತಾಡಿದ್ದಕ್ಕೆ ಯುವಕನ ಕಗ್ಗೊಲೆ; ಹಂತಕನನ್ನು ಪತ್ತೆಹಚ್ಚಿದ್ದೇ ಒಂದು ರೋಚಕ ಕತೆ
Published On - 1:09 pm, Sat, 15 January 22