ನಂಬಿದವರು ಅಸಹಾಯಕ ಸ್ಥಿತಿಯಲ್ಲಿದ್ದಾಗಲೇ ಆ ಇಬ್ಬರು ವಿವಾಹಿತರ ಮಧ್ಯೆ ಪ್ರೇಮಾಂಕುರ! ಆಮೇಲೇನಾಯ್ತು?

| Updated By: Ganapathi Sharma

Updated on: Aug 09, 2024 | 12:19 PM

ಆ್ಯಪ್ ಮೂಲಕ ಪರಿಚಯವಾದ ಆ ಜೋಡಿಯದ್ದು ಸಮಾನ ದುಃಖ. ಆಕೆಯ ಗಂಡನಿಗೆ ಪ್ಯಾರಲಿಸಿಸ್, ಈತನ ಹೆಂಡತಿಗೂ ಪ್ಯಾರಲಿಸಿಸ್. ಪರಿಚಯ ಪ್ರೇಮಕ್ಕೆ ತಿರುಗಿತು. ಆಕೆ ಗಂಡನ ಬಿಟ್ಟು ಬರಲು ನಿರ್ಧರಿಸಿದರು. ಈತ ಹೆಂಡತಿಯ ಬಿಟ್ಟು ಬರಲು ಮುಂದಾದ. ಮದುವೆಗೆ ಕಾಸು ಹೊಂದಿಸಲು ಮನೆ ಕಳವು ಮಾಡಿದ ಜೋಡಿ ಈಗ ಬೆಂಗಳೂರು ಆಡುಗೋಡಿ ಪೊಲೀಸ್ ಬಲೆಗೆ ಬಿದ್ದಿದೆ. ವಿವರಗಳಿಗೆ ಮುಂದೆ ಓದಿ.

ನಂಬಿದವರು ಅಸಹಾಯಕ ಸ್ಥಿತಿಯಲ್ಲಿದ್ದಾಗಲೇ ಆ ಇಬ್ಬರು ವಿವಾಹಿತರ ಮಧ್ಯೆ ಪ್ರೇಮಾಂಕುರ! ಆಮೇಲೇನಾಯ್ತು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 9: ಜೋಡಿ ಆ್ಯಪ್​ನಲ್ಲಿ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿ ನಂತರ ಜೋಡಿಯಾಗಲು ಮುಂದಾದ ವಿವಾಹಿತರಿಬ್ಬರು ಮನೆ ಕಳವು ಮಾಡಿದ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ವರದಿಯಾಗಿದೆ. ವಿವಾಹಕ್ಕೆ ಹಣ ಹೊಂದಿಸಲು ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟ ಪ್ರೇಯಸಿ ಹಾಗೂ ಪ್ರಿಯಕರ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.

ನಡೆದಿದ್ದೇನು?

ಮೂಲತಃ ತಮಿಳುನಾಡಿನ ನಾರಾಯಣಸ್ವಾಮಿ (34) ಎಂಬಾತನಿಗೆ ಜೋಡಿ ಆ್ಯಪ್​ನಲ್ಲಿ ನವೀನಾ (39) ಎಂಬಾಕೆಯ ಪರಿಚಯವಾಗಿದೆ. ನಾರಾಯಣಸ್ವಾಮಿ ಹೆಂಡತಿಗೆ ಪ್ಯಾರಲಿಸಿಸ್ ಆಗಿತ್ತು. ನವೀನಾಳ ಗಂಡನಿಗೂ ಪ್ಯಾರಲಿಸಿಸ್ ಆಗಿತ್ತು. ಇಬ್ಬರ ಪರಿಚಯ ಕ್ರಮೇಣ ಪ್ರೇಮಕ್ಕೆ ತಿರುಗಿದೆ. ನಂತರ ಇಬ್ಬರೂ ಮಕ್ಕಳನ್ನ ಬಿಟ್ಟು ಮದುವೆಯಾಗುವ ನಿರ್ಧಾರ ಮಾಡಿದರು. ಇದಕ್ಕಾಗಿ ಹಣ ಹೊಂದಿಸುವುದೇ ಅವರಿಗೆ ಸಮಸ್ಯೆಯಾಗಿತ್ತು.

ಪ್ರೇಯಸಿ ಕೊಟ್ಟಳು ಐಡಿಯಾ!

ಮದುವೆಗಾಗಿ ಹಣ ಹೊಂದಿಸಬೇಕಾಗಿದ್ದ ಕಾರಣ ನಾರಾಯಣಸ್ವಾಮಿಗೆ ಪ್ರೇಯಸಿ ಕಳ್ಳತನದ ಐಡಿಯಾ ಕೊಟ್ಟಿದ್ದಾಳೆ. ಆರೋಪಿ ನಾರಾಯಣಸ್ವಾಮಿ ತಾಯಿ ಬೆಳ್ಳಿಯಮ್ಮ ಲಕ್ಕಸಂದ್ರದಲ್ಲಿ ಮನೆಕೆಲಸ ಮಾಡುತ್ತಿದ್ದರು. ತಾಯಿ ಕೆಲಸ ಮಾಡುತ್ತಿದ್ದ ಮನೆಗೆ ಆಗಾಗ ಹೋಗುತ್ತಿದ್ದ ನಾರಾಯಣಸ್ವಾಮಿ, ಆ ಮನೆಯಲ್ಲಿ ಚಿನ್ನಾಭರಣ ಇರುವ ಮಾಹಿತಿ ಸಂಗ್ರಹಿಸಿದ್ದಾನೆ. ಅದು ರಿಹಾನ್ ಅಸ್ಮ ಎಂಬುವವರಿಗೆ ಸೇರಿದ ಮನೆಯಾಗಿತ್ತು. ಮೊದಲೇ ಕಳವಿಗೆ ಸ್ಕೆಚ್ ಹಾಕಿದ್ದ ನಾರಾಯಣಸ್ವಾಮಿ ಆ ಮನೆಯಿಂದ ಸುಮಾರು 330 ಗ್ರಾಂ ಚಿನ್ನಾಭರಣ ಕದ್ದಿದ್ದಾನೆ. ಬಳಿಕ ಕದ್ದ ಚಿನ್ನವನ್ನು ಇಬ್ಬರೂ ಸೇರಿ ಹಲವೆಡೆ ಅಡವಿಟ್ಟಿದ್ದರು. ಸುಮಾರು 16 ಕಡೆ ಚಿನ್ನವನ್ನು ಅಡವಿಟ್ಟು ಹಣ ಪಡೆದಿದ್ದರು. ಆ ಹಣದೊಂದಿಗೆ ಹೆಂಡತಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಜೋಡಿ ಪರಾರಿಯಾಗಿತ್ತು. ಅಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.

ಇದನ್ನೂ ಓದಿ: ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ: ಕಾರಿನಲ್ಲಿ ರಾಸಲೀಲೆ

ಎರಡೂ ಮನೆಗಳಲ್ಲಿ ತಮ್ಮನ್ನು ನಂಬಿ ಬಂದಿದ್ದವರು ದುಃಖದ ಮಡುವಿನಲ್ಲಿರುವಾಗ, ಅದರ ಮಧ್ಯೆಯೇ ಇವರಿಬ್ಬರಲ್ಲಿ ಪ್ರೇಮಾಂಕುರವಾಗಿದ್ದು ನಿಜಕ್ಕೂ ಸೋಜಿಗವಾಗಿದೆ. ಆದರೆ, ಪ್ರಕರಣ ಇಷ್ಟಕ್ಕೇ ಮುಗಿದಿಲ್ಲ. ಈ ಮಧ್ಯೆ, ರಿಹಾನ್ ಅಸ್ಮ ಕುಟುಂಬದವರು ನಾರಾಯಣಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಜೋಡಿಯನ್ನು ಪತ್ತೆಮಾಡಿ ಕರೆತಂದು ವಿಚಾರಣೆ ನಡೆಸಿದ ಪೊಲೀಸರಿಗೆ ಸತ್ಯಾಂಶ ಗೊತ್ತಾಗಿದೆ. ಬಂಧಿತ ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ