‘ಬೆಂಗಳೂರಿಗರಿಗೆ ಬಸ್ಸುಗಳು ಬೇಡವೇ?’: ಇ-ಬಸ್ ವಿಳಂಬ ನೀತಿ ವಿರುದ್ಧ ಜೆಡಿಎಸ್ ಕೆಂಡಾಮಂಡಲ!

ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರಿಗೆ ಮಂಜೂರಾಗಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಜಾರಿಗೆ ಕ್ಯಾಬಿನೆಟ್ ಅನುಮೋದನೆ ನೀಡದ ಕಾಂಗ್ರೆಸ್ ಸರ್ಕಾರದ ವಿಳಂಬ ನೀತಿಯನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ. ವಾರ್ಷಿಕ 1,000 ಕೋಟಿ ರೂ. ನಷ್ಟದ ಭೀತಿಯಿಂದ ಸರ್ಕಾರ ಹಿಂದೇಟು ಹಾಕುತ್ತಿದ್ದರೆ, ಇತ್ತ ಜೆಡಿಎಸ್ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಎಕ್ಸ್ ಖಾತೆಯಲ್ಲಿ ವಾಗ್ದಾಳಿ ನಡೆಸಿದೆ.

ಬೆಂಗಳೂರಿಗರಿಗೆ ಬಸ್ಸುಗಳು ಬೇಡವೇ?: ಇ-ಬಸ್ ವಿಳಂಬ ನೀತಿ ವಿರುದ್ಧ ಜೆಡಿಎಸ್ ಕೆಂಡಾಮಂಡಲ!
ಇ-ಬಸ್ ವಿಳಂಬ ನೀತಿ ವಿರುದ್ಧ ಜೆಡಿಎಸ್ ಕೆಂಡಾಮಂಡಲ!
Edited By:

Updated on: Jul 12, 2026 | 11:39 AM

ಮುಖ್ಯಾಂಶಗಳು

  • ಕೇಂದ್ರದ ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಲಾಗಿದೆ.
  • ಭಾರಿ ಆರ್ಥಿಕ ನಷ್ಟದ ಭೀತಿಯಿಂದಾಗಿ ರಾಜ್ಯ ಸರ್ಕಾರ ಅನುಮೋದನೆ ವಿಳಂಬಗೊಳಿಸಿದೆ.
  • ಕಾಂಗ್ರೆಸ್ ಸರ್ಕಾರದ ನಿರಾಸಕ್ತಿ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಜುಲೈ 12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಇ-ಡ್ರೈವ್’ (PM E-Drive) ಯೋಜನೆಯಡಿ ಒಟ್ಟು 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಇದಕ್ಕೆ ಪೂರಕವಾಗಿ 1,505 ಕೋಟಿ ರೂ. ಭಾರಿ ಸಹಾಯಧನವನ್ನೂ ಘೋಷಿಸಲಾಗಿದೆ. ಆದರೆ, ಕೇಂದ್ರದ ಈ ಬೃಹತ್ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಕ್ಯಾಬಿನೆಟ್‌ನಲ್ಲಿ ಇನ್ನೂ ಅನುಮೋದನೆ ನೀಡದೆ ವಿಳಂಬ ಮಾಡುತ್ತಿರುವುದು ಈಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಬಗ್ಗೆ ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದೆ.

ಎಕ್ಸ್ (X) ಖಾತೆಯಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

ರಾಜ್ಯ ಸರ್ಕಾರದ ಈ ನಿಲುವನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್, ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸಿದೆ. “60% ಖ್ಯಾತಿಯ ‘ಕಮಿಷನ್’ ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕ ಸಾರಿಗೆಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ” ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ಈ ಯೋಜನೆ ಮಂಜೂರಾಗಿದ್ದು, 2025ರಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಫೈಲ್ ಧೂಳು ಹಿಡಿಯುತ್ತಿರುವುದೇಕೆ ಎಂದು ಪ್ರಶ್ನಿಸಿದೆ. ಹೈದರಾಬಾದ್, ಸೂರತ್, ಅಹಮದಾಬಾದ್ ನಗರಗಳು ಈಗಾಗಲೇ ಕಾರ್ಯಾದೇಶ ನೀಡಿ ಮುನ್ನುಗ್ಗುತ್ತಿದ್ದರೆ, ನಮ್ಮ ‘ಸೋಮಾರಿ’ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆಗಾಗಿ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ ದೂರಿದೆ.

“ಡಿ.ಕೆ.ಶಿವಕುಮಾರ್ ಅವರೇ, ಬೆಂಗಳೂರಿನ ಜನರಿಗೆ ಬಸ್ಸುಗಳು ಬೇಡವೇ? ಸಹಾಯಧನವನ್ನೂ ಬಳಸಿಕೊಳ್ಳದ ನಿಮ್ಮ ಆಡಳಿತ ವೈಫಲ್ಯಕ್ಕೆ ಏನನ್ನಬೇಕು? ಬಸ್ಸುಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿಗರು ನಿಮ್ಮನ್ನು ಕ್ಷಮಿಸಲ್ಲ” ಎಂದು ಜೆಡಿಎಸ್ ಎಚ್ಚರಿಸಿದ್ದು, ಸರ್ಕಾರದ ಈ ನಿರಾಸಕ್ತಿಗೆ ಕನ್ನಡಿಗರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ ಕರ್ನಾಟಕದ ವಿಳಂಬ ನೀತಿ: ಕೇಂದ್ರದಿಂದ ಬೆಂಗಳೂರಿಗೆ ಸಿಗಲಿದ್ದ 4500 ಇ-ಬಸ್ ಬೇರೆ ರಾಜ್ಯಗಳ ಪಾಲಾಗುವ ಆತಂಕ!

ಯೋಜನೆಯಿಂದ ರಾಜ್ಯಕ್ಕೆ ಆರ್ಥಿಕ ಹೊರೆ

ಕೇಂದ್ರದ ಈ ಇ-ಬಸ್ ಯೋಜನೆಗೆ ಒಪ್ಪಿಗೆ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದಿನ ಆರ್ಥಿಕ ಕಾರಣಗಳನ್ನು ನೀಡಿದ್ದ ಸಾರಿಗೆ ಸಚಿವ ಭೈರತಿ ಸುರೇಶ್ , ಕೇಂದ್ರದ ಕಠಿಣ ನಿಯಮಾವಳಿಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಈ ತೊಂದರೆಯನ್ನು ನೀಗಿಸುವುದಿಲ್ಲ ಎಂದೂ ಸಹ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಹಾಯಧನವನ್ನೂ ಬಳಸಿಕೊಳ್ಳಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Sun, 12 July 26

Follow Us