ಬೆಂಗಳೂರಿಗರ ಅಕ್ಟೋಬರ್​ ವಿದ್ಯುತ್ ಬಿಲ್​ನಲ್ಲಿ ಏರುಪೇರಾಗೋ ಸಾಧ್ಯತೆ! ಕಾರಣ ಇಲ್ಲಿದೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ಈ ತಿಂಗಳ ಬಿಲ್ ವಿತರಣೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಿದ್ದು, ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇಂಧನ ಇಲಾಖೆ ತನ್ನ ಐಟಿ ವಿಭಾಗದ ಪ್ರಮುಖ ಸಾಫ್ಟ್‌ವೇರ್ ಅಪ್‌ಗ್ರೇಡ್ ಕಾರ್ಯಕ್ಕೆ ಮುಂದಾಗಿದೆ. ಹಾಗಾದರೆ ಬಿಲ್ ವಿತರಣೆಯಲ್ಲಿ ಆಗುತ್ತಿರುವ ಬದಲಾವಣೆ ಏನು, ಗ್ರಾಹಕರು ತಿಳಿದುಕೊಳ್ಳಬೇಕಿರುವುದು ಏನು? ಇಲ್ಲಿದೆ ವಿವರ.

ಬೆಂಗಳೂರಿಗರ ಅಕ್ಟೋಬರ್​ ವಿದ್ಯುತ್ ಬಿಲ್​ನಲ್ಲಿ ಏರುಪೇರಾಗೋ ಸಾಧ್ಯತೆ! ಕಾರಣ ಇಲ್ಲಿದೆ
ಬೆಂಗಳೂರಿಗರ ಅಕ್ಟೋಬರ್​ ವಿದ್ಯುತ್ ಬಿಲ್​ನಲ್ಲಿ ಏರುಪೇರಾಗೋ ಸಾಧ್ಯತೆ! ಕಾರಣ ಇಲ್ಲಿದೆ

Updated on: Oct 04, 2025 | 7:24 AM

ಬೆಂಗಳೂರು, ಅಕ್ಟೋಬರ್ 4: ಗ್ರೇಟರ್ ಬೆಂಗಳೂರು (GBA) ವ್ಯಾಪ್ತಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಬಳಕೆ ಮಾಡಿದ ಗ್ರಾಹಕರಿಗೆ ವಿತರಣೆಯಾಗುವ ಬಿಲ್​ನಲ್ಲಿ ಕೊಂಚ ಏರುಪೇರು ಆಗಬಹುದು. ಏಕೆಂದರೆ, ಇಂಧನ ಇಲಾಖೆ ಅಡಿಯ ಬೆಸ್ಕಾಂ (BESCOM) ತನ್ನ ಐಟಿ ವಿಭಾಗದ ಪ್ರಮುಖ ಸಾಫ್ಟ್‌ವೇರ್ ಅಪ್‌ಗ್ರೇಡ್ ಕಾರ್ಯಕ್ಕೆ ಮುಂದಾಗಿದ್ದು, ಮೀಟರ್ ರೀಡರ್‌ಗಳು ವಾಸ್ತವ ಮಾಸಿಕ ಬಳಕೆಯ ಆಧಾರದ ಮೇಲೆ ಬಿಲ್‌ಗಳನ್ನು ಲೆಕ್ಕ ಹಾಕಲು ಸದ್ಯ ಸಾಧ್ಯವಾಗುತ್ತಿಲ್ಲ. ಅದರ ಪರಿಣಾಮವಾಗಿ, ಸೆಪ್ಟೆಂಬರ್ ತಿಂಗಳಲ್ಲಿ ಬಳಕೆಯಾದ ವಿದ್ಯುತ್ ಬಿಲ್‌ಗಳು ಅಕ್ಟೋಬರ್ ಮೊದಲಾರ್ಧದಲ್ಲಿ ಹಿಂದಿನ ಮೂರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಈ ಲೆಕ್ಕಾಚಾರವು ಜೂನ್ 2025 ರಿಂದ ಆರಂಭವಾಗಲಿದೆ.

ಅಕ್ಟೋಬರ್ 1 ರಿಂದ 15 ರವರೆಗೆ ಈ ಪ್ರದೇಶಗಳಲ್ಲಿ ಮೀಟರ್ ರೀಡರ್‌ಗಳು ಭೌತಿಕವಾಗಿ ರೀಡಿಂಗ್‌ಗಳನ್ನು ಪಡೆಯುವುದಿಲ್ಲ. ಆದರೆ, ಇದು ತಾತ್ಕಾಲಿಕ ಕ್ರಮ ಮಾತ್ರ. ಸಿಸ್ಟಮ್ ಅಪ್‌ಗ್ರೇಡ್‌ಗೂ ನಡುವೆಯೂ ಬಿಲ್ ವಿತರಣೆಯು ನಿರಂತರವಾಗಿರಲಿದೆ ಎಂದು ಅಧಿಕೃತ ಹೇಳಿಕೆ ಸ್ಪಷ್ಟಪಡಿಸಿದೆ. ಗ್ರಾಹಕರು ತಮ್ಮ ಬಿಲ್‌ಗಳನ್ನು ಬೆಸ್ಕಾಂ ಮಿತ್ರ ಆ್ಯಪ್, ಯುಪಿಐ ಆ್ಯಪ್‌ಗಳು ಅಥವಾ ಹತ್ತಿರದ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಪಾವತಿ ಮಾಡಬಹುದು ಅಂತ ಬೆಸ್ಕಾಂ ಸ್ಪಷ್ಟಪಡಿಸಿದೆ.

ಗೃಹ ಜ್ಯೋತಿ ಫಲಾನುಭವಿಗಳಿಗೆ ಆತಂಕ ಬೇಡ: ಬೆಸ್ಕಾಂ

ಈ ಬದಲಾವಣೆಗಳು ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಮಾತ್ರ ಅನ್ವಯಿಸುತ್ತವೆ. ಇತರೆ ನಗರ ಪ್ರದೇಶಗಳ ಗ್ರಾಹಕರು ತಮ್ಮ ನಿಯಮಿತ ಬಿಲ್‌ಗಳನ್ನು ಬಂದಂತೆ ಪಡೆಯುತ್ತಾರೆ ಅಂತ ಹೇಳಲಾಗಿದೆ. ಅಲ್ಲದೆ ಗೃಹಜ್ಯೋತಿ ಫಲಾನುಭವಿಗಳು ಸೇರಿ ಯಾವುದೇ ವರ್ಗದ ಗ್ರಾಹಕರಿಗೂ ಬದಲಾವಣೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ತಿಳಿಸಲಾಗಿದ್ದು, ಸಾಧ್ಯವಾದಷ್ಟು ವಾಸ್ತವಿಕ ಮೀಟರ್ ರೀಡಿಂಗ್ ಅಂದರೆ, ಸೆಪ್ಟೆಂಬರ್ ತಿಂಗಳ ಮೀಟರ್ ರೀಡಿಂಗ್ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ