AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಟ್​ ಟ್ಯಾಪಿಂಗ್​ ರಸ್ತೆಗಳಲ್ಲೆಲ್ಲ ಶೀಘ್ರ ಪೇ ಆ್ಯಂಡ್​ ಪಾರ್ಕಿಂಗ್​? ದುಬಾರಿ ವೆಚ್ಚ ಸರಿದೂಗಿಸಲು ಜಿಬಿಎ ಹೊಸ ಪ್ಲಾನ್

ಬೆಂಗಳೂರಿನಲ್ಲಿ ಸದ್ಯ ಜನಸಂಖ್ಯೆಗಿಂತ ಹೆಚ್ಚಾಗಿ ವಾಹನಗಳೇ ವಿಪರೀತವಾಗಿ ಹೋಗಿದ್ದು, ವಾಹನ ದಟ್ಟಣೆ ನಿಯಂತ್ರಣವೇ ಕಷ್ಟಕರವಾಗಿದೆ. ಜೊತೆಗೆ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ ಕೂಡ ಗಂಭೀರವಾಗಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದಕ್ಕೆ ಪರಿಹಾರ ಹುಡುಕಲು ಮುಂದಾಗಿದ್ದು, ಜತೆಗೆ ಪರ್ಯಾಯ ಆದಾಯದ ಮೂಲ ಹುಡುಕಲು ತೀರ್ಮಾನಿಸಿದೆ. ಎಲ್ಲಾ ವೈಟ್​ ಟ್ಯಾಪಿಂಗ್​ ರಸ್ತೆಗಳಲ್ಲೂ ಪೇ ಆ್ಯಂಡ್​ ಪಾರ್ಕಿಂಗ್ ಪರಿಚಯಿಸುವ ಸಾಧ್ಯತೆಯಿದೆ.

ವೈಟ್​ ಟ್ಯಾಪಿಂಗ್​ ರಸ್ತೆಗಳಲ್ಲೆಲ್ಲ ಶೀಘ್ರ ಪೇ ಆ್ಯಂಡ್​ ಪಾರ್ಕಿಂಗ್​? ದುಬಾರಿ ವೆಚ್ಚ ಸರಿದೂಗಿಸಲು ಜಿಬಿಎ ಹೊಸ ಪ್ಲಾನ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: Oct 04, 2025 | 7:44 AM

Share

ಬೆಂಗಳೂರು, ಅಕ್ಟೋಬರ್ 4: ಬೆಂಗಳೂರು (Bengaluru) ಸಂಚಾರ ಪೊಲೀಸರ ಮಾಹಿತಿ ಪ್ರಕಾರ ನಗರದಲ್ಲಿ 1.20 ಕೋಟಿ ವಾಹನಗಳಿದ್ದು, ಟ್ರಾಫಿಕ್​ ಜಾಮ್​ ಜೊತೆಗೆ ಪಾರ್ಕಿಂಗ್​ ಸಮಸ್ಯೆಯೂ ಬಿಗಡಾಯಿಸಿಕೊಂಡಿದೆ. ಇನ್ನು ನಗರದ ಹಲವು ಪ್ರಮುಖ ರಸ್ತೆಗಳು ವೈಟ್​ ಟ್ಯಾಪಿಂಗ್​ ಆಗಿದ್ದು, ಬಹುತೇಕ ಎಲ್ಲಾ ರಸ್ತೆಗಳನ್ನೂ ವೈಟ್​ ಟ್ಯಾಪಿಂಗ್​ ಮಾಡಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ (GBA) ಗುರಿ ಇಟ್ಟುಕೊಂಡಿದೆ. ಆದರೆ ಸಾಮಾನ್ಯ ರಸ್ತೆಗಳಿಗಿಂತ ವೈಟ್​ ಟ್ಯಾಪಿಂಗ್ ರಸ್ತೆಗಳು ಹತ್ತು ಪಟ್ಟು ದುಬಾರಿಯಾಗಿರುವ ಕಾರಣ, ಪರ್ಯಾಯ ರೂಪದಲ್ಲಿ ಆದಾಯ ಹೊಂದಿಸಿಕೊಳ್ಳಲು ಚಿಂತನೆ ನಡೆಸಿದೆ. ಅದರಂತೆ ಕೆಲವೇ ವೈಟ್​ ಟ್ಯಾಪಿಂಗ್​ ರಸ್ತೆಗಳಲ್ಲಿದ್ದ ಪೇ ಆ್ಯಂಡ್​ ಪಾರ್ಕಿಂಗ್​ ವ್ಯವಸ್ಥೆಯನ್ನು ಎಲ್ಲಾ ಕಡೆಯೂ ವಿಸ್ತರಣೆ ಮಾಡಲು ಮುಂದಾಗಿದೆ.

ವೈಟ್ ಟಾಪ್ ರಸ್ತೆ ನಿರ್ಮಾಣಕ್ಕೆ ತಗಲಿರುವ ಖರ್ಚುವೆಚ್ಚ ಮತ್ತು ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ. ಇದುವರೆಗೆ ನಗರದ ಸುಮಾರು 150 ಕಿಲೋಮೀಟರ್ ರಸ್ತೆಗಳನ್ನು ವೈಟ್ ಟಾಪ್ ಮಾಡಲಾಗಿದ್ದು, ಸದ್ಯ, 1,194 ಕಿಲೋಮೀಟರ್ ರಸ್ತೆಗಳನ್ನು, ನೋ ಪಾರ್ಕಿಂಗ್ ಪ್ರದೇಶ ಎಂದು ಗುರುತಿಸಲಾಗಿದೆ. ಟೆಂಡರ್ ಶ್ಯೂರ್ ಮತ್ತು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ರಸ್ತೆಗಳನ್ನು ಸಹ ಈ ಪಾರ್ಕಿಂಗ್ ವ್ಯವಸ್ಥೆ ಅಡಿಗೆ ತರುವ ಚಿಂತನೆ ನಡೆದಿದೆ.

ಪೇ ಆ್ಯಂಡ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರ ಅಕ್ಟೋಬರ್​ ವಿದ್ಯುತ್ ಬಿಲ್​ನಲ್ಲಿ ಏರುಪೇರಾಗೋ ಸಾಧ್ಯತೆ! ಕಾರಣ ಇಲ್ಲಿದೆ

ಒಟ್ಟಿನಲ್ಲಿ, ಬಸ್, ಮೆಟ್ರೋ, ಆಟೋ ದರ ದುಬಾರಿಯಾದ ಬೆನ್ನಲ್ಲೇ ತಮ್ಮ ತಮ್ಮ ವಾಹನಗಳನ್ನೇ ಬಳಸಿ ರಸ್ತೆಗಿಳಿಯುತ್ತಿದ್ದ ಸವಾರರಿಗೆ ಎಲ್ಲೆಡೆ ಜಾರಿ ಮಾಡಲು ಉದ್ದೇಶಿಸಿರುವ ಪೇ ಆ್ಯಂಡ್ ಪಾರ್ಕಿಂಗ್ ಯೋಜನೆ ಭಾರವೇ ಆಗಲಿದೆ. ಈ ಮೂಲಕ ನಾಗರಿಕರು ಮತ್ತೊಂದು ರೀತಿಯ ಹಣ ಪಾವತಿಗೆ ಸಿದ್ಧರಾಗಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ