Bengaluru: ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ

| Updated By: ganapathi bhat

Updated on: Oct 07, 2021 | 10:45 PM

ಬೆಂಗಳೂರು: ನಗರದಲ್ಲಿ ಇತ್ತೀಚೆಗಷ್ಟೇ ಕಟ್ಟಡ ಕುಸಿತ ಕೆಲವು ಘಟನೆಗಳು ನಡೆದಿದ್ದವು. ಲಕ್ಕಸಂದ್ರ ಹಾಗೂ ಡೇರಿ ಸರ್ಕಲ್ ಭಾಗದಲ್ಲಿ ಎರಡು ಕಟ್ಟಡಗಳು ಕುಸಿತವಾಗಿದ್ದವು. ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೂಚನೆ ಕೊಟ್ಟಿದ್ದರು.

Bengaluru: ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ
5 ಅಂತಸ್ತಿನ ಕಟ್ಟಡ ಕುಸಿತ
Follow us on

ಬೆಂಗಳೂರು: ಬೆಂಗಳೂರಿನ ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಏಕಾಏಕಿ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ನಗರದಲ್ಲಿ ಇತ್ತೀಚೆಗಷ್ಟೇ ಕಟ್ಟಡ ಕುಸಿತ ಕೆಲವು ಘಟನೆಗಳು ನಡೆದಿದ್ದವು. ಲಕ್ಕಸಂದ್ರ ಹಾಗೂ ಡೇರಿ ಸರ್ಕಲ್ ಭಾಗದಲ್ಲಿ ಎರಡು ಕಟ್ಟಡಗಳು ಕುಸಿತವಾಗಿದ್ದವು. ಈ ಘಟನೆಗಳ ಬಳಿಕ, ಸರ್ಕಾರ ಮತ್ತು ಬಿಬಿಎಂಪಿ ಎಚ್ಚೆತ್ತುಕೊಂಡಿತ್ತು. ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೂಚನೆ ಕೊಟ್ಟಿದ್ದರು.

ನಗರದ ನಾಗರಬಾವಿಯಲ್ಲಿ ಕಟ್ಟಡ ವಾಲಿದ ಪ್ರಕರಣ ಇತ್ತೀಚೆಗಷ್ಟೇ ನಡೆದಿತ್ತು. ಘಟನೆಗೆ ಸಂಬಂಧಿಸಿ ಬಿಬಿಎಂಪಿ ವಲಯ ಆಯುಕ್ತ ರೆಡ್ಡಿ ಶಂಕರ್‌ ಬಾಬು ಪ್ರತಿಕ್ರಿಯೆ ನೀಡಿದ್ದರು. ಮೇಲ್ನೋಟಕ್ಕೆ ಅನುಮತಿ ಪಡೆದಿರುವಂತೆ ಕಾಣುತ್ತಿಲ್ಲ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಾಲೀಕರಿಗೆ ಕಟ್ಟಡ ತೆರವು ಮಾಡಲು ಸೂಚನೆ ನೀಡ್ತೇವೆ. ಮಾಲೀಕರು ಕಟ್ಟಡ ತೆರವು ಮಾಡದಿದ್ದರೆ ನಾವೇ ಮಾಡ್ತೇವೆ. ರಾಜಕಾಲುವೆ ಬಳಿ ಮನೆ ನಿರ್ಮಿಸಿರುವವರಿಗೆ ಎಲ್ಲರಿಗೂ ನೋಟಿಸ್​ ಕೊಡುತ್ತೇವೆ ಎಂದು ಶಂಕರ್ ಬಾಬು ಹೇಳಿದ್ದರು. ಇಲ್ಲಿ ಯಾರು ಪರ್ಮಿಷನ್ ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತನಿಖೆ ಮಾಡಬೇಕಿದೆ. ಈಗ ಪಕ್ಕದಲ್ಲಿ ಗಾರ್ಡನ್ ಇದೆ. ಪಕ್ಕ ರಾಜಕಾಲುವೆ ಇದೆ. ಇದರ ನಡುವೆ ಮನೆ ಕಟ್ಟಿದ್ದಾರೆ ಎಂಬ ಬಗ್ಗೆ ತಿಳಿಸಿದ್ದರು.

ಕಸ್ತೂರಿ ನಗರ ಕಟ್ಟಡ ಕುಸಿತ ಪ್ರಕರಣ; ಸಹಾಯಕ ಇಂಜಿನಿಯರ್ ಅಮಾನತು
ಕಸ್ತೂರಿ ನಗರ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಸಂಜೆ ಸಹಾಯಕ ಇಂಜಿನಿಯರ್ ಶಂಕರಪ್ಪ ಅಮಾನತು ಮಾಡಿ ಆದೇಶಿಸಲಾಗಿದೆ. ಡಾಕ್ಟರ್ಸ್ ಲೇಔಟ್, ಚನ್ನಸಂದ್ರ, ಕಸ್ತೂರಿ ನಗರ, ಬೆನಗಾನಹಳ್ಳಿ ವಾರ್ಡ್ ಸಂಖ್ಯೆ-50 ವ್ಯಾಪ್ತಿಯಲ್ಲಿ ಕಟ್ಟಡ ಕುಸಿದಿದೆ. ಈ ಸಂಬಂಧ, ಕಟ್ಟಡದ ಮಾಲೀಕರಿಂದ ಪಾಲಿಕೆಯಿಂದ ಅನುಮತಿ ಪಡೆದಿರುವ ನಕ್ಷೆ ಮಂಜೂರಾತಿಗಿಂತಲೂ ಹೆಚ್ಚುವರಿ ಮಹಡಿಯನ್ನು ನಿರ್ಮಾಣ ಮಾಡಲಾಗಿರುವುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಸಹಾಯಕ ಅಭಿಯಂತರರಾದ ಶಂಕರಪ್ಪ ಕರ್ತವ್ಯಲೋಪ ಪತ್ತೆಯಾಗಿದ್ದು, ಶಂಕರಪ್ಪ ಅಮಾನತು ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ 185 ಶಿಥಿಲ ಕಟ್ಟಡಗಳು: ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು ನಗರದಲ್ಲಿ ಸುಮಾರು 185 ಶಿಥಿಲ ಕಟ್ಟಡಗಳಿವೆ ಎಂದು 2019ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ತಿಳಿದುಬಂದಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದರು. ಈ ಕಟ್ಟಡಗಳ ಪೈಕಿ ಕೇವಲ 10 ಕಟ್ಟಡಗಳನ್ನು ಮಾತ್ರ ಈವರೆಗೆ ಒಡೆಯಲಾಗಿದೆ. ಶಿಥಿಲಗೊಂಡಿರುವ 175 ಕಟ್ಟಡಗಳು ಹಾಗೆಯೇ ಇವೆ. ಶಿಥಿಲ ಎಂದು ಗುರುತಿಸಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುತ್ತೇವೆ. ಬೆಸ್ಕಾಂಗೆ ಪತ್ರ ಬರೆದು ವಿದ್ಯುತ್ ಕಡಿತ ಮಾಡುತ್ತೇವೆ. ಕಟ್ಟಡಗಳ ಮಾಲೀಕರು ಇಷ್ಟಕ್ಕೆ ಅವಕಾಶ ನೀಡದೆ ಸ್ವತಃ ತಾವೇ ತೆರವುಗೊಳಿಸಲು ಮುಂದಾಗಬೇಕು ಎಂದು ಅಶೋಕ್ ಸಲಹೆ ನೀಡಿದ್ದರು.

ಶಿಥಿಲಗೊಂಡಿರುವ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಬೇಕು. ನೋಟಿಸ್ ನೀಡದಿದ್ದರೆ ಬಿಬಿಎಂಪಿ ಜಂಟಿ ಆಯುಕ್ತರೇ ಹೊಣೆಯಾಗಬೇಕಾಗುತ್ತದೆ. ನೋಟಿಸ್ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದರು. ಶಿಥಿಲ ಕಟ್ಟಡದ ಬಗ್ಗೆ ಸಾರ್ವಜನಿಕರು ಕೂಡ ಮಾಹಿತಿ ನೀಡಬಹುದು ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Bengaluru: ನಾಗರಬಾವಿಯಲ್ಲಿ ಕಟ್ಟಡ ವಾಲಲು ಕಾರಣವೇನು? ಪ್ರಕರಣದ ಬಗ್ಗೆ ಮನೆ ಮಾಲೀಕರ ಪ್ರತಿಕ್ರಿಯೆ ಇಲ್ಲಿದೆ

ಇದನ್ನೂ ಓದಿ: ಏಳಂತಸ್ತಿನ ಕಟ್ಟಡ ಅನಾಮತ್ತಾಗಿ ಕುಸಿದರೂ ಪ್ರಾಣಹಾನಿ ಸಂಭವಿಸದಿರುವುದು ಪವಾಡವೇ ಸರಿ

Published On - 4:59 pm, Thu, 7 October 21