
ಬೆಂಗಳೂರು, ಜುಲೈ 19: ಬೆಂಗಳೂರು (Bengaluru) ಮಹಾನಗರದಲ್ಲಿ ಏಳು ವರ್ಷಗಳ ಬಳಿಕ ಹೋರ್ಡಿಂಗ್ಗಳು (Hoarding) ಮತ್ತೆ ಕಾಣಿಸಿಕೊಳ್ಳಲಿವೆ. ಸರ್ಕಾರವೇ ಏಳು ವರ್ಷಗಳ ಹಿಂದೆ ನಿಷೇಧ ಹೇರಿದ್ದ ಹೋರ್ಡಿಂಗ್ ಬಳಕೆಗೆ ಮತ್ತೆ ಅನುಮತಿ ನೀಡಿದೆ. ಆದರೆ, ಈ ಬಾರಿ ಬೇಕಾಬಿಟ್ಟಿಯಾಗಿ ಹೋರ್ಡಿಂಗ್ಸ್ ಮತ್ತು ಜಾಹೀರಾತುಗಳ ಅಳವಡಿಕೆ ಇರುವುದಿಲ್ಲ. ತಮಗೆ ಬೇಕಾದ ಸ್ಥಳ, ಬೇಕಾದ ರೀತಿಯಲ್ಲೂ ಹೋರ್ಡಿಂಗ್ಸ್ ಮತ್ತು ಜಾಹೀರಾತು ಹಾಕುವ ಹಾಗಿಲ್ಲ. ಇದಕ್ಕಾಗಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ಹೊಸ ನಿಯಮ ಜಾರಿಗೆ ಮಾಡಲಾಗಿದೆ.
18 ರಿಂದ 24 ಮೀಟರ್‌ವರೆಗಿನ ವಿಸ್ತೀರ್ಣದ ರಸ್ತೆಗಳಲ್ಲಿ ಪ್ರತಿ 200 ಮೀಟರ್ ಉದ್ದದವರೆಗೆ ಜಾಹೀರಾತು ಅಳವಡಿಸಲು ಅವಕಾಶ ನೀಡಲಾಗಿದೆ. 24 ಮೀಟರ್‌ನಿಂದ 30 ಮೀ.ವರೆಗಿನ ರಸ್ತೆಗಳಲ್ಲಿ 1000 ಚದರ ಅಡಿ, 30 ರಿಂದ 60 ಮೀ.ವರೆಗಿನ ರಸ್ತೆಗಳಲ್ಲಿ1100 ಚದರ ಅಡಿ, 60 ಮೀಟರ್ ಮೇಲ್ಪಟ್ಟ ರಸ್ತೆಗಳಲ್ಲಿ 1200 ಚದರ ಅಡಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮುಖ್ಯರಸ್ತೆಗಳು, ಕಟ್ಟಡಗಳ ಮೇಲೂ ಜಾಹೀರಾತು ಪ್ರದರ್ಶನ ಮಾಡಬಹುದು. ಕೆಲ ಸ್ಥಳಗಳಲ್ಲಿ ಮಾತ್ರ ಜಾಹೀರಾತಿಗೆ ಸರ್ಕಾರ ನಿಷೇಧ ಹೇರಿದೆ.
ರಾಜ್ಯ ಸರ್ಕಾರ2008 ರಿಂದ ಜಾಹೀರಾತು ಪ್ರದರ್ಶನ ನಿಷೇಧ ಹೇರಿತ್ತು. ಇದೀಗ ಜಾಹೀರಾತು ಮಾಫಿಯಾಗೆ ಮತ್ತೆ ಮಣೆ ಹಾಕಲಾಗಿದೆ. ಸರ್ಕಾರ ಆಗಸ್ಟ್ನಲ್ಲಿ ಟೆಂಡರ್ ಕರೆಯಲಿದ್ದಾರೆ. ಹೊಸ ಜಾಹೀರಾತು ನೀತಿ ಪ್ರಕಾರ ಮಾರ್ಗಸೂಚಿ ದರದ ಮೇಲೆ ಜಾಹೀರಾತು ಶುಲ್ಕ ನಿಗದಿ ಮಾಡಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ 5 ಲಕ್ಷ ರೂ. ಶುಲ್ಕ ಪಾವತಿಸಬೇಕು. ಮುಖ್ಯವಾಗಿ ಪರಿಷರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು, ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ಪಡೆದ ದರದ ಎರಡು ಪಟ್ಟು ದಂಡ ಪಾವತಿಸಬೇಕಾಗುತ್ತದೆ.
ಅನಧಿಕೃತ ಜಾಹೀರಾತು ತೆರವು ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ನಗರದಲ್ಲಿರುವ ಅಂಗಡಿ–ಮಳಿಗೆಗಳು 150 ಚದರಡಿವರೆಗೆ ಉಚಿತವಾಗಿ ಜಾಹೀರಾತು ಫಲಕ ಅಳವಡಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ
ವಿಧಾನಸೌಧ, ಹೈಕೋರ್ಟ್, ಕುಮಾರಕೃಪ, ರಾಜಭವನ ಸುತ್ತಮುತ್ತ ಜಾಹೀರಾತು ನಿಷೇಧಿಸಲಾಗಿದೆ. ವಿಧಾನಸೌಧ, ಹೈಕೋರ್ಟ್, ಕುಮಾರ ಕೃಪಾ ರಸ್ತೆ, ರಾಜಭವನ ಸುತ್ತಮುತ್ತ, ಸ್ಯಾಂಕಿ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್ ಬಾಗ್ ಆವರಣ, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಅರಮನೆ ರಸ್ತೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚ್, ಮಸೀದಿಗೆ ಹೋಗುವ ರಸ್ತೆ ಮತ್ತು ಸುತ್ತಮುತ್ತಲಿಮ ಪ್ರದೇಶನದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.
ವರದಿ: ಶಾಂತಮೂರ್ತಿ, ಟವಿ9 ಬೆಂಗಳೂರು