ಇನ್ಮುಂದೆ ಹೋಟೆಲ್‌ಗಳಲ್ಲಿ ಟೀ, ಕಾಫಿ ಹೀರುತ್ತಾ ಟೈಮ್ ಪಾಸ್ ಮಾಡಿದ್ರೆ ಬೀಳುತ್ತೆ ದಂಡ

ಬೆಂಗಳೂರಿನಲ್ಲಿ ಇತ್ತೀಚೆಗೆ ಹೊಸದೊಂದು ತಲೆನೋವು ಎದುರಾಗಿದ್ದು, ಒಂದಷ್ಟು ಗ್ರಾಹಕರು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಕಾಫಿ, ಟೀ, ತಿಂಡಿಗೆಂದು ಬಂದವರಿಂದ ಹೋಟೆಲ್​ಗಳಲ್ಲಿ ಅನಗತ್ಯ ಕಾಲಹರಣ ಒಂದಷ್ಟು ಕಡೆಗಳಲ್ಲಿ ಹೆಚ್ಚಾಗುತ್ತಿದೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಟೇಬಲ್ ಹಾಕಲು ಚಿಂತನೆ ನಡೆದಿದೆ. ಕೆಲವರು ಒಂದು ಟೀಗಾಗಿ ಗಂಟೆಗಟ್ಟಲೇ ಟೈಮ್ ಪಾಸ್ ಮಾಡ್ತಾರೆ. ಹೀಗಾಗಿ ಇದಕ್ಕೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಇನ್ಮುಂದೆ ಹೋಟೆಲ್‌ಗಳಲ್ಲಿ ಟೀ, ಕಾಫಿ ಹೀರುತ್ತಾ ಟೈಮ್ ಪಾಸ್ ಮಾಡಿದ್ರೆ ಬೀಳುತ್ತೆ ದಂಡ
ಪ್ರಾತಿನಿಧಿಕ ಚಿತ್ರ

Updated on: Feb 10, 2026 | 8:31 PM

ಬೆಂಗಳೂರು, (ಫೆಬ್ರವರಿ 10): ಸಿಲಿಕಾನ್ ಟಿಸಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಹೆಚ್ಚುತ್ತಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ (hotel) ಗ್ರಾಹಕರು ತಾಸುಗಟ್ಟಲೆ ಕೂತು ಕಾಲಹರಣ ಮಾಡುವ ಪ್ರವೃತ್ತಿ ಹೋಟೆಲ್ ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹೌದು…ಮಾತುಕತೆಗಾಗಿ ನೆಪಕ್ಕೆ ಎರಡು ಟೀ, ಕಾಫಿ ತಗೊಂಡು ಗಂಟೆ ಗಟ್ಟಲೇ ಕುಳಿತು ಟೈಮ್ ಪಾಸ್ ಮಾಡುತ್ತಾರೆ. ಇದಕ್ಕೆ ಪರಿಹಾರವಾಗಿ, ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ‘ಟೇಬಲ್ ಚಾರ್ಜ್’ ಅಥವಾ ದಂಡ ವಿಧಿಸುವ ಕುರಿತು ಹೋಟೆಲ್ ಮಾಲೀಕರ ಸಂಘ ಹೊಸ ಚಿಂತನೆ ನಡೆಸಿದ್ದು, ‘ಟೇಬಲ್ ಚಾರ್ಜ್’ ಹೆಸರಿನಲ್ಲಿ 500ರಿಂದ 1000 ರೂ.ವರೆಗೆ ದಂಡ ವಿಧಿಸಲು ಮುಂದಾಗಿದೆ.

ಪಾರ್ಕಿಂಗ್ ಚಾರ್ಜ್ ರೀತಿ ಟೇಬಲ್ ಚಾರ್ಜ್

ಬೆಂಗಳೂರಿನಲ್ಲಿ ಹೋಟೆಲ್​ ಮಾಲೀಕರು ಇತ್ತೀಚೆಗೆ ಹೊಸದೊಂದು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಬೆಂಗಳೂರಿನ ಸಣ್ಣ ಹಾಗೂ ಮಧ್ಯಮ ಹೋಟೆಲ್‌ಗಳಲ್ಲಿ ಗ್ರಾಹಕರು ಗಂಟೆಗಟ್ಟಲೆ ಕಾಲಹರಣ ಮಾಡುವುದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ. ಊಟ, ತಿಂಡಿ, ಕಾಫಿ ಎಂದು ಹೋಟೆಲ್​ನತ್ತ ಆಗಮಿಸುವ ಕೆಲ ಗ್ರಾಹಕರು ಇವೆಲ್ಲಾ ಮುಗಿದ ಬಳಿಕವೂ ಎದ್ದು ಹೋಗುತ್ತಿಲ್ಲ. ಕಾಫಿ, ಟೀ, ತಿಂಡಿಗೆ ಬರುವ ಗ್ರಾಹಕರಿಂದ ಗಂಟೆಗಟ್ಟಲೆ ನಾನಾ ವಿಚಾರಗಳ ಮಾತುಕತೆ ಆಗುತ್ತೆ.  ಭೂ ವ್ಯವಹಾರ, ರಿಯಲ್ ಎಸ್ಟೇಟ್, ರಾಜಕೀಯ ಇತ್ಯಾದಿ ವಿಚಾರಗಳ ಬಗ್ಗೆ ಹರಟೆ ಹೊಡೆಯುವ ಹಿನ್ನೆಲೆ ಇತರೆ ಗ್ರಾಹಕರಿಗೆ ಹೋಟೆಲ್​ಗಳಲ್ಲಿ ಸ್ಥಳಾವಕಾಶ ಸಿಗದೇ ವಾಪಸ್ ಹೋಗುತ್ತಾರೆ. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಪಾರ್ಕಿಂಗ್ ಚಾರ್ಜ್ ರೀತಿ ಟೇಬಲ್ ಚಾರ್ಜ್ ಹಾಕುವುದಕ್ಕೆ ಚಿಂತನೆ ನಡೆಸಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ

ಸದ್ಯ ಅನಗತ್ಯ ವಿಚಾರ ಚರ್ಚೆ ಮಾಡುತ್ತಾ ಕಾಲಹರಣ ಮಾಡಿ ಇತರರಿಗೆ ತೊಂದರೆ ನೀಡುವ ಗ್ರಾಹಕರಿಗೆ ಹೋಟೆಲ್ ಸಿಬ್ಬಂದಿ ಮನವಿ ಮಾಡುತ್ತಿದ್ದು, ಸಮಸ್ಯೆ ಮತ್ತಷ್ಟು ಗಂಭೀರ ಹಂತ ತಲುಪಿದರೆ ಟೇಬಲ್ ಚಾರ್ಜ್ ವಸೂಲಿ ಮಾಡಲು ಹೋಟೆಲ್​ ಮಾಲೀಕರ ಸಂಘ ತೀರ್ಮಾನಿಸಿದೆ.

ಈ ನಿರ್ಧಾರವನ್ನು ಅಧಿಕೃತವಾಗಿ ಜಾರಿಗೆ ತರಲು ಸರ್ಕಾರಕ್ಕೆ ಶೀಘ್ರದಲ್ಲೇ ಪತ್ರ ಬರೆದು ಅನುಮತಿ ಪಡೆಯಲು ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಒಪ್ಪಿಗೆ ದೊರೆತರೆ, ಈ ನಿಯಮವನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲೂ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹೇಳಿದ್ದೇನು?

ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್, ಹೋಟೆಲ್‌ಗಳಲ್ಲಿ ಒಂದು ಟೀ ಕುಡಿದು ಗಂಟೆಗಟ್ಟಲೆ ಕುಳಿತು ಸಭೆಗಳು ನಡೆಸುತ್ತಾರೆ. ಇದರಿಂದ ಇತರ ಗ್ರಾಹಕರಿಗೆ ತೊಂದರೆ ಆಗುವುದಲ್ಲದೆ, ನಮ್ಮ ವ್ಯಾಪಾರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ 500 ರಿಂದ 1,000 ರೂ.ವರೆಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us