
ಬೆಂಗಳೂರು, ಡಿ.16: ಇತ್ತೀಚಿನ ದಿನಗಳಲ್ಲಿ ಪೊಲೀಸರು ಕಳ್ಳತನ ಮಾಡುತ್ತಿದ್ದಾರೆ. ಹಾಗೂ ವಸೂಲಿ ಮಾಡಲು ಇಳಿದಿದ್ದರೆ ಎಂಬೆಲ್ಲ ಆರೋಪ ಕೇಳಿ ಬರುತ್ತಿದ್ದಂತೆ, ಇದಕ್ಕೆ ಮತ್ತೊಂದು ಪ್ರಕರಣವೂ ಸೇರಿಕೊಂಡಿತ್ತು. ಬೆಂಗಳೂರಿನ ಹೋಟೆಲ್‌ನಲ್ಲಿ ಪಾರ್ಟಿ (Bengaluru hotel incident) ಮಾಡುತ್ತಿದ್ದ ವೇಳೆ ಪೊಲೀಸರು ಹಣ ಕೇಳಿದ್ದಕ್ಕಾಗಿ ಭಯಗೊಂಡ ವೈಷ್ಣವಿ ಎಂಬ ಯುವತಿ ಬಾಲ್ಕನಿಯಿಂದ ಜಿಗಿದು ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ ಸಿಕ್ಕಿದೆ. ವೈಷ್ಣವಿ ಪೊಲೀಸರು ಬಂದು ಹಣ ಕೇಳಿದ್ರು ಎಂಬ ಕಾರಣಕ್ಕೆ ಹೋಟೆಲ್ನ ಬಾಲ್ಕನಿಯಿಂದ ಹಾರಿದ್ದಾಳೆ ಎಂದು ಕೇಳಿ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಕಳೆದ ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಕುಂದಲಹಳ್ಳಿಯ ಎಇಸಿಎಸ್ ಲೇಔಟ್ ನ ಸೀ ಎಸ್ಟಾ ಹೋಟೆಲ್ನ ನಾಲ್ಕನೇ ಮಹಡಿಯಿಂದ ಜಿಗಿದು, ವೈಷ್ಣವಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೀಗ ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಿದೆ. 4 ಜನ ಯುವಕರು 4 ಜನ ಯುವತಿಯರು ಸೇರಿದಂತೆ 8 ಜನ ಇದ್ದ ಹೋಟೆಲ್ ರೂಮ್ಗೆ ಬಂದಿದ್ದ ಹೊಯ್ಸಳ ಸಿಬ್ಬಂದಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಕ್ಕೆ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಯುವತಿ ಮತ್ತು ಆಕೆಯ ಸ್ನೇಹಿತರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದಂತೆ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಪರಶುರಾಮ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ-ಯುವತಿಯರು,ಹೋಟೆಲ್ ಸಿಬ್ಬಂದಿಗಳು ಸೇರಿದಂತೆ ಹೊಯ್ಸಳ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಯುವಕರು ಹಾಗೂ ಹೊಯ್ಸಳ ಸಿಬ್ಬಂದಿಗಳ ಮಾತುಕತೆ ಸೆರೆಯಾಗಿದ್ದ ಬಾಡಿವೋರ್ನ್ ಕ್ಯಾಮೆರ ವಶಕ್ಕೆ ಪಡೆದು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಹಣ ಕೇಳಿದ್ದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ.ಕೇವಲ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ವೈಯಕ್ತಿಕ ಮಾಹಿತಿ ಪಡೆದುಕೊಂಡಿರುವ ವಿಡಿಯೋ ಇದರಲ್ಲಿ ಸೆರೆಯಾಗಿದೆ.
ಹಾಗಾದ್ರೆ ಯುವಕ,ಯುವತಿಯರು ಇದ್ದ ಹೋಟೆಲ್ ಗೆ ಪೊಲೀಸರು ಹೋಗಿದ್ಯಾಕೆ? ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಹೋಟೆಲ್ ರೂಮ್ ನಂಬರ್ 403ರಲ್ಲಿ 8 ಜನ (4 ಯುವಕರು, 4ಯುವತಿಯರು) ಪಾರ್ಟಿ ಮಾಡಿಕೊಂಡು, ಜೋರಾಗಿ ಮ್ಯೂಸಿಕ್ ಹಾಕಿಕೊಂಡು, ಎಂಜಾಯಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮ್ಯೂಸಿಕ್ನ ಸೌಂಡ್ನಿಂದ ಅಕ್ಕಪಕ್ಕ ರೂಮ್ನವರಿಗೆ ತೊಂದರೆ ಆಗಿದೆ. ಈ ಬಗ್ಗೆ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಆದರೆ ಇದಕ್ಕೆ ಯುವಕರು ಕ್ಯಾರೆ ಎಂದಿಲ್ಲ. ಕೊನೆಗೆ ಅಕ್ಕಪಕ್ಕ ರೂಮ್ನವರು 112ಗೆ ಕರೆ ಮಾಡಿ ತಿಳಿಸಿದ್ದಾರೆ. ಮುಂಜಾನೆ 5.50 ಸುಮಾರಿಗೆ ಬಂದ ಹೆಚ್ಎಎಲ್ ಠಾಣೆ ಹೊಯ್ಸಳ ಸಿಬ್ಬಂದಿ, ರೂಮ್ಗೆ ತೆರಳಿ, ವೈಯಕ್ತಿಯ ಮಾಹಿತಿ ಪಡೆದು ಬುದ್ಧಿ ಹೇಳಿದ್ದಾರೆ. ಈ ಎಲ್ಲ ಘಟನೆಯಾದ ನಂತರ ಕಂಪ್ಲೆಂಟ್ ಕ್ಲೋಸ್ ಮಾಡಲು ನಾಲ್ಕನೇ ಫ್ಲೋರ್ ನಿಂದ ಇಬ್ಬರು ಯುವಕರನ್ನು ರಿಸಪ್ಷನ್ ಗೆ ಕರೆದುಕೊಂಡು ಬಂದು ಮಾತನಾಡುತ್ತಿರುವಾಗ ನಾಲ್ಕನೇ ಫ್ಲೋರ್ ನಿಂದ ವೈಷ್ಣವಿ ಕೆಳಗೆ ಜಿಗಿದಿದ್ದಾಳೆ. ಕೆಳಗೆ ಬಿದ್ದ ಪರಿಣಾಮ ಕಾಂಪೌಂಡ್ ಗೆ ಅಳವಡಿಸಿದ್ದ ಗ್ರಿಲ್ ನ ಚೂಪಾದ ಸರಳುಗಳು ಆಕೆಯ ದೇಹಕ್ಕೆ ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಪಾರ್ಟಿ ಮಾಡುತ್ತಿದ್ದವರ ಬಳಿ ಹಣ ಕೇಳಿದ ಪೊಲೀಸರು; ಹೆದರಿ ಬಿಲ್ಡಿಂಗ್ನಿಂದ ಕೆಳಗೆ ಹಾರಿದ ಯುವತಿ?
ನಂತರ ಈ ವಿಚಾರ ತಿಳಿದು ವೈಷ್ಣವಿಯ ತಂದೆ ಹೆಚ್ಎಎಲ್ ಠಾಣೆಗೆ ಖಾಸಗಿ ಹೋಟೆಲ್ ವಿರುದ್ಧ ದೂರು ನೀಡಿದ್ದಾರೆ. ಪಾರ್ಟಿಯಲ್ಲಿದ್ದ ಯುವತಿಯ ಸ್ನೇಹಿತರು,ಹೋಟೆಲ್ ಸಿಬ್ಬಂದಿ,ಪೊಲೀಸರ ವಿಚಾರಣೆ ನಡೆಸಲಾಗಿದೆ. ಇನ್ನು ಪೊಲೀಸರ ಪರಿಶೀಲನೆ ವೇಳೆ ಹೋಟೆಲ್ ಮಾಲೀಕರು ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)ಯಿಂದ ಅನುಮತಿ ಪಡೆದಿಲ್ಲ ಎಂಬದು ತಿಳಿದು ಬಂದಿದೆ. ಇದೀಗ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಬಿಎಗೆ ಹೇಳಲಾಗಿದೆ. ಇನ್ನು ಯುವತಿ ತಂದೆ ಮಾಡಿದ ಆರೋಪಕ್ಕೆ ಪೊಲೀಸರು, ಹಣ ಕೇಳಿದ್ರೆ ಅದಕ್ಕೆ ಸರಿಯಾದ ದಾಖಲೆಗಳನ್ನು ನೀಡಿ, ಖಂಡಿತ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ